ADVERTISEMENT

ಸರ್ಕಾರಿ ನೌಕರಿ ಆಮಿಷವೊಡ್ಡಿ ₹ 23.75 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2026, 7:25 IST
Last Updated 23 ಫೆಬ್ರುವರಿ 2026, 7:25 IST
   

ಕಲಬುರಗಿ: ಸರ್ಕಾರಿ ನೌಕರಿ ಕೊಡಿಸುವುದಾಗಿ ಆಮಿಷವೊಡ್ಡಿದ ವ್ಯಕ್ತಿಯೊಬ್ಬ ಹನುಮಾನ ತಾಂಡಾ ನಗರದ ಕುಟುಂಬವೊಂದಕ್ಕೆ ₹ 23.75 ಲಕ್ಷ ವಂಚಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಕಲಬುರಗಿಯ ಹನುಮಾನ ತಾಂಡಾದ ದಿ.ದಾಮು ರಾಠೋಡ ಹಾಗೂ ಅವರ ಪುತ್ರಿ ಪ್ರಿಯಾಂಕಾ ರಾಠೋಡ ವಂಚನೆಗೆ ಒಳಗಾದವರು.

‘ನಮ್ಮ ತಂದೆಗೆ ವಿಜಯಪುರ ಜಿಲ್ಲೆಯ ಸಿಂದಗಿಯ ಲೋಹಿತ ಮೇತ್ರಿ ಅವರೊಂದಿಗೆ ಸ್ನೇಹವಿತ್ತು. ಆ ಸ್ನೇಹ ಬಳಸಿ ಲೋಹಿತ ನಮ್ಮ ತಂದೆ ಹೊಲ ಮಾರಿ ಇಟ್ಟುಕೊಂಡಿದ್ದ ಹಣದಲ್ಲಿ ₹ 2.50 ಲಕ್ಷ ಸಾಲವಾಗಿ ಪಡೆದಿದ್ದರು. ವರ್ಷದ ಬಳಿಕವೂ ಅದನ್ನು ಮರಳಿಸಿರಲಿಲ್ಲ. ಈ ನಡುವೆ ನಮ್ಮ ತಂದೆ 2021ರ ಮೇ ತಿಂಗಳಲ್ಲಿ ನಮ್ಮ ತಂದೆ ತೀರಿಕೊಂಡರು. ನಂತರವೂ ನನ್ನ ತಂಗಿಗೆ ಸರ್ಕಾರಿ ನೌಕರಿ ಕೊಡಿಸುವ ಆಮಿಷವೊಡ್ಡಿ ನನ್ನ ಹಾಗೂ ತಾಯಿಯಿಂದ ಆಗಾಗ ಹಣ ಪಡೆದಿದ್ದರು. 2020ರಿಂದ 2024ರ ಫೆಬ್ರುವರಿ 15ರ ತನಕ ಹಂತಹಂತವಾಗಿ ₹ 24.25 ಲಕ್ಷ ಪಡೆದಿದ್ದಾರೆ. ಇದರಲ್ಲಿ 2025ರ ಏಪ್ರಿಲ್‌ 11ರಂದು ₹ 50 ಸಾವಿರ ಕೊಟ್ಟಿದ್ದಾರೆ. ಇನ್ನುಳಿದ ಹಣ ನೀಡದೇ ವಂಚಿಸಿದ್ದಾರೆ’ ಎಂದು ದಾಮು ರಾಠೋಡ ಪುತ್ರಿ ಪ್ರಿಯಾಂಕಾ ಸ್ಟೇಷನ್‌ ಬಜಾರ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ADVERTISEMENT

ಚಿನ್ನಾಭರಣ, ನಗದು ಕಳವು

ಕಲಬುರಗಿ: ಇಲ್ಲಿನ ಅಯೋಧ್ಯಾ ನಗರದ ರಾಮತೀರ್ಥ ದೇವಸ್ಥಾನ ಸಮೀಪದ ಮನೆಯೊಂದರ ಕೀಲಿ ಒಡೆದು ಕಳ್ಳರು 6 ಗ್ರಾಂ ಚಿನ್ನಾಭರಣ, 300 ಗ್ರಾಂ ಬೆಳ್ಳಿ ಆಭರಣ ಹಾಗೂ ₹ 1 ಲಕ್ಷ ನಗದು ಕದ್ದು ಪರಾರಿಯಾಗಿದ್ದಾರೆ.

ರವಿಚಂದ್ರ ಪಾಟೀಲ ಚಿನ್ನಾಭರಣ ಕಳೆದುಕೊಂಡವರು.

‘ಕಲಬುರಗಿಯ ಆರ್‌.ಜೆ.ನಗರದ ಅಕ್ಕಂದಿರ ಮನೆಗೆ ನಿಶ್ಚಿತಾರ್ಥ ಕಾರ್ಯಕ್ರಮಕ್ಕಾಗಿ ಮನೆಗೆ ಕೀಲಿ ಹಾಕಿ ಹೋಗಿದ್ದೆ. ಫೆಬ್ರುವರಿ 7ರಂದು ಸಂಜೆಯಿಂದ ಫೆಬ್ರುವರಿ 9ರ ರಾತ್ರಿ 10 ಗಂಟೆಗೆ ನಡುವೆ ಮನೆಯ ಕೀಲಿ ಒಡೆದು ಕಳವು ಮಾಡಲಾಗಿದೆ’ ಎಂದು ರವಿಚಂದ್ರ ಸಬರ್ಬನ್‌ ಠಾಣೆಗೆ ದೂರು ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.