ADVERTISEMENT

ಕೆಕೆಆರ್‌ಡಿಬಿ ಅಧ್ಯಕ್ಷ ಸ್ಥಾನ ಸಚಿವರಿಗೆ ಕೊಡಿ: ಲಕ್ಷ್ಮಣ ದಸ್ತಿ ಆಗ್ರಹ

ಕಲ್ಯಾಣ ಕರ್ನಾಟಕ ಜನಪರ ಸಂಘರ್ಷ ಸಮಿತಿ ಅಧ್ಯಕ್ಷ ಲಕ್ಷ್ಮಣ ದಸ್ತಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 23 ಮೇ 2023, 14:28 IST
Last Updated 23 ಮೇ 2023, 14:28 IST
ಲಕ್ಷ್ಮಣ ದಸ್ತಿ
ಲಕ್ಷ್ಮಣ ದಸ್ತಿ   

ಕಲಬುರಗಿ: ‘ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ(ಕೆಕೆಆರ್‌ಡಿಬಿ) ಅಧ್ಯಕ್ಷ ಸ್ಥಾನವನ್ನು ಶಾಸಕರಿಗೆ ಕೊಡುವುದು ಸೂಕ್ತವಲ್ಲ, ಸಚಿವರಿಗೆ ಕೊಡಬೇಕು’ ಎಂದು ಕಲ್ಯಾಣ ಕರ್ನಾಟಕ ಜನಪರ ಸಂಘರ್ಷ ಸಮಿತಿ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ ದಸ್ತಿ ಆಗ್ರಹಿಸಿದರು.

‘ಹಿಂದಿನ ಸರ್ಕಾರದಲ್ಲಿ ಕೆಕೆಆರ್‌ಡಿಬಿ ಅಧ್ಯಕ್ಷ ಸ್ಥಾನವನ್ನು ಶಾಸಕರಿಗೆ ನೀಡುವ ತಿದ್ದುಪಡಿಯನ್ನು ರದ್ದು ಮಾಡಿ ಸಚಿವರನ್ನೇ ಅಧ್ಯಕ್ಷರನ್ನಾಗಿಸಬೇಕು. ಇದರಿಂದ ಮಂಡಳಿಯ ಬಲವರ್ಧನೆ ಹೆಚ್ಚಿಸುವುದರ ಜೊತೆಗೆ ಪರಿಣಾಮಕಾರಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಅನುಕೂಲ ಆಗುತ್ತದೆ’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ನೂತನ ಸರ್ಕಾರದಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ 8 ಸಚಿವ ಸ್ಥಾನಗಳನ್ನು ಕಡ್ಡಾಯವಾಗಿ ನೀಡಲೇಬೇಕು. ಇದಕ್ಕೆ ನಮ್ಮ ಭಾಗದವರೇ ಆದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಸಂವಿಧಾನದ 371 (ಜೆ) ಕಲಂ ತಿದ್ದುಪಡಿಯಡಿ ಅಸ್ತಿತ್ವಕ್ಕೆ ಬಂದಿರುವ ಕೆಕೆಆರ್‌ಡಿಬಿ ಸ್ವಾಯತ್ತ ಅಭಿವೃದ್ಧಿ ಮಂಡಳಿಯಾಗಿದೆ. ಆದರೆ, ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಇದುವರೆಗೂ ಕ್ರಿಯಾಯೋಜನೆ ರೂಪಿಸಿಲ್ಲ. ಹಾಗಾಗಿ, 10 ವರ್ಷದ ಗುರಿ ಇಟ್ಟುಕೊಂಡು ಕಲ್ಯಾಣದ ಅಭಿವೃದ್ಧಿಗೆ ವೈಜ್ಞಾನಿಕ ಕ್ರಿಯಾಯೋಜನೆ ರೂಪಿಸಿ ಕಾಲಮಿತಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕು’ ಎಂದರು.

‘ಡಾ. ನಂಜುಂಡಪ್ಪ ವರದಿ ಮಾನದಂಡವನ್ನು ಆಧಾರವಾಗಿಟ್ಟುಕೊಂಡು ಒಂದು ಗ್ರಾಮ ಪಂಚಾಯಿತಿ ಸೂಚ್ಯಂಕ ಮಾಡಿಕೊಂಡು ಕಲ್ಯಾಣ ಕರ್ನಾಟಕ ವರದಿ ತಯಾರಿಸಿ ಆ ವರದಿಯ ಆಧಾರದ ಮೇಲೆ ವೈಜ್ಞಾನಿಕ ಕ್ರಿಯಾಯೋಜನೆ ರೂಪಿಸಬೇಕು’ ಎಂದರು.

‘ರಾಜ್ಯಮಟ್ಟದ ಮೆರಿಟ್‌ ಕೋಟಾದಲ್ಲಿ ನೇಮಕವಾದ 4,194 ಪ್ರಾಥಮಿಕ ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಹೈಕೋರ್ಟ್‌ನಲ್ಲಿ ಪ್ರಶ್ನಿಸಿ ದಾವೆ ಹೂಡಿರುವ ವಿಷಯಕ್ಕೆ ಸಂಬಂಧಿಸಿದಂತೆ ಸರ್ಕಾರ ನೂತನ ಅಡ್ವೋಕೇಟ್‌ ಜನರಲ್‌ ಅವರ ಮೂಲಕ ನ್ಯಾಯ ಒದಗಿಸಬೇಕು. ಇನ್ನು 371 (ಜೆ) ಅಡಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು. ಅದರಂತೆ ಮುಂಬಡ್ತಿ ನೀಡುವಲ್ಲಿ ಒಂದು ದಿನವೂ ತಡವಾಗಬಾರದು’ ಎಂದು ಒತ್ತಾಯಿಸಿದರು.

‘371 (ಜೆ) ಕಲಂ ಪರಿಣಾಮಕಾರಿ ಅನುಷ್ಠಾನಕ್ಕೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸಬೇಕು. ವರ್ಷದಲ್ಲಿ ಎರಡು ಬಾರಿ ಸಚಿವ ಸಂಪುಟ ಸಭೆಗಳನ್ನು ಕಲಬುರಗಿಯಲ್ಲಿ ನಡೆಸಬೇಕು’ ಎಂದು ಅವರು ಆಗ್ರಹಿಸಿದರು.

ಲಿಂಗರಾಜ ಸಿರಗಾಪುರ, ಮನಿಷ್‌ ಜಾಜು, ಡಾ. ಮಾಜಿದ್‌ ಡಾಗಿ, ಶಿವಲಿಂಗಪ್ಪ ಬಂಡಕ, ಅಸ್ಲಂ ಚೊಂಗೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.