
ಕಲಬುರಗಿ: ‘ಗುಲಬರ್ಗಾ ವಿವಿಯಲ್ಲಿರುವ ಕೆಲಸದ ಹಾಗೂ ಸಂಶೋಧನಾ ಸಂಸ್ಕೃತಿ ಮುಂದುವರಿಸಿಕೊಂಡು ಹೋಗಬೇಕು’ ಎಂದು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಅಧ್ಯಕ್ಷ ಪ್ರೊ. ಎ.ಎಚ್. ರಾಜಾಸಾಬ್ ಹೇಳಿದರು.
ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವವಿದ್ಯಾಲಯದ 46ನೇ ಸಂಸ್ಥಾಪನಾ ದಿನಾಚರಣೆ ಹಾಗೂ 2025–26ನೇ ಶೈಕ್ಷಣಿಕ ಸಾಲಿನ ಸ್ನಾತಕೋತ್ತರ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಹಲವಾರು ಮಜಲು, ಘಟ್ಟಗಳನ್ನು ಕಂಡ ಈ ವಿವಿಯಲ್ಲಿ ಸೇವೆ ಸಲ್ಲಿಸಿದವರು ಹಲವು ವಿವಿಗಳ ಕುಲಪತಿಗಳಾಗಿ ಸೇವೆ ಸಲ್ಲಿಸಿದ್ದಾರೆ. ವಿವಿ ಕ್ರಮಿಸಿದ ಹಾದಿಯಲ್ಲಿ ದೃಢತೆ ಇದೆ. ಶೈಕ್ಷಣಿಕ ಯಶಸ್ಸು ಇದೆ. ಈ ವಿವಿಯಲ್ಲಿ ಸುಸಜ್ಜಿತ ವಿಭಾಗಗಳಿದ್ದು, ಅವುಗಳು ಇಂದು ಸ್ವಲ್ಪ ಸುಧಾರಣೆ ಕಾಣಬೇಕಿದೆ. ಜೊತೆಗೆ ರಸ್ತೆಗಳು ಸುಧಾರಿಸಬೇಕಿದೆ’ ಎಂದರು.
‘ಸುಮಾರು 33 ವರ್ಷ ಗುಲಬರ್ಗಾ ವಿವಿಯಲ್ಲಿಯೇ ಕೆಲಸ ಮಾಡಿದ್ದೇನೆ. ಸಂಸ್ಥಾಪನಾ ದಿನಾಚರಣೆಗೆ ಮುಖ್ಯ ಅತಿಥಿಯಾಗಿದ್ದು ಖುಷಿ ತಂದಿದೆ’ ಎಂದು ಸಂತೋಷ ಹಂಚಿಕೊಂಡ ಪ್ರೊ.ರಾಜಾಸಾಬ್, ವಿಶ್ವವಿದ್ಯಾಲಯದ ಮೈಲುಗಲ್ಲುಗಳನ್ನು ನೆನಪಿಸಿದರು. ‘ಎಂ.ನಾಗರಾಜ ಆದಿಯಾಗಿ ಎಲ್ಲಾ ಕುಲಪತಿಗಳು ಅವರ ಮಿತಿಯಲ್ಲಿ ವಿ.ವಿ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಸೇರಿದಂತೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು, ರಾಜ್ಯಪಾಲರು, ಮುಖ್ಯಮಂತ್ರಿಗಳು ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು’ ಎಂದು ತಿಳಿಸಿದರು.
ಬುದ್ಧನ ಕುರುಹುಗಳಿರುವ ಸನ್ನತಿ, ಕನ್ನಡ ಮೊದಲ ಕೃತಿ ಕವಿರಾಜ ಮಾರ್ಗ, ವಿಜ್ಞಾನೇಶ್ವರನ ಮಿತಾಕ್ಷರ ಪ್ರಸ್ತಾಪಿಸಿದ ಅವರು, ‘ಕಲ್ಯಾಣ ಕರ್ನಾಟಕ ಆರ್ಥಿಕವಾಗಿ ಮಾತ್ರ ಹಿಂದುಳಿದಿರಬಹುದು. ಆದರೆ, ಉಳಿದೆಲ್ಲ ಕ್ಷೇತ್ರಗಳಲ್ಲಿ ಹಿಂದುಳಿದ ಪ್ರದೇಶ ಅಲ್ಲವೇ ಅಲ್ಲ’ ಎಂದು ಪ್ರತಿಪಾದಿಸಿದರು.
ಕೆ.ಬಿ.ಎನ್ ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕ ಡಾ. ಪಿ.ಎಸ್. ಶಂಕರ್ ಮಾತನಾಡಿ, ‘ಬೀದರ್ ಜಿಲ್ಲೆಯಿಂದ ಹರಪನಳ್ಳಿವರೆಗೆ ವ್ಯಾಪ್ತಿ ಹೊಂದಿದ್ದ ಗುಲಬರ್ಗಾ ವಿಶ್ವವಿದ್ಯಾಲಯ ಎರಡು ಜಿಲ್ಲೆಗಳಿಗೆ ಸೀಮಿತವಾಗಿರುವುದು ದುರದೃಷ್ಟಕರ. ಕ್ಯಾಲಿಪೋರ್ನಿಯಾ ವಿಶ್ವವಿದ್ಯಾಲಯದಂತೆ ಗುಲಬರ್ಗಾ ವಿವಿ ಬೀದರ್, ಗುಲಬರ್ಗಾ ವಿವಿ ರಾಯಚೂರು, ಗುಲಬರ್ಗಾ ವಿವಿ ಬಳ್ಳಾರಿ ಎಂದು ಮಾಡಬಹುದಿತ್ತು’ ಎಂದರು.
‘ಗುಲಬರ್ಗಾ ವಿವಿ ಸಂಶೋಧನೆಗೆ ಹೆಚ್ಚು ಒತ್ತು ಕೊಡಲಿ. ಸಮ್ಮೇಳನಗಳು ನಡೆಯಲಿ. ಸ್ಥಗಿತಗೊಂಡ ಕೆಲಸಗಳಿಗೆ ಚಾಲನೆ ಸಿಗಲಿ’ ಎಂದು ಆಶಿಸಿದ ಅವರು, ‘ನೂತನ ವಿದ್ಯಾರ್ಥಿಗಳು ಇಲ್ಲಿನ ವಾತಾವರಣಕ್ಕೆ ಹೊಂದಿಕೊಂಡು ಓದಬೇಕು. ಸಾಧನೆ ಮಾಡಬೇಕು’ ಎಂದು ಹಾರೈಸಿದರು.
ಕುಲಪತಿ ಪ್ರೊ. ಶಶಿಕಾಂತ ಎಸ್.ಉಡಿಕೇರಿ ಅಧ್ಯಕ್ಷತೆ ವಹಿಸಿದ್ದರು. ಸಿಂಡಿಕೇಟ್ ಸದಸ್ಯ ಪ್ರೊ. ಅಬ್ದುಲ್‌ರಬ್ ಉಸ್ತಾದ್, ವಿದ್ಯಾವಿಷಯಕ ಪರಿಷತ್ ಸದಸ್ಯ ಪ್ರೊ. ಬಸವರಾಜ ಸಣ್ಣಕ್ಕಿ, ಮೌಲ್ಯಮಾಪನ ಕುಲಸಚಿವ ಪ್ರೊ.ಎನ್.ಜಿ. ಕಣ್ಣೂರ, ವಿತ್ತಾಧಿಕಾರಿ ಜಯಾಂಬಿಕ ಉಪಸ್ಥಿತರಿದ್ದರು.
ಕುಲಸಚಿವ ಪ್ರೊ. ರಮೇಶ್ ಲಂಡನಕರ್ ಸ್ವಾಗತಿಸಿದರು. ಪ್ರೊ.ಎಂ.ಬಿ. ಸುಲೋಚನಾ ಮತ್ತು ಸುರೇಶ ಜಂಗೆ ಅತಿಥಿಗಳನ್ನು ಪರಿಚಯಿಸಿದರು. ಪ್ರೊ.ರಮೇಶ ರಾಠೋಡ ವಾರ್ಷಿಕ ವರದಿ ಓದಿದರು. ಸಾಧಕರು ಮತ್ತು ನಿವೃತ್ತ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.