
ಅಫಜಲಪುರ: ತಾಲ್ಲೂಕಿನ ದೇವಲ ಗಾಣಗಾಪುರದ ದತ್ತಾತ್ರೇಯ ಮಹಾರಾಜರ ದೇವಸ್ಥಾನದಲ್ಲಿ ದತ್ತಾತ್ರೇಯ ಮಹಾರಾಜರ ಎರಡನೇ ಅವತಾರ ಪುರುಷರಾದ ನರಸಿಂಹ ಸರಸ್ವತಿ ಮಹಾರಾಜರ ಉತ್ಸವ ನಿಮಿತ್ತ ಗುರುವಾರ ಗೋಪಾಲ ಕಾವಲಿ (ಮೊಸರು ಗಡಿಗೆ ಒಡೆಯುವ ಕಾರ್ಯಕ್ರಮ) ಹಾಗೂ ಪಲ್ಲಕ್ಕಿ ಉತ್ಸವ ಸಾವಿರಾರು ಯಾತ್ರಿಕರ ಮಧ್ಯೆ ಅದ್ದೂರಿಯಾಗಿ ಜರುಗಿತು.
ಗೋಪಾಲ ಕಾವಲಿ ಹಾಗೂ ಪಲ್ಲಕ್ಕಿ ಉತ್ಸವದ ಹಿನ್ನೆಲೆಯಲ್ಲಿ ಬೆಳಿಗ್ಗೆ 2 ಗಂಟೆಗೆ ಸಾಲಕಾರಿ ಪೂಜಾರಿಯಿಂದ ನಿರ್ಗುಣ ಪಾದುಕೆಗಳಿಗೆ ಕೇಸರ ಚಂದನ ಅತ್ತರ ಲೇಪನ, 6ಕ್ಕೆ ಮಹಾಮಂಗಳಾರತಿ, 10 ಗಂಟೆಗೆ ನೈವೇದ್ಯ ಅರ್ಪಣೆ ಕಾರ್ಯಕ್ರಮಗಳು ಜರುಗಿತು.
ಗುರುವಾರ ದೇವಸ್ಥಾನದ ಎದುರಲ್ಲಿ ಶೃಂಗಾರ ಮಾಡಿ ಕಟ್ಟಲಾಗಿದ್ದ ಎರಡು ಮೊಸರು ತುಂಬಿರುವ ಗಡಿಗೆಗಳನ್ನು ಮಧ್ಯಾಹ್ನ 12 ಗಂಟೆಗೆ ಅರ್ಚಕರು ಬೆಳ್ಳಿ ಬೆತ್ತುಗಳಿಂದ ಒಡೆಯುವ ಮೂಲಕ ಗೋಪಾಲ ಕಾವಲಿ ಕಾರ್ಯಕ್ರಮ ಜರುಗಿತು.
ದೇವಸ್ಥಾನದ ಅರ್ಚಕರ ಸಂಘದ ಸಾಲಕಾರಿ ಪೂಜಾರಿ ಪ್ರಿಯಾಂಕ್ ಭಟ್ ಪೂಜಾರಿ ಮಾಹಿತಿ ನೀಡಿ, ‘ಮಹಾರಾಜರು ಐದು ದಿನಗಳ ಹಿಂದೆ ಗುಪ್ತವಾಗಿ ಶ್ರೀಶೈಲದ ಕದಳಿ ವನಕ್ಕೆ ಹೋಗುವುದಾಗಿ ಹಾಗೂ ಐದು ದಿನಗಳ ನಂತರ ಮತ್ತೆ ದೇವಲಗಾಣಗಾಪುರಕ್ಕೆ ಮರಳುವುದಾಗಿ ಹೇಳಿ ಹೋಗಿದ್ದರ ನೆನಪಿಗಾಗಿ ಗುರುವಾರ ಗೋಪಾಲ ಕಾವಲಿ ಹಾಗೂ ಪಲ್ಲಕ್ಕಿ ಉತ್ಸವ ನಡೆಯಿತು’ ಎಂದು ತಿಳಿಸಿದರು.
ದತ್ತ ದೇವಸ್ಥಾನದಿಂದ ಭೀಮಾ ನದಿಯಲ್ಲಿರುವ ರುದ್ರಪಾದ ತೀರ್ಥಕ್ಕೆ ಪಲ್ಲಕ್ಕಿ ಕೊಂಡೊಯ್ದು ಅಲ್ಲಿ ರುದ್ರಪಾದ ತೀರ್ಥದ ಮೇಲೆ ಪಲ್ಲಕ್ಕಿ ಇಟ್ಟು, ನರಸಿಂಹ ಸರಸ್ವತಿ ಅವರ ಬೆಳ್ಳಿ ಪಾದುಕೆಗಳಿಗೆ ಸ್ನಾನ ಮಾಡಿಸಿ ಅಲ್ಲಿಂದ ಮತ್ತೆ ಪಲ್ಲಕ್ಕಿಯಲ್ಲಿ ಇರಿಸಿ ಜೈಘೋಷ, ಭಜನೆಯೊಂದಿಗೆ ದತ್ತಾತ್ರೇಯ ದೇವಸ್ಥಾನಕ್ಕೆ ತರಲಾಯಿತು.
‘ಭೀಮಾ– ಅಮರ್ಜಾ ಸಂಗಮದಲ್ಲಿ ನರಸಿಂಹ ಸರಸ್ವತಿ ಮಹಾರಾಜರು ತಪಸ್ಸು ಮಾಡಿದ್ದು, ಹೀಗಾಗಿ ಯಾತ್ರಿಕರು ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿ ಅವರ ದರ್ಶನ ಪಡೆಯುತ್ತಾರೆ. ಕಳೆದ ಎರಡು ದಿನಗಳಿಂದ ಸಂಗಮದಲ್ಲಿ ಪುಣ್ಯಸ್ನಾನ ಆರಂಭವಾಗಿದ್ದು, ಅದಕ್ಕಾಗಿ ಎಲ್ಲಾ ವ್ಯವಸ್ಥೆಯನ್ನು ಮಾಡಲಾಗಿದೆ’ ಎಂದು ಅಲ್ಲಿಯ ವ್ಯವಸ್ಥಾಪಕ ಮಡಿವಾಳಪ್ಪ ವಡಿಗೇರಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಸಾಲಕಾರಿ ಪೂಜಾರಿಗಳಾದ ವಿನಾಯಕ ಭಟ್ ಪೂಜಾರಿ, ಉದಯ ಭಟ್ ಪೂಜಾರಿ, ವಿಶಾಲ್ ಭಟ್ ಪೂಜಾರಿ, ಸಚಿನ್ ಪೂಜಾರಿ, ಪ್ರಸನ್ನ ಪೂಜಾರಿ, ಪ್ರಖ್ಯಾತ ಪೂಜಾರಿ ಮತ್ತು ಸಮಿತಿಯ ಕಾರ್ಯನಿರ್ವಾಹಕ ಅಧಿಕಾರಿ ಶಿವಕಾಂತಮ್ಮ, ಗ್ರಾಮ ಪಂಚಾಯಿತಿಯವರು ಮತ್ತು ಅಪಾರ ಭಕ್ತರು ಪಾಲ್ಗೊಂಡಿದ್ದರು.
ಭೀಮಾ–ಅಮರ್ಜಾ ಸಂಗಮದಲ್ಲಿ ಭಕ್ತರಿಂದ ಪುಣ್ಯಸ್ನಾನ ದತ್ತಾತ್ರೇಯ ಎರಡನೇ ಅವತಾರವಾಗಿರುವ ನರಸಿಂಹ ಸರಸ್ವತಿ
ದರ್ಶನಕ್ಕಾಗಿ ಭಕ್ತರ ಹರಸಾಹಸ ಮೊಸರಗಡಿಗೆ ಒಡೆಯುವ ಕಾರ್ಯಕ್ರಮವನ್ನು ದೇವಸ್ಥಾನದ ಹೊರಗಡೆ ನಿಂತು ಯಾತ್ರಿಕರು ವೀಕ್ಷಿಸಿದರು. ಪೊಲೀಸ್ ವ್ಯವಸ್ಥೆ ಸರಿಯಾಗಿ ಮಾಡದ ಕಾರಣ ದೇವಸ್ಥಾನದ ಎದುರು ರಸ್ತೆ ಮೇಲೆ ಅಂಗಡಿಗಳು ಹಾಕಿದ್ದರಿಂದ ಯಾತ್ರಿಕರಿಗೆ ದರ್ಶನಕ್ಕೆ ತೊಂದರೆಯಾಯಿತು. ಅಲ್ಲದೇ ದೇವಸ್ಥಾನದಿಂದ ಪಲ್ಲಕ್ಕಿ ಹೋಗುವಾಗ ರಸ್ತೆ ಸಾಕಷ್ಟು ಚಿಕ್ಕದಾಗಿದ್ದರಿಂದ ದರ್ಶನ ಪಡೆಯಲು ಯಾತ್ರಿಕರು ಸಾಕಷ್ಟು ಹರಸಾಹಸ ಪಡಬೇಕಾಯಿತು.
ಬಸ್‌ಗಾಗಿ ಯಾತ್ರಿಕರ ಪರದಾಟ ನರಸಿಂಹ ಸರಸ್ವತಿ ಮಹಾರಾಜರ ಉತ್ಸವ ನಿಮಿತ್ತ ಮಹಾರಾಷ್ಟ್ರ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ವಿಶೇಷ ಬಸ್ ವ್ಯವಸ್ಥೆ ಮಾಡಿದ್ದರೂ ಯಾತ್ರಿಕರಿಗೆ ಬಸ್ ತೊಂದರೆಯಾಯಿತು. ಹೀಗಾಗಿ ಯಾತ್ರಿಕರು ಆಟೊ ಮೂಲಕ ಚೌಡಾಪಿರ ಹಾಗೂ ಕಲಬುರಗಿ ಸ್ಟೇಷನ್ ಗಾಣಗಾಪುರಕ್ಕೆ ಹೆಚ್ಚಿನ ದರ ನೀಡಿ ಪ್ರಯಾಣ ಮಾಡಬೇಕಾಯಿತು. ಬಸ್ ನಿಲ್ದಾಣದಲ್ಲಿ ಬಸ್‌ಗಿಂತಲೂ ಆಟೊಗಳ ಸಂಖ್ಯೆ ಹೆಚ್ಚಾಗಿದ್ದವು. ಬಸ್ ನಿಲ್ದಾಣದಲ್ಲಿ ಕಂಟ್ರೋಲರ್ ಇದ್ದರೂ ಏನು ಮಾಡಲು ಸಾಧ್ಯವಾಗಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.