ADVERTISEMENT

ಗ್ರಾ.ಪಂ ಸಿಬ್ಬಂದಿಗೆ ತಪ್ಪದೇ ವೇತನ ನೀಡಿ; ರಮೇಶ ಸೂಲ್ಪಿ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2022, 3:57 IST
Last Updated 12 ಏಪ್ರಿಲ್ 2022, 3:57 IST
ಅಫಜಲಪುರದಲ್ಲಿ ಸೋಮವಾರ ಆಯೋಜಿಸಿದ್ದ ಗ್ರಾಮ ಪಂಚಾಯಿತಿ ನೌಕರರ ತಾಲ್ಲೂಕು ಸಮ್ಮೇಳನವನ್ನು ತಾ.ಪಂ ಇ.ಒ ರಮೇಶ ಸುಲ್ಪಿ ಉದ್ಘಾಟಿಸಿದರು
ಅಫಜಲಪುರದಲ್ಲಿ ಸೋಮವಾರ ಆಯೋಜಿಸಿದ್ದ ಗ್ರಾಮ ಪಂಚಾಯಿತಿ ನೌಕರರ ತಾಲ್ಲೂಕು ಸಮ್ಮೇಳನವನ್ನು ತಾ.ಪಂ ಇ.ಒ ರಮೇಶ ಸುಲ್ಪಿ ಉದ್ಘಾಟಿಸಿದರು   

ಅಫಜಲಪುರ: ಸ್ಥಳೀಯ ತೆರಿಗೆ ಮೂಲಗಳಿಂದಗ್ರಾಮ ಪಂಚಾಯಿತಿಗಳಿಗೆ ಬಂದ ಹಣವನ್ನು ಪ್ರತಿ ತಿಂಗಳು ತಮ್ಮ ಪಂಚಾಯಿತಿ ಸಿಬ್ಬಂದಿಗೆ ತಪ್ಪದೇ ಪಾವತಿಸಬೇಕು ಎಂದು ತಾಲ್ಲೂಕು ಪಂಚಾಯಿತಿ ಇ.ಒ ರಮೇಶ ಸೂಲ್ಪಿ ಹೇಳಿದರು.

ಇಲ್ಲಿನ ಬಸವ ಭವನದಲ್ಲಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ತಾಲ್ಲೂಕು ಘಟಕ ಹಾಗೂ ಸಿಐ ಟಿಯು ಸಂಯೋಜಿತಯಡಿ ನಡೆದ ಗ್ರಾ.ಪಂ ನೌಕರರ 7ನೇ ತಾಲ್ಲೂಕು ಮಟ್ಟದ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಕಷ್ಟಪಟ್ಟು ಕೆಲಸ ಮಾಡುವಗ್ರಾಮ ಪಂಚಾಯಿತಿ ಸಿಬ್ಬಂದಿಗೆ ಪ್ರತಿ ತಿಂಗಳು ವೇತನ ಪಾವತಿ ಆಗುತ್ತಿಲ್ಲ. ಇದರಿಂದ ಅವರ ಕುಟುಂಬ ನಿರ್ವಹಣೆಗೆ ತೊಡಕಾಗಿದೆ. ಪಂಚಾಯಿತಿಗಳಿಗೆ ತೆರಿಗೆಯಿಂದ ಬಂದ ಹಣವನ್ನು ದುರುಪಯೋಗ ಮಾಡದೆ ಪಂಚಾಯಿತಿ ಸಿಬ್ಬಂದಿಗೆ ವೇತನ ನೀಡಬೇಕು. ನಿವೃತ್ತ ಸಿಬ್ಬಂದಿಗೂ ನಿವೃತ್ತಿ ವೇತನ ಕೊಡುವ ಅವಕಾಶ ಇದೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.

ADVERTISEMENT

ನೌಕರರ ಸಂಘದ ರಾಜ್ಯ ಕಾರ್ಯದರ್ಶಿ ಶಿವಾನಂದ ಕೌಲಗಿ ಮಾತನಾಡಿ, 15ನೇ ಹಣಕಾಸಿನಲ್ಲಿ ಬರುವ ಅನುದಾನವನ್ನು ಪಿಡಿಒ ಮತ್ತು ಅಧ್ಯಕ್ಷರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ತೆರಿಗೆ ವಸೂಲಿಯ ಶೇ 40ರಷ್ಟು ಹಣವನ್ನು ಪಂಚಾಯಿತಿ ಸಿಬ್ಬಂದಿಯ ಸಂಬಳಕ್ಕೆ ಬಳಸುವಂತೆ ಸರ್ಕಾರದ ಆದೇಶ ಇದೆ. ಇದರ ಪಾಲನೆ ಆಗುತ್ತಿಲ್ಲ ಎಂದರು.

ಸಿಐಟಿಯು ಸಂಚಾಲಕ ಶ್ರೀಮಂತ ಬಿರಾದಾರ ಮಾತನಾಡಿ, ತಾಲ್ಲೂಕಿನ ನಿವೃತ್ತ ಸಿಬ್ಬಂದಿಯ ಹಲವು ತಿಂಗಳ ಸಂಬಳ ಬಾಕಿ ಇದೆ. ಮುಂದಿನ ದಿನಗಳಲ್ಲಿ ನಿವೃತ್ತಿ ವೇತನಕ್ಕಾಗಿ ಹೋರಾಟ ಮಾಡಲಾಗುವುದು ಎಂದು ಹೇಳಿದರು.

ಸಿಬ್ಬಂದಿಗೆ ಕೆಲಸದ ಭದ್ರತೆ, ಪ್ರತಿ ತಿಂಗಳು ವೇತನ ಪಾವತಿಯಂತಹ ನಿರ್ಣಯ ತೆಗೆದುಕೊಳ್ಳಲಾಯಿತು. ನಿವೃತ್ತಿ, ಬಡ್ತಿ ಹೊಂದಿದ ನೌಕರರನ್ನು ಸನ್ಮಾನಿಸಲಾಯಿತು.

ಸಿಐಟಿಯು ಜಿಲ್ಲಾ ಸಂಚಾಲಕಿ ಶಾಂತಾ ಘಂಟೆ, ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಪಾಟೀಲ, ಪ್ರಧಾನ ಕಾರ್ಯದರ್ಶಿ ಉಮಾಶಂಕರ ಕಡಣಿ, ಮಾಜಿ ಅಧ್ಯಕ್ಷ ಮಹಾಂತೇಶ ಜಮಾದಾರ, ತಾಲ್ಲೂಕು ಅಂಗನವಾಡಿ ನೌಕರರ ಸಂಘದ ಅಧ್ಯಕ್ಷ ಬಿಸ್ಮಿಲ್ ಬೇಗಂ ಖೇಡ, ಜಿಲ್ಲಾ ಉಪಾಧ್ಯಕ್ಷ ಭೀಮರಾವ್ ಜಮಾದಾರ, ಪರಮೇಶ್ವರ ಕಾಸರ, ಸಿದ್ದರಾಮ ದಣ್ಣೂರ ಇದ್ದರು.

ಮಲ್ಲಿಕಾರ್ಜುನ ಸುತಾರ ಸ್ವಾಗತಿಸಿ ದರು, ಗುರುಶಾಂತ ದೇಸಾಯಿ ನಿರೂಪಿಸಿದರು. ರಶೀದ ಬಡದಾಳ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.