ಕಲಬುರಗಿ: ಇಲ್ಲಿನ ಗುಲಬರ್ಗಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಜಿಮ್ಸ್) ಆಸ್ಪತ್ರೆಯ ಶಸ್ತ್ರ ಚಿಕಿತ್ಸೆ ನಂತರದ ವಾರ್ಡ್‌ನ (429) ಐಸಿಯುನಲ್ಲಿ ವಿದ್ಯುತ್ ಸ್ಥಗಿತದಿಂದ ಕೆಲ ನಿಮಿಷಗಳು ವೆಂಟಿಲೇಟರ್‌ಗಳು ಬಂದ್ ಆಗಿದ್ದರಿಂದ ಆಮ್ಲಜನಕ ಸಿಗದೆ ರೋಗಿಗಳು ಪರದಾಡಿದರು.
ಶನಿವಾರ ಮಧ್ಯಾಹ್ನ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರು ಜಿಮ್ಸ್‌ಗೆ ಭೇಟಿ ನೀಡಿ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನೆ ಸಂಬಂಧ ಕಾಮಗಾರಿ ಪರಿಶೀಲನೆ ನಡೆಸಿದ್ದರು. ಅದೇ ದಿನ ಸಂಜೆ 7ರಿಂದ 7.30ರ ನಡುವೆ ಆಸ್ಪತ್ರೆಯ ವಿದ್ಯುತ್ ಸಂಪರ್ಕ ಕಡಿತದಿಂದ ವೆಂಟಿಲೇಟರ್‌ಗಳು ಬಂದ್ ಆಗಿವೆ.
4ನೇ ಮಹಡಿಯಲ್ಲಿನ 429ನೇ ವಾರ್ಡ್‌ನ ಐಸಿಯುನ 1 ಮತ್ತು 2ನೇ ಬೆಡ್‌ಗಳ ವೆಂಟಿಲೇಟರ್‌ಗಳು ಕೆಲ ನಿಮಿಷದ ಬಳಿಕ ಬ್ಯಾಟರಿ ಸಾಮರ್ಥ್ಯ ಇಲ್ಲದೆ ಸ್ಥಗಿತವಾದವು. ಶ್ವಾಸಕೋಶ ಸಮಸ್ಯೆಯಿಂದ ದಾಖಲಾದ ಚಿತ್ತಾಪುರ ತಾಲ್ಲೂಕಿನ ಮಹಿಳಾ ರೋಗಿ ಹಾಗೂ ಕ್ಯಾನ್ಸರ್ ಕಾಯಿಲೆಯಿಂದ ದಾಖಲಾಗಿದ್ದ ಸೇಡಂ ತಾಲ್ಲೂಕಿನ ಪುರುಷ ರೋಗಿಗಳಿಗೆ ತೊಂದರೆಯಾಯಿತು ಎಂದು ರೋಗಿಯ ಸಂಬಂಧಿಕರೊಬ್ಬರು ತಿಳಿಸಿದರು.
ರೋಗಿಗಳು ಪರದಾಡುತ್ತಿದ್ದಂತೆ ನರ್ಸ್‌ಗಳು ಬೈನ್ ಸರ್ಕ್ಯೂಟ್ ಮೂಲಕ ಆಕ್ಸಿಜನ್ ಕೊಡುವಲ್ಲಿ ನಿರತರಾದರು. ವಿದ್ಯುತ್ ಬರುವವರೆಗೂ ಬೈನ್ ಸರ್ಕ್ಯೂಟ್ ಬಳಕೆ ಮುಂದುವರಿಸಿದರು. ವೆಂಟಿಲೇಟರ್ ಸ್ಥಗಿತದಿಂದ ರೋಗಿಗಳ ಸಂಬಂಧಿಕರು ನರ್ಸ್‌ಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಿರುವ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಆಸ್ಪತ್ರೆಯ ಈ ನಡೆಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಶಸ್ತ್ರ ಚಿಕಿತ್ಸೆ ನಂತರದ ವಾರ್ಡ್ ಮುಂಭಾಗದ ಮತ್ತೊಂದು ಐಸಿಯುನಲ್ಲಿಯೂ ಇಂತಹುದೇ ಘಟನೆ ನಡೆದಿತ್ತು. ವಿಷ ಕುಡಿದು ಐಸಿಯುಗೆ ದಾಖಲಾಗಿದ್ದ ಶಹಾಪುರ ತಾಲ್ಲೂಕಿನ ರೋಗಿ ವೆಂಟಿಲೇಟರ್ ಬಂದ್ ಆಗಿ ತೊಂದರೆ ಅನುಭವಿಸಿದರು. ಸಹೋದರ, ನರ್ಸ್‌ಗಳ ಗಮನಕ್ಕೆ ತಂದ ನಂತರ ಬೈನ್ ಸರ್ಕ್ಯೂಟ್ ಮುಖೇನ ಆಕ್ಸಿಜನ್ ನೀಡಲಾಯಿತು ಎಂದು ರೋಗಿಯ ಅಟೆಂಡರ್ ಹೇಳಿದರು.
ಆಸ್ಪತ್ರೆಯಲ್ಲಿ ಐಸಿಯು ಸೇರಿದಂತೆ ಇತರೆ ಬೆಡ್‌ಗಳು ಹೆಚ್ಚಾಗಿದ್ದರಿಂದ ವಿದ್ಯುತ್ ಒತ್ತಡವೂ ಹೆಚ್ಚಾಗಿ ಸ್ಥಗಿತವಾಗಿವೆ. ರೋಗಿಗಳಿಗೆ ಯಾವುದೇ ತೊಂದರೆ ಆಗಿಲ್ಲ. ಕೂಡಲೇ ವೆಂಟಿಲೇಟರ್ ಪ್ಯಾನಲ್‌ಗಳನ್ನು ಬದಲಾಯಿಸುವಂತೆ ಸೂಚಿಸಿದ್ದೇನೆಡಾ.ಶರಣಪ್ರಕಾಶ ಪಾಟೀಲ ವೈದ್ಯಕೀಯ ಶಿಕ್ಷಣ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.