ಚಿಂಚೋಳಿ: ತಾಲ್ಲೂಕಿನಲ್ಲಿ ಅಧಿಕ ಮಳೆಯಿಂದ ತೊಗರಿ ಬೆಳೆ ಒಣಗುತ್ತಿದ್ದು ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ. ಸುಮಾರು 65 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತನೆ ನಡೆಸಿದ ರೈತರು ಅತಿವೃಷ್ಟಿಯಿಂದ ತೊಂದರೆಗೆ ಸಿಲುಕಿದ್ದಾರೆ.
ಜುಲೈ 3 ಮತ್ತು 4ನೇ ವಾರದಲ್ಲಿ ಸುರಿದ ಭಾರಿ ಮಳೆಯಿಂದ ಹೊಲದಲ್ಲಿರುವ ತೊಗರಿ ಬೆಳೆ ಒಣಗುತ್ತಿದೆ. ಅಧಿಕ ತೇವಾಂಶದಿಂದ ತೊಗರಿ ಬೆಳೆ ಬೇರು ಕೊಳೆತು ಹಳದಿ ವರ್ಣಕ್ಕೆ ತಿರುಗಿ ಒಣಗಿ ನಿಂತಿದೆ ಎಂದು ರೈತರು ಆಳಲು ತೋಡಿಕೊಳ್ಳುತ್ತಿದ್ದಾರೆ.
ತಗ್ಗು ಪ್ರದೇಶದ ಹೊಲಗಳಲ್ಲಿ ಅಧಿಕ ತೇವಾಂಶದಿಂದ ತೊಗರಿ ಬೆಳೆ ಒಣಗಿ ನಿಂತರೆ, ಇತರೆ ಬೆಳೆಗಳು ಆಹುತಿಯಾಗಿವೆ. ಈಗಲೂ ಹೊಲಗಳಲ್ಲಿ ಮಳೆ ನೀರು ನಿಂತಿರುವುದು ಗೋಚರಿಸುತ್ತಿದೆ.
ಕೆಲವರು ಯೂರಿಯಾ ಗೊಬ್ಬರ ಚೆಲ್ಲುತ್ತಿದ್ದಾರೆ ಆದರೆ ಯಾವುದೇ ಪ್ರಯೋಜನವಾಗುತ್ತಿಲ್ಲ. ಪ್ರಸಕ್ತ ವರ್ಷ ಜೂನ್ ತಿಂಗಳಲ್ಲಿ ಶೇ 55 ಮತ್ತು ಜುಲೈ ತಿಂಗಳಲ್ಲಿ ಶೇ 38 ಮಳೆಯ ಕೊರತೆ ಎದುರಾಗಿದೆ. ಆದರೆ ತಾಲ್ಲೂಕಿನ ಚಿಂಚೋಳಿ, ಕುಂಚಾವರಂ, ಕೋಡ್ಲಿ, ಐನಾಪುರ, ಚಿಮ್ಮನಚೋಡ ಹಾಗೂ ಸುಲೇಪೇಟ ಮೊದಲಾದ ಕಡೆ 8-10 ದಿನಗಳ ನಿರಂತರ ಮಳೆ ಸುರಿದಿದ್ದರಿಂದ ಹೊಲಗಳಲ್ಲಿ ನೀರು ಜಿನುಗುತ್ತಿದೆ. ಇದರಿಂದ ಮುಂಗಾರಿನ ಬೆಳೆಗಳಾದ ತೊಗರಿ, ಹೆಸರು, ಉದ್ದು, ಸೋಯಾ ಬೆಳೆಗಳು ಆಪತ್ತಿಗೆ ಒಳಗಾಗಿವೆ. ಬೆಳೆಗಳು ಹಳದಿ ವರ್ಣಕ್ಕೆ ತಿರುಗುತ್ತಿವೆ.
ತಾಲ್ಲೂಕಿನಲ್ಲಿ ಮುಂಗಾರು ಪೂರ್ವ ಅಧಿಕ ಮಳೆಯಾಗಿದೆ. ಮುಂಗಾರು ಆರಂಭವಾದ ಮೇಲೆ ಸರಾಸರಿಗಿಂತಲೂ ಕಡಿಮೆ ಮಳೆಯಾಗಿದ್ದು ಒಂದೇ ವಾರ ನಿರಂತರ ಸುರಿದ ವರ್ಷಧಾರೆಗೆ ರೈತ ಬಸವಳಿದಿದ್ದಾನೆ.
23 ಸಾವಿರ ರೈತರಿಂದ ವಿಮೆ ನೋಂದಣಿ
ಚಿಂಚೋಳಿ ತಾಲ್ಲೂಕಿನಲ್ಲಿ ಪ್ರಸಕ್ತ ವರ್ಷ 23 ಸಾವಿರ ರೈತರು ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಅಡಿಯಲ್ಲಿ ಬೆಳೆ ವಿಮೆ ನೋಂದಣಿ ಮಾಡಿಸಿದ್ದಾರೆ. ವಿಮೆ ನೋಂದಣಿಗೆ ಜುಲೈ 31 ಕೊನೆಯ ದಿನವಾಗಿದೆ ಎಂದು ಸಹಾಯಕ ಕೃಷಿ ನಿರ್ದೆಶಕ ವೀರಶೆಟ್ಟಿ ರಾಠೋಡ ತಿಳಿಸಿದ್ದಾರೆ. ಸಧ್ಯ ಚಿಂಚೋಳಿ ಸುಲೇಪೇಟ ಹಾಗೂ ಐನಾಪುರ ಹೋಬಳಿ ವ್ಯಾಪ್ತಿಯ 23 ಸಾವಿರ ರೈತರು ನೋಂದಣಿ ಮಾಡಿಸಿದ್ದಾರೆ.
ನಮಗೆ ಮಳೆಯ ಕೊರತೆಯಿದೆ ಆದರೂ ತಗ್ಗು ಪ್ರದೇಶದ ಬೆಳೆಗಳು ಹಾಳಾಗಿದ್ದರೆ ಈ ಕುರಿತು ಸಮೀಕ್ಷೆ ನಡೆಸಲು ಸರ್ಕಾರದಿಂದ ನಿರ್ದೇಶನ ಬಂದರೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು– ಸುಬ್ಬಣ್ಣ ಜಮಖಂಡಿ, ತಹಶೀಲ್ದಾರ, ಚಿಂಚೋಳಿ
ಚಿಂಚೋಳಿ ತಾಲ್ಲೂಕಿನಲ್ಲಿ ವಿಮೆ ನೋಂದಣಿ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 50 ರಷ್ಟು ಏರಿಕೆಯಾಗಿದೆ. ಇನ್ನುಳಿದ ರೈತರು ವಿಮಾ ನೋಂದಣಿ ಮಾಡಿಸಿದರೆ ಬೆಳೆ ನಷ್ಟ ಉಂಟಾದರೆ ಪರಿಹಾರ ಲಭಿಸುತ್ತದೆವೀರಶೆಟ್ಟಿ ರಾಠೋಡ, ಸಹಾಯಕ ಕೃಷಿ ನಿರ್ದೆಶಕ, ಚಿಂಚೋಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.