ADVERTISEMENT

ಚಿಂಚೋಳಿ: ಇಳೆಗೆ ಹಸಿರ ಹೊದಿಕೆ, ಕಾಡಿನ ಸೊಬಗು ನೋಡುವುದೇ ಖುಷಿ

ಜಗನ್ನಾಥ ಡಿ.ಶೇರಿಕಾರ
Published 8 ಜೂನ್ 2021, 7:06 IST
Last Updated 8 ಜೂನ್ 2021, 7:06 IST
ಚಿಂಚೋಳಿಯ ವನ್ಯಜೀವಿ ಧಾಮ ಗೊಟ್ಟಮಗೊಟ್ಟ ತಾಣದಲ್ಲಿ ವ್ಯಾಪಿಸಿರುವ ಹಸಿರು ರಾಶಿ
ಚಿಂಚೋಳಿಯ ವನ್ಯಜೀವಿ ಧಾಮ ಗೊಟ್ಟಮಗೊಟ್ಟ ತಾಣದಲ್ಲಿ ವ್ಯಾಪಿಸಿರುವ ಹಸಿರು ರಾಶಿ   

ಚಿಂಚೋಳಿ: ಚಿಂಚೋಳಿ ವನ್ಯಜೀವಿ ಧಾಮವು ಮಳೆಯಿಂದ ಕಂಗೊಳಿಸುತ್ತಿದ್ದು, ಎಲ್ಲೆಡೆ ಹಸಿರು ವ್ಯಾಪಿಸಿದೆ. ಸಮೃದ್ಧ ಜೀವ ವೈವಿಧ್ಯತೆಯಿಂದ ಕೂಡಿರುವ ಈ ಕಾಡು ಏಪ್ರಿಲ್, ಮೇ ತಿಂಗಳಲ್ಲಿ ಸುರಿದ ಮಳೆಗೆ ಹಸಿರು ರಾಶಿ ಹೊದ್ದುಕೊಂಡಿದೆ.

ಚಂದ್ರಂಪಳ್ಳಿ, ಮಾಣಿಕಪುರ, ಗೊಟ್ಟಂಗೊಟ್ಟ, ಎತ್ತಿಪೋತೆ, ಶೇರಿಭಿಕನಳ್ಳಿ, ಅಂತಾವರಂ, ಮೊಗದಂಪುರ, ಶಾದಿಪುರ, ಭೈರಂಪಳ್ಳಿ, ಸೋಮಲಿಂಗದಳ್ಳಿ, ಚಿಕ್ಕಲಿಂಗದಳ್ಳಿ ಸುತ್ತಲಿನ ಕಾಡು ಮೈದುಂಬಿಕೊಂಡಿದೆ.

ವನ್ಯಜೀವಿ ಧಾಮದ ಕೊತ್ವಾಲ್ ನಾಲಾ, ಮಂಡಿ ಬಸವಣ್ಣ ಕ್ಯಾಂಪ ಹಿಂದಿನ ನಾಲಾ, ಮಹಿಶಮ್ಮನ ಬೆಟ್ಟ, ಬಡೆಸಾಬ್, ಎತ್ತಿಪೋತೆ ನಾಲಾ ಹಾಗ ಬುರುಗದೊಡ್ಡಿ ಮೊದಲಾದ ಕಡೆ ತೊರೆಗಳಲ್ಲಿ ನೀರು ಗೋಚರಿಸುತ್ತಿದೆ.

ADVERTISEMENT

ಸಮುದ್ರ ಮಟ್ಟದಿಂದ ಬುರುಗದೊಡ್ಡಿ 634 ಮೀಟರ್, ಶೇರಿಭಿಕನಳ್ಳಿ 601 ಮೀಟರ್, ಧರ್ಮಾಸಾಗರ 594 ಮೀಟರ್, ಗೊಟ್ಟಮಗೊಟ್ಟ 547 ಮೀಟರ್, ಶಾದಿಪುರ 502 ಮೀಟರ್, ಚಿಂದಾನೂರ 500 ಮೀಟರ್ ಮತ್ತು ಭೈರಂಪಳ್ಳಿ 478 ಮೀಟರ್ ಎತ್ತರದಲ್ಲಿದೆ. ಇವು ಚಾರಣಕ್ಕೆ ಹೇಳಿ ಮಾಡಿಸಿದ ತಾಣಗಳಾಗಿವೆ.

‘13,888 ಹೆಕ್ಟೇರ್ ವಿಸ್ತಾರದ ಈ ಕಾಡು ಬಯಲು ಸೀಮೆಯ ಪ್ರಮುಖವಾದ ಪರಿಸರ ಸೂಕ್ಷ್ಮ ವಲಯವಾಗಿದೆ. 2011ರಲ್ಲಿ ಕಾಯ್ದಿಟ್ಟ ಅರಣ್ಯವನ್ನು ವನ್ಯಜೀವಿ ಧಾಮವಾಗಿ ಮೇಲ್ದರ್ಜೆಗೇರಿಸಿದ ಮೇಲೆ ಇಲ್ಲಿ ಪರಿಸರ ಪ್ರವಾಸಕ್ಕೆ ಹೇಳಿಕೊಳ್ಳುವಂತಹ ಅಭಿವೃದ್ಧಿ ಕೆಲಸ ಆಗಿಲ್ಲ’ ಎನ್ನುತ್ತಾರೆ ಸ್ಥಳೀಯರು.

ಜೀವ ವೈವಿಧ್ಯದ ತಾಣ: ಅಳಿವಿನ ಅಂಚಿನಲ್ಲಿರುವ ಮತ್ತು ಔಷಧಿಯ ಸಸ್ಯಗಳು ಇಲ್ಲಿ ಕಾಣಸಿಗುತ್ತವೆ. ಇದರಿಂದಾಗಿಯೇ ಇದಕ್ಕೆ ಮಹತ್ವ ಬಂದಿದೆ. ಬನ್ನಿ, ಧೂಪ, ಮುತ್ತುಗ, ಕವಳಾ, ಸಿಸೂ, ನೆಲ್ಲಿ, ಶಿವಣೆ, ಹೊನ್ನೆ, ರಕ್ತಚಂದನ, ಶ್ರೀಗಂಧ, ಸಾಗವಾನಿ, ಕರಿಮತ್ತಿ ಹಾಗೂ ಹೊಳೆ ಸಸ್ಯಗಳು ಇಲ್ಲಿವೆ.

ಕೃಷ್ಣಮೃಗ, ಕಾಡುಬೆಕ್ಕು, ಚಿರತೆ, ಹದ್ದು, ಸುವರ್ಣ ವರ್ಣದ ಮರಕುಟಿಕ, ನಾಗರಗಾವು, ಹೆಬ್ಬಾವು, ಮಂಡಲ ಹಾವುಗಳು ಅಳಿವಿನ ಅಂಚಿನಲ್ಲಿರುವ ಸಸ್ಯ, ಪ್ರಾಣಿ ಮತ್ತು ಪಕ್ಷಿ ಹಾಗೂ ಸರಿಸೃಪಗಳಾಗಿವೆ ಎನುತ್ತಾರೆ ವನ್ಯಜೀವಿ ಧಾಮದ ವಲಯ ಅರಣ್ಯಾಧಿಕಾರಿ ಸಂಜೀವಕುಮಾರ ಚವ್ಹಾಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.