ADVERTISEMENT

ಮದ್ಯ ಸೇವಿಸಿ ಶಾಲೆಯಲ್ಲೇ ಮಲಗಿದ ಮುಖ್ಯಶಿಕ್ಷಕ: ಆರೋಪ

ಕಾಳಗಿ ತಾಲ್ಲೂಕಿನ ಸಾಸರಗಾಂವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2025, 15:59 IST
Last Updated 5 ಮಾರ್ಚ್ 2025, 15:59 IST
ಕಾಳಗಿ ತಾಲ್ಲೂಕಿನ ಸಾಸರಗಾಂವ ತಾಂಡಾದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಶಂಕರ ರಾಠೋಡ ಶಾಲಾ ಕಚೇರಿಯಲ್ಲೇ ಮಲಗಿರುವುದು
ಕಾಳಗಿ ತಾಲ್ಲೂಕಿನ ಸಾಸರಗಾಂವ ತಾಂಡಾದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಶಂಕರ ರಾಠೋಡ ಶಾಲಾ ಕಚೇರಿಯಲ್ಲೇ ಮಲಗಿರುವುದು   

ಕಾಳಗಿ: ‘ತಾಲ್ಲೂಕಿನ ಸಾಸರಗಾಂವ ತಾಂಡಾದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯಶಿಕ್ಷಕ ಶಂಕರ ರಾಠೋಡ ಮದ್ಯಸೇವಿಸಿ ಶಾಲೆಗೆ ಬರುತ್ತಾರೆ. ಮಧ್ಯಾಹ್ನವೇ ಶಾಲೆಗೆ ಬೀಗ ಹಾಕಿ ಹೊರಹೋಗುತ್ತಾರೆ’ ಎಂದು ಮುಖಂಡ ರಾಮಶೆಟ್ಟಿ ರಾಠೋಡ, ಸೂರ್ಯಕಾಂತ ಪೂಜಾರಿ, ಹಣಮಂತ ಮಾಳಗಿ, ಮಹಿಮೂದಪಟೇಲ್ ಸಾಸರಗಾಂವ, ಸುಂದರ ಸಾಗರ, ಶಿವರಾಮ್ ರಾಠೋಡ, ಪುರಸಿಂಗ್ ರಾಠೋಡ ಮತ್ತಿತರ ಪೋಷಕರು ದೂರಿದ್ದಾರೆ.

ಶಾಲೆಯು 1ರಿಂದ 5ನೇ ತರಗತಿವರೆಗಿದ್ದು ಒಟ್ಟು 37ಮಕ್ಕಳಿದ್ದಾರೆ. ಒಬ್ಬರು ಪ್ರಭಾರ ಮುಖ್ಯಶಿಕ್ಷಕ, ಇನ್ನೊಬ್ಬರು ಅತಿಥಿ ಶಿಕ್ಷಕಿ ಇದ್ದಾರೆ.

‘ಮುಖ್ಯಶಿಕ್ಷಕರು ಹೊರಗಡೆ ಮದ್ಯಸೇವಿಸಿ ಬರುವುದಲ್ಲದೆ ಜತೆಗೆ ತಂದು ಶಾಲೆಯೊಳಗೂ ಕುಡಿಯುತ್ತಾರೆ. ಮಧ್ಯಾಹ್ನವೇ ಮಕ್ಕಳನ್ನು ಮನೆಗೆ ಬಿಟ್ಟು ಶಾಲೆಗೆ ಬೀಗ ಹಾಕಿ ಹೋಗುತ್ತಾರೆ’ ಎಂದು ಪೋಷಕರು ಆರೋಪಿಸಿದ್ದಾರೆ.

ADVERTISEMENT

ಈ ಕುರಿತು ಎರಡ್ಮೂರು ಬಾರಿ ತಿಳಿಹೇಳಿದರೂ ಅವರು ಅದನ್ನೇ ಮುಂದುವರೆಸಿದ್ದಾರೆ. ಈ ಕುರಿತು ಚಿಂಚೋಳಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೂ ತರಲಾಗಿದೆ, ಆದರೆ ಯಾವುದೇ ಪ್ರಯೋಜನವಾಗಿಲ್ಲ. ಇಂತಹ ಶಿಕ್ಷಕರಿಂದ ನಮ್ಮ ಮಕ್ಕಳು ಏನು ಕಲಿಯಲು ಸಾಧ್ಯವಿದೆ? ಎಂದು ಪೋಷಕರು ಪ್ರಶ್ನಿಸಿದ್ದಾರೆ.

‘ಆಹಾರ ಧಾನ್ಯಗಳು ಇಲ್ಲ ಎಂಬ ನೆಪದಿಂದ ಎಂಟು ದಿನಗಳಿಂದ ಮಕ್ಕಳಿಗೆ ಬಿಸಿಯೂಟ ನೀಡಿರುವುದಿಲ್ಲ, ಮಕ್ಕಳೆಲ್ಲರೂ ಮನೆಗೆ ಹೋಗಿ ಊಟ ಮಾಡಿದ್ದಾರೆ. ಮೇಲಧಿಕಾರಿಗಳು ಕೂಡಲೇ ಶಾಲೆಗೆ ಭೇಟಿ ನೀಡಿ ಕ್ರಮ ಕೈಗೊಳ್ಳಬೇಕು’ ಎಂದು ಪೋಷಕರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.