ADVERTISEMENT

ನೆರವಿನ ನಿರೀಕ್ಷೆಯಲ್ಲಿ ಹೈಜಂಪ್ ಅಥ್ಲೀಟ್ ಪಲ್ಲವಿ

ಜಾಗತಿಕ ವಿವಿಗಳ ಕ್ರೀಡಾಕೂಟಕ್ಕೆ ಪಲ್ಲವಿ ಆಯ್ಕೆ: ಮಂಗಳೂರು ವಿವಿಯಿಂದ ಸಿಗದ ನೆರವು

ಮಲ್ಲಿಕಾರ್ಜುನ ನಾಲವಾರ
Published 18 ಮೇ 2025, 0:30 IST
Last Updated 18 ಮೇ 2025, 0:30 IST
ಪಲ್ಲವಿ ಪಾಟೀಲ
ಪಲ್ಲವಿ ಪಾಟೀಲ   

ಕಲಬುರಗಿ: ಜರ್ಮನಿಯಲ್ಲಿ ಜುಲೈ 16ರಿಂದ ನಡೆಯುವ ಜಾಗತಿಕ ವಿಶ್ವವಿದ್ಯಾಲಯಗಳ ಕ್ರೀಡಾಕೂಟದ ಹೈಜಂಪ್‌ ಸ್ಪರ್ಧೆಗೆ ಆಯ್ಕೆಯಾಗಿರುವ ವಿದ್ಯಾರ್ಥಿನಿ ಪಲ್ಲವಿ ಪಾಟೀಲ ಅವರಿಗೆ ಮಂಗಳೂರು ವಿಶ್ವವಿದ್ಯಾಲಯದಿಂದ ಆರ್ಥಿಕ ನೆರವು ದೊರೆಯದ ಕಾರಣ ಕ್ರೀಡಾಕೂಟಕ್ಕೆ ತೆರಳಲು ಪರದಾಡುವಂತಾಗಿದೆ.

ಅಥ್ಲೆಟಿಕ್ಸ್ ವಿಭಾಗದಡಿ ಮಂಗಳೂರು ವಿವಿ ವ್ಯಾಪ್ತಿಯ 12 ವಿದ್ಯಾರ್ಥಿಗಳು ಭಾರತವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ. ಉಡುಪಿಯ ತೆಂಕನಿಡಿಯೂರು ಸರ್ಕಾರಿ ಸ್ನಾತಕೋತ್ತರ ಕೇಂದ್ರದ ಎಂಎ ವಿದ್ಯಾರ್ಥಿನಿ ಪಲ್ಲವಿ ಹಾಗೂ ಆಳ್ವಾಸ್‌ನ 11 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಆಳ್ವಾಸ್ ಸಂಸ್ಥೆಯು ತನ್ನ ವಿದ್ಯಾರ್ಥಿಗಳನ್ನು ಕಳುಹಿಸಲು ಸಜ್ಜಾಗಿದೆ. ಆದರೆ, ಪಲ್ಲವಿಗೆ ಅಗತ್ಯವಾದಷ್ಟು ಹಣಕಾಸಿನ ನೆರವು ಕೊಡಲು ಆಗುವುದಿಲ್ಲ ಎಂದು ಮಂಗಳೂರು ವಿವಿ ಕೈಚೆಲ್ಲಿದೆ. ಇದರಿಂದ ವಿದ್ಯಾರ್ಥಿನಿಯ ಪದಕ ಗೆಲ್ಲಬೇಕು ಎಂಬ ಕನಸಿಗೆ ತಣ್ಣೀರೆರಚಿದಂತಾಗಿದೆ.

2023ರಲ್ಲಿ ಉತ್ತರ ಪ್ರದೇಶದ ಲಖನೌದಲ್ಲಿ ನಡೆದ ಖೇಲೋ ಇಂಡಿಯಾ ಕ್ರೀಡಾಕೂಟದ ಹೈಜಂಪ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ಪಲ್ಲವಿ, ರಾಷ್ಟ್ರ ಮಟ್ಟದ ಇತರೆ ಸ್ಪರ್ಧೆಗಳಲ್ಲಿ 4 ಬೆಳ್ಳಿ ಪದಕ ಪಡೆದಿದ್ದಾರೆ. ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿಯೂ 15 ಚಿನ್ನದ ಪದಕ ಗಳಿಸಿದ್ದಾರೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸುವ ಆಸೆಗೆ ಈಗ ಹಣದ ಕೊರತೆ ಅಡ್ಡಿಯಾಗಿದೆ.

ADVERTISEMENT

‘ಪ್ರಯಾಣದ ವೆಚ್ಚ, ವೀಸಾ, ನೋಂದಣಿ ಶುಲ್ಕ ಸೇರಿ ₹2.50 ಲಕ್ಷ ಬೇಕಾಗುತ್ತದೆ. ವಿಶ್ವವಿದ್ಯಾಲಯದವರು ನೀನೇ ಹಣ ಖರ್ಚು ಮಾಡಿ ಹೋಗುವಂತೆ ಹೇಳಿದ್ದಾರೆ. ನನ್ನ ತಂದೆಯ ಬಳಿ ಅಷ್ಟೊಂದು ಹಣವಿಲ್ಲ. ಮೇ 19ರ ಒಳಗೆ ಹಣ ಕಟ್ಟದೆ ಇದ್ದರೆ ಅವಕಾಶದಿಂದ ವಂಚಿತಗೊಳ್ಳುತ್ತೇನೆ. ಇಷ್ಟು ದಿನದ ನನ್ನ ಪರಿಶ್ರಮ ವ್ಯರ್ಥವಾಗುತ್ತದೆ’ ಎಂದು ಪಲ್ಲವಿ ಅಲವತ್ತುಕೊಂಡರು.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ಮಂಗಳೂರು ವಿವಿಯ ಕುಲಪತಿ ಪ್ರೊ.ಪಿ.ಎಲ್. ಧರ್ಮ, ‘ನನಗೆ ಈ ಬಗ್ಗೆ ಮಾಹಿತಿ ಬಂದಿಲ್ಲ. ಕಾಲೇಜಿನ ಪ್ರಾಂಶುಪಾಲರು ಪತ್ರ ಬರೆದರೆ ಅನುದಾನ ಕೊಡುವ ಬಗ್ಗೆ ಸಿಂಡಿಕೇಟ್‌ ಸಭೆಯ ಮುಂದೆ ಇರಿಸಬೇಕಾಗುತ್ತದೆ. ನಮ್ಮ ಬಳಿ ವಿದ್ಯಾರ್ಥಿನಿಯನ್ನು ಜರ್ಮನಿಗೆ ಕಳಿಸುವಷ್ಟು ಅನುದಾನ ಇಲ್ಲ. ಸಿಬ್ಬಂದಿಗೆ ಸಂಬಳವನ್ನೇ ಸರಿಯಾಗಿ ಕೊಡಲು ಆಗುತ್ತಿಲ್ಲ’ ಎಂದು ಅಳಲು ತೋಡಿಕೊಂಡರು.

ಸಹಾಯ ಮಾಡಲು ಇಚ್ಛಿಸುವವರು ಮೊ: 9945069125 ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.