ADVERTISEMENT

ಕಲಬುರಗಿ | ಅಂತರ್ಜಲ ಮರುಪೂರಣಕ್ಕೆ ಬೇಕಿದೆ ಹೆಚ್ಚಿನ ಒತ್ತು

ಜಿಲ್ಲೆಯಲ್ಲಿ 10 ವರ್ಷಗಳ ಅವಧಿಯಲ್ಲಿ ಭಾರೀ ಏರಿಳಿತ

ಓಂಕಾರ ಬಿರಾದಾರ
Published 1 ಏಪ್ರಿಲ್ 2025, 4:53 IST
Last Updated 1 ಏಪ್ರಿಲ್ 2025, 4:53 IST
Vector illustration of lawn aeration. Concept of lawn grass care, gardening service, benefits of aeration. Water, air and fertilizer having easy access to soil
Vector illustration of lawn aeration. Concept of lawn grass care, gardening service, benefits of aeration. Water, air and fertilizer having easy access to soil   

ಕಲಬುರಗಿ: ಕುಸಿಯುತ್ತಿರುವ ಮಳೆಯ ಪ್ರಮಾಣ, ಹೆಚ್ಚಿನ ಅಂತರ್ಜಲ ಬಳಕೆ, ಮರುಪೂರಣ ಮಾಡದೇ ಇರುವುದು ಸೇರಿ ಅನೇಕ ಕಾರಣಗಳಿಂದ ವರ್ಷದಿಂದ ವರ್ಷಕ್ಕೆ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಲೇ ಇದೆ.

ಜಿಲ್ಲಾ ಅಂತರ್ಜಲ ಕಚೇರಿ ನಿರ್ದೇಶನಾಲಯ ಅಂಕಿ ಅಂಶಗಳ ಪ್ರಕಾರ ಸುಮಾರು 10 ವರ್ಷಗಳ ಅವಧಿಯಲ್ಲಿ ಜಿಲ್ಲೆಯ ಕೆಲ ತಾಲ್ಲೂಕುಗಳಲ್ಲಿ ಅಂತರ್ಜಲ ಮಟ್ಟ ಭಾರಿ ಕುಸಿತ ಹಾಗೂ ಏರಿಳಿತ ಕಂಡಿದೆ.

2015ರಲ್ಲಿ 6.54 ಮೀಟರ್‌ನಷ್ಟು ಏರಿಳಿತ ಕಂಡಿದ್ದ ಅಂತರ್ಜಲ ಮಟ್ಟ, 2024ರ ಕೊನೆಯವರೆಗೆ 17.48 ಮೀಟರ್‌ ಏರಿಳಿತವಾಗಿದೆ. ಜಿಲ್ಲೆಯಲ್ಲಿ 10 ವರ್ಷದಲ್ಲಿ 10.94 ಮೀಟರ್‌ನಷ್ಟು ಏರಿಳಿತ ಕಂಡಿದೆ.

ADVERTISEMENT

ಅಫಜಲಪುರ ತಾಲ್ಲೂಕಿನಲ್ಲಿ 2015ರಲ್ಲಿ 9.12 ಮೀಟರ್‌ಗೆ ಇದ್ದ ಅಂತರ್ಜಲ ಮಟ್ಟ 2024ರಲ್ಲಿ 20.93 ಮೀಟರ್‌ಗೆ ಕುಸಿತವಾಗಿ ಜಿಲ್ಲೆಯಲ್ಲಿಯೇ ಅಧಿಕ ಕುಸಿತ ಕಂಡ ತಾಲ್ಲೂಕು ಪ್ರದೇಶವಾಗಿದೆ.

ಆಳಂದ ತಾಲ್ಲೂಕಿನಲ್ಲಿ 10.25 ಮೀಟರ್‌ಗೆ ಇದ್ದ ಜೀವಜಲ 16.59 ಮೀಟರ್‌ಗೆ ಕುಸಿತವಾಗಿದ್ದು, ಮಿನಿ ಮಲೆನಾಡು ಎಂಬ ಖ್ಯಾತಿ ಪಡೆದಿದ್ದ ಚಿಂಚೋಳಿ ತಾಲ್ಲೂಕಿನಲ್ಲಿ 7.09 ಮೀಟರ್‌ಗೆ ಇದ್ದ ನೀರಿನ ಮೂಲ 16.39 ಮೀಟರ್‌ ಆಳಕ್ಕೆ ಕುಸಿತ ಕಂಡಿದೆ.

ಕಮಲಾಪುರ ತಾಲ್ಲೂಕಿನಲ್ಲಿ 2017ರಲ್ಲಿ ಗರಿಷ್ಠ 21.01 ಮೀಟರ್‌ ಆಳಕ್ಕೆ ಇಳಿದಿದ್ದ ಅಂರ್ತಜಲ, ಸಮರ್ಪಕ ಮಳೆಯಿಂದಾಗಿ 2024ರಲ್ಲಿ 8.34ರಷ್ಟು ಏರಿಕೆ ಕಂಡಿದೆ.

ಕೆಲ ಜಿಲ್ಲೆಗಳಲ್ಲಿ ಉತ್ತಮ ಜೀವಸೆಲೆ:

ಜಿಲ್ಲೆಯ ಯಡ್ರಾಮಿ, ಶಹಾಬಾದ್, ಕಾಳಗಿ, ಸೇಡಂ, ಜೇವರ್ಗಿ ಚಿತ್ತಾಪುರ ತಾಲ್ಲೂಕುಗಳಲ್ಲಿ ಸರಿಸುಮಾರು 5.50 ಮೀಟರ್‌ ಆಳದಲ್ಲಿ ಅಂತರ್ಜಲ ಇದೆ ಎನ್ನುತ್ತಾರೆ ಭೂ ವಿಜ್ಞಾನಿಗಳು.

ಅಫಜಲಪುರಲ್ಲಿ ವಾರ್ಷಿಕ ಮಳೆ ಪ್ರಮಾಣ ಕಡಿಮೆ:

ಅಫಜಲಪುರ ತಾಲ್ಲೂಕು ವ್ಯಾಪ್ತಿಯಲ್ಲಿ ಭೀಮಾತೀರದ ಗ್ರಾಮಗಳು ಹೊರತುಪಡಿಸಿ ಎಲ್ಲ ಹೆಚ್ಚಿನ ಜಲಮೂಲಗಳಿಲ್ಲ. ವಾಡಿಕೆ ಮಳೆಗಿಂತ ಕಡಿಮೆ ಪ್ರಮಾಣದಲ್ಲಿ ಮಳೆ ಸುರಿಯುತ್ತದೆ. ಇದರಿಂದ ವರ್ಷದಿಂದ ವರ್ಷಕ್ಕೆ ಅಂತರ್ಜಲ ಮಟ್ಟ ಕುಸಿತವಾಗುತ್ತಿದೆ. ತಾಲ್ಲೂಕು ಹಳ್ಳಿಗಳಲ್ಲಿ 350ರಿಂದ 400 ಅಡಿಗಳಷ್ಟು ಆಳಕ್ಕೆ ಬೋರ್‌ಬೆಲ್‌ ಕೊರೆದರೂ ನೀರು ಸಿಗುವುದಿಲ್ಲ ಎನ್ನುತ್ತಾರೆ ರೈತರು.

ಇನ್ನೂ ಕುಸಿಯುವ ಸಾಧ್ಯತೆ:

ಅಫಜಪುರ ತಾಲ್ಲೂಕು ವ್ಯಾಪ್ತಿಯಲ್ಲಿ ಪ್ರಸಕ್ತ ವರ್ಷದ ಜನವರಿಯಲ್ಲಿ 16.78 ಮೀಟರ್‌ಗೆ ಇದ್ದ ಅಂತರ್ಜಲ ಮಟ್ಟ ಫೆಬ್ರುವರಿ ಕೊನೆಗೆ 17.31 ಮೀಟರ್‌ಗೆ ಕುಸಿತ ಕಂಡಿದೆ. ಮೇ ಕೊನೆಯವಾರದವರೆಗೆ ಸುಮಾರು 21 ಮೀಟರ್‌ವರರೆಗೆ ಕುಸಿಯಬಹುದು. ಜಿಲ್ಲೆಯಲ್ಲಿ ಜೂನ್‌ ತಿಂಗಳವರೆಗೆ ಸಮರ್ಪಕವಾಗಿ ಮಳೆಯಾಗದಿದ್ದರೆ ಜಿಲ್ಲೆಯಾದ್ಯಂತ ಇನ್ನಷ್ಟು ಅಂತರ್ಜಲ ಮಟ್ಟ ಕುಸಿಯುವ ಸಾಧ್ಯತೆ ಇದೆ ಎನ್ನುತ್ತಾರೆ ಅಧಿಕಾರಿಗಳು.

ಕುಸಿತಕ್ಕೆ ಕಾರಣವಾಗುವ ಅಂಶಗಳು:

ಹೆಚ್ಚು ನೀರಿನ ಬಳಕೆ ಮಾಡುವುದು. ಸರಾಸರಿಗಿಂತ ಉತ್ತಮ ಮಳೆಯಾಗದಿರುವುದು. ಇಂಗುವಿಕೆ ಸಾಧ್ಯವಾಗದೇ ಇರುವುದು. ನೀರಾವರಿ ಬೆಳೆಗಳಿಗೆ ಅತಿಯಾದ ನೀರಿನ ಬಳಕೆಯಿಂದ ಜಲಮೂಲಗಳು ಬರಿದಾಗುತ್ತಿದೆ.

‘ಅಂತರ್ಜಲ ಮರುಪೂರಣ ಅವಶ್ಯ’

‘ಜಿಲ್ಲೆಯ ಅಫಜಲಪುರ ಆಳಂದ ತಾಲ್ಲೂಕು ವ್ಯಾಪ್ತಿಯಲ್ಲಿ ಅಂತರ್ಜಲ ಮಟ್ಟ ಕಡಿಮೆ ಇದೆ. ಹೆಚ್ಚಿನ ಕೃಷಿ ಹೊಂಡಗಳ ನಿರ್ಮಾಣ ಇಂಗುಗುಂಡಿಗಳ ನಿರ್ಮಾಣ ಮಾಡಿ ಅಂತರ್ಜಲ ಮರುಪೂರಣ ಮಾಡುವುದು ಅಗತ್ಯವಾಗಿದೆ’ ಎಂದು ಜಿಲ್ಲಾ ಅಂತರ್ಜಲ ಕಚೇರಿ ನಿರ್ದೇಶನಾಲಯದ ಹಿರಿಯ ಭೂ ವಿಜ್ಞಾನಿ ಆರ್‌. ಮುಜಿಬ್‌ ರಹೆಮಾನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.