
ಕಲಬುರಗಿ: ನಗರದಲ್ಲಿ ಭಾನುವಾರ ನಡೆದ ಸಂತ ಸೇವಾಲಾಲ್ ಮಹಾರಾಜರ ಜಯಂತ್ಯುತ್ಸವವನ್ನು ಬಂಜಾರ ಸಮುದಾಯ ಅದ್ದೂರಿಯಾಗಿ ಆಚರಿಸಿತು. ಸೇವಾಲಾಲರ ಚಿತ್ರದ ಮೆರವಣಿಗೆ ಹಾಗೂ ವೇದಿಕ ಕಾರ್ಯಕ್ರಮವು ಬಂಜಾರರ ‘ಬಲ ಪ್ರದರ್ಶನ’ಕ್ಕೂ ವೇದಿಕೆಯಾಯಿತು.
ನಗರದ ನಗರೇಶ್ವರ ಶಾಲೆಯಿಂದ ಬೆಳಿಗ್ಗೆ 11 ಗಂಟೆ ಹೊತ್ತಿಗೆ ಶುರುವಾದ ಸೇವಾಲಾಲರ ಚಿತ್ರದ ಮೆರವಣಿಗೆ ಡಾ.ಎಸ್.ಎಂ.ಪಂಡಿತ ರಂಗಮಂದಿರ ತಲುಪಿದಾಗ ಸಂಜೆ 4 ಗಂಟೆ ದಾಟಿತ್ತು.
ಸಮುದಾಯದ ಸಾವಿರಾರು ಜನರು ಮಂದಿ ಭವ್ಯ ಮೆರವಣಿಗೆಯಲ್ಲಿ ಪಾಲ್ಗೊಂಡರು. ಕಿವಿಗಡಚಿಕ್ಕುವ ಅಬ್ಬರದ ಡಿಜೆ ಸದ್ದಿಗೆ ಯುವಜನರು ಮನ ದಣಿಯುವಂತೆ ಕುಣಿದು ಕುಪ್ಪಳಿಸಿದರು.
ಸಂಜೆ 4.30ರ ಹೊತ್ತಿಗೆ ಪಂಡಿತ ರಂಗಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ಶುರುವಾಯಿತು. ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯಿತಿ ಸಂಯುಕ್ತಾಶ್ರಯದಲ್ಲಿ ನಡೆದ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಸಂತ ಸೇವಾಲಾಲ್ ಮಹಾರಾಜ ಸಮಾಜದ ಗೌರವಾಧ್ಯಕ್ಷರೂ ಆಗಿರುವ ಮಾಜಿ ಸಚಿವ ರೇವೂ ನಾಯಕ ಬೆಳಮಗಿ, ‘ಸೇವಾಲಾಲರು ಪವಾಡ ಪುರುಷರು. ಅವರು ನುಡಿದಂತೆ ನಡೆಯುತ್ತಿದ್ದರು. ಅವರಿಗೆ ಜಗದಂಬಾ ಮಾತೆ, ಮರಿಯಮ್ಮದೇವಿ ಆಶೀರ್ವಾದ ಇತ್ತು. ಇಂದಿನ ಸೇವಾಲಾಲರ ಜಯಂತ್ಯುತ್ಸವದಲ್ಲಿ ಜನ ಪಕ್ಷಭೇದ ಮರೆತು ಸಂಘಟಿತರಾಗಿ ಒಗ್ಗಟ್ಟು ಪ್ರದರ್ಶಿಸಿದ್ದಾರೆ’ ಎಂದರು.
‘ನಮ್ಮ ಅಳಿಯ ಡಾ.ಅವಿನಾಶ ಜಾಧವ ಸಣ್ಣ ವಯಸ್ಸಿನಲ್ಲೇ ಎರಡು ಸಲ ಶಾಸಕರಾಗಿದ್ದಾರೆ. ಅವರು ರಾಜಕೀಯದಲ್ಲಿ ಮಲ್ಲಿಕಾರ್ಜುನ ಖರ್ಗೆ ಹಾಗೂ ಧರ್ಮಸಿಂಗ್ ಅವರನ್ನು ಸೈಡ್ ಹೊಡೆಯಲಿ ಎಂದು ದೇವರಲ್ಲಿ ಪ್ರಾರ್ಥಿಸುವೆ. ಯಾಕೆಂದರೆ ನನಗೆ ನಮ್ಮ ಸಮುದಾಯದ ವ್ಯಕ್ತಿಯ ಎದುರು ಚುನಾವಣೆಗೆ ನಿಲ್ಲಿಸುವ ಪ್ರಯತ್ನ ನಡೆದಿತ್ತು. ದೆಹಲಿಯಿಂದ ಒತ್ತಡ ಹೇರಿದರೂ ನಾನು ಸ್ಪರ್ಧಿಸಲಿಲ್ಲ. ನಾನು ಸಮಾಜದ ನೇತಾರ ಎನಿಸಿಕೊಂಡಿದ್ದೇನೆ. ನಾನು ಮಾಡಿದ ಇತಿಹಾಸ ಯಾರೂ ಮಾಡಿಲ್ಲ. ಅದರ ಬಗೆಗೆ ನನಗೆ ಹೆಮ್ಮೆಯಿದೆ. ನನಗೆ ಅಧಿಕಾರ ಸಿಕ್ಕಾಗ ತಾಂಡಾ ಅಭಿವೃದ್ಧಿ ನಿಗಮ ಸ್ಥಾಪನೆ, ಪ್ರತಿ ಜಿಲ್ಲೆಯಲ್ಲೂ ಬಂಜಾರ ಭವನ ನಿರ್ಮಿಸಿ ಕೊಟ್ಟಿದ್ದೇನೆ’ ಎಂದರು.
ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ ಮಾತನಾಡಿದರು. ಸೇವಾಲಾಲ್ ಜಿಲ್ಲಾ ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಸಾಗರ ರಾಠೋಡ ಅಧ್ಯಕ್ಷತೆ ವಹಿಸಿದ್ದರು. ಕೆಸರಟಗಿಯ ಲತಾದೇವಿ ಸಾನ್ನಿಧ್ಯ ವಹಿಸಿದ್ದರು. ಗಣಪತಿ ರಾಠೋಡ್ ವಿಶೇಷ ಉಪನ್ಯಾಸ ನಿಡಿದರು.
ಮಹಾನಗರ ಪಾಲಿಕೆ ಸದಸ್ಯ ಕೃಷ್ಣ ನಾಯಕ, ಬಾಬು ಜಾಧವ್, ಓಂಕಾರ ಮಹಾರಾಜ್, ಶಂಕರ ಮಹಾರಾಜ, ತಹಶೀಲ್ದಾರ್ ಶಿವಪ್ರಭು ಹಿರೇಮಠ, ಮಹೇಶ್ ಹುಬಳಿ, ವಿಠ್ಠಲ ಜಾಧವ್, ಶ್ಯಾಮರಾವ್ ಪವಾರ್, ಉಮೇಶ್ ರಾಠೋಡ್, ರಾಕೇಶ್ ಚವ್ಹಾಣ ವೇದಿಕೆಯಲ್ಲಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ಜಗದೀಶ್ವರಿ ನಾಸಿ ಸ್ವಾಗತಿಸಿದರು. ಭುವನೇಶ್ವರಿ ಜಾಧವ್ ಮತ್ತು ಸಂಗಡಿಗರಿಂದ ನಾಡಗೀತೆ ಪ್ರಸ್ತುತ ಪಡಿಸಲಾಯಿತು. ತನುಪ್ರಿಯ ರಾಠೋಡ್ ಭರತನಾಟ್ಯ ಪ್ರದರ್ಶಿಸಿದರು.
ವೇದಿಕೆ ಕಾರ್ಯಕ್ರಮಕ್ಕೂ ಮೊದಲು ನಗರದಲ್ಲಿ ಬಂಜಾರ ಸಮುದಾಯದವರಿಂದ ಅದ್ದೂರಿ ಮೆರವಣಿಗೆ ನಡೆಯಿತು. ನಗರದ ನಗರೇಶ್ವರ ಶಾಲೆಯಿಂದ ಬೆಳಿಗ್ಗೆ 10.30ರ ಸುಮಾರಿಗೆ ಆರಂಭವಾದ ಮೆರವಣಿಗೆ ಡಾ.ಎಸ್.ಎಂ.ಪಂಡಿತ ರಂಗಮಂದಿರಕ್ಕೆ ಸಂಜೆ 4 ಗಂಟೆಗೆ ತಲುಪಿ ಸಮಾಪ್ತಿಯಾಯಿತು. ಸಮುದಾಯದ ಸಾವಿರಾರು ಜನ ಬಿಸಿಲನ್ನೂ ಲೆಕ್ಕಿಸದೇ ಉತ್ಸಾಹದಿಂದ ಪಾಲ್ಗೊಂಡಿದ್ದರು. ದೊಡ್ಡದಾಗಿ ನಿರ್ಮಿಸಿದ್ದ ಮಂಟಪದ ಮಾದರಿಯಲ್ಲಿ ಸೇವಾಲಾಲ್ ಮಹಾರಾಜರ ಮೂರ್ತಿ ಇಡಲಾಗಿತ್ತು. ಸಮಾಜದ ಮಹಾರಾಜರು ರಥದಲ್ಲಿ ಕುಳಿತಿದ್ದರು. ಸಾಂಪ್ರದಾಯಿಕ ವಾದ್ಯ ಮೇಳಗಳು, ಕಲಾತಂಡಗಳು ಮೆರವಣಿಗೆಯ ಮೆರುಗು ಹೆಚ್ಚಿಸಿದವು. ಯುವಕರು, ನಾಸಿಕ್ ಡೊಳ್ಳು, ಕಿವಿ ತಮಟೆ ಹರಿಯುವಂತಿದ್ದ ಡಿಜೆ ಸಂಗೀತಕ್ಕೆ ಕುಣಿದು ಕುಪ್ಪಳಿಸಿದರು. ಧ್ವಜಗಳನ್ನು ಹಿಡಿದು ಓಡಾಡಿದರು. ಯುವತಿಯರು ಬಂಜಾರ ಗೀತೆಗಳಿಗೆ ಹೆಜ್ಜೆ ಹಾಕಿದರು. ಪ್ರೇಕ್ಷಕರು ಶಿಳ್ಳೆ ಹೊಡೆದು ಹುರಿದುಂಬಿಸಿದರು. ಕುಂಭ ಕಳಶ ಹೊತ್ತ ಮಹಿಳೆಯರು ಮೆರವಣಿಗೆಗೆ ಸೊಬಗು ತಂದರು. ಮಾಜಿ ಸಂಸದ ಉಮೇಶ ಜಾಧವ, ಮಾಜಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಮತ್ತಿತರ ಮುಖಂಡರು ಪಾಲ್ಗೊಂಡಿದ್ದರು.
ಸಮಾನತೆಗೆ ಶ್ರಮಿಸಿದ ಸಂತ ಸೇವಾಲಾಲರು ಸೂರಗೊಂಡನಕೊಪ್ಪದಲ್ಲಿ ಜನಿಸಿದರು. ಇಡೀ ಜೀವನದ ಉದ್ದಕ್ಕೂ ಗೋವು ರಕ್ಷಣೆಗೆ ಶ್ರಮಿಸಿದರು. ಅಹಿಂಸೆ ಭಕ್ತಿ ಮುಕ್ತಿ ಮಾರ್ಗ ತೋರಿದರುಬಸವರಾಜ ಮತ್ತಿಮಡು ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.