ADVERTISEMENT

ಕಲಬುರಗಿ | ಹಿಂದೂ ಮಹಾಗಣಪತಿ ವಿಸರ್ಜನೆ: ಮೆರವಣಿಗೆಯಲ್ಲಿ ಸಂಭ್ರಮದ ಹೊನಲು

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2025, 6:13 IST
Last Updated 17 ಸೆಪ್ಟೆಂಬರ್ 2025, 6:13 IST
<div class="paragraphs"><p>ಹಿಂದೂ ಮಹಾಗಣಪತಿ ವಿಸರ್ಜನೆ ಅಂಗವಾಗಿ ಕಲಬುರಗಿಯ ‌ಚೌಕ್‌ ಪೊಲೀಸ್‌ ಸ್ಟೇಷನ್‌ ಬಳಿ ಮಂಗಳವಾರ ನಡೆದ ಶೋಭಾಯಾತ್ರೆ&nbsp;&nbsp;&nbsp; </p></div>

ಹಿಂದೂ ಮಹಾಗಣಪತಿ ವಿಸರ್ಜನೆ ಅಂಗವಾಗಿ ಕಲಬುರಗಿಯ ‌ಚೌಕ್‌ ಪೊಲೀಸ್‌ ಸ್ಟೇಷನ್‌ ಬಳಿ ಮಂಗಳವಾರ ನಡೆದ ಶೋಭಾಯಾತ್ರೆ   

   

ಪ್ರಜಾವಾಣಿ ಚಿತ್ರ: ತಾಜುದ್ದೀನ್‌ ಆಜಾದ್‌

ಕಲಬುರಗಿ: ದಾರಿಯುದ್ದಕ್ಕೂ ರಾರಾಜಿಸಿದ ಭಗವಾ ಧ್ವಜಗಳು. ಧ್ವನಿವರ್ಧಕಗಳಿಂದ ಹೊಮ್ಮುತ್ತಿದ್ದ ಅಬ್ಬರದ ಸಂಗೀತ. ಕಿವಿಗಡಚ್ಛಿಕ್ಕುವ ಸಂಗೀತಕ್ಕೆ ತಕ್ಕಂತೆ ಹೆಜ್ಜೆ ಹಾಕಿದ ಯುವಜನರು. ಮೊಳಗಿದ ಜೈಶ್ರೀರಾಮ ಘೋಷಣೆ. ರಸ್ತೆಯ ಇಕ್ಕೆಲಗಳಲ್ಲಿ ನಿಂತು ಮೆರವಣಿಗೆ ಕಣ್ತುಂಬಿಕೊಂಡ ಜನ. ಬ್ಲೋವರ್‌ ಮೂಲಕ ಚಿಮ್ಮಿದ ಕೇಸರಿ ಬಣ್ಣದ ಪರಪರಿಗಳ ತುಂಡು–ಕೇಸರಿ ಬಣ್ಣ...

ADVERTISEMENT

ಹಿಂದೂ ಮಹಾಗಣಪತಿ ಸಮಿತಿಯಿಂದ ನಗರದ ಬಹಮನಿ ಕೋಟೆ ಎದುರು ಪ್ರತಿಷ್ಠಾಪಿಸಿದ್ದ ಗಣಪತಿ ಮೂರ್ತಿ ವಿಸರ್ಜನಾ ಮೆರವಣಿಗೆಯಲ್ಲಿ ಮಂಗಳವಾರ ಕಂಡ ದೃಶ್ಯಗಳಿವು.

ಹಿಂದೂ ಮಹಾಗಣಪತಿಗೆ ಮಂಗಳವಾರ ಬೆಳಿಗ್ಗೆ ಜಿಲ್ಲೆಯ ಮಠಾಧೀಶರ, ಉತ್ಸವ ಸಮಿತಿಯ ಪದಾಧಿಕಾರಿಗಳ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಲಿಂಗದ ಕಾಯಿ, ಖಡ್ಗ ಹಾಗೂ ಉಡುದಾರ ಹರಾಜು ನಡೆಯಿತು. ಮಧ್ಯಾಹ್ನ 12.15ರ ಹೊತ್ತಿಗೆ ಅದ್ದೂರಿ ಶೋಭಾಯಾತ್ರೆ ನಡೆಸಿ, ಸಂಜೆ 7.30ರ ಹೊತ್ತಿಗೆ ನಗರದ ಶರಣಬಸವೇಶ್ವರ ಅಪ್ಪ ಕೆರೆಯಲ್ಲಿ ವಿಧಿವತ್ತಾಗಿ ವಿಸರ್ಜನೆ ಮಾಡಲಾಯಿತು.

ಶೋಭಾಯಾತ್ರೆಯು ನಗರದ ಕೋಟೆಯ ಮುಂಭಾಗದಿಂದ ಹೊರಟು ಪ್ರಕಾಶ್ ಏಷಿಯನ್ ಮಾಲ್, ಹುಮನಾಬಾದ್ ಬೇಸ್ ಮೂಲಕ ಚೌಕ್ ವೃತ್ತ ತಲುಪಿತು. ಅಲ್ಲಿ ಸುತ್ತಲಿನ ಜನರು ಧಾವಿಸಿ ಬಂದರು. ವಿವಿಧ ವಾದ್ಯಗಳು, ಡಿ.ಜೆ ಸದ್ದಿಗೆ ಕುಣಿದು ಕುಪ್ಪಳಿಸಿದರು. ಕೆಲ ಹೊತ್ತು ಹನುಮಾನ ಚಾಲೀಸಾ ಕೂಡ ಪಠಿಸಲಾಯಿತು.

ಬಳಿಕ ಮೆರವಣಿಗೆ ಚೌಕ್ ಪೊಲೀಸ್ ಠಾಣೆ ಎದುರಿನಿಂದ ಕಪಡಾ ಬಜಾರ್‌, ಚಪ್ಪಲ್ ಬಜಾರ, ಮೈಬಾಸ್ ಮಸೀದಿ ಎದುರಿನಿಂದ ಸೂಪರ್‌ ಮಾರ್ಕೆಟ್‌ ತಲುಪಿತು. ಅಲ್ಲಿ ಸಾವಿರಾರು ಜನರು ಶೋಭಾಯಾತ್ರೆಯಲ್ಲಿ ಪಾಲ್ಗೊಂಡು ಭಕ್ತಿ ಮೆರೆದರು. ಕಿವಿಡಚ್ಚಿಕ್ಕುವ ಡಿಜೆ ಸದ್ದಿಗೆ ಭಗವಾ ಧ್ವಜ ಬೀಸಿ, ಹೆಜ್ಜೆ ಹಾಕಿ ಗಮನ ಸೆಳೆದರು. ಕೆಲ ಯುವಕರು ಲಾಠಿ ತಿರುಗಿಸಿ ಕೌಶಲ ಪ್ರದರ್ಶಿಸಿದರು. ಅಲ್ಲಿಂದ ಮೆರವಣಿಗೆಯು ಬ್ರಹ್ಮಪುರ ಪೊಲೀಸ್ ಠಾಣೆ, ಜಗತ್ ವೃತ್ತ, ಸಂಗೊಳ್ಳಿ ರಾಯಣ್ಣನ ವೃತ್ತದ ಮೂಲಕ ಅಪ್ಪನ ಕೆರೆ ತಲುಪಿ, ವಿಸರ್ಜನಾ ಕಾರ್ಯಕ್ರಮದೊಂದಿಗೆ ಸಂಪನ್ನಗೊಂಡಿತು. ನಾಸಿಕ್ ಡೋಲು, ಪರಳಿಯ ಡೋಲ್ ತಾಷಾ, ಸಿಂದಗಿ ಚಿಟ್ಟಲಗಿ, ಸ್ಥಳೀಯ ಡೋಳ್ಳು, ಹಲಗಿ ಶೋಭಾಯಾತ್ರೆಗೆ ಮೆರುಗು ಹೆಚ್ಚಿಸಿದವು. 

ಮೆರವಣಿಗೆಗೆ ಚಾಲನೆ:

ಹಿಂದೂ ಮಹಾಗಣಪತಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಶೋಭಾಯಾತ್ರೆಗೆ ಶ್ರೀನಿವಾಸ ಸರಡಗಿಯ ಶಕ್ತಿ ಪೀಠದ ಅಪ್ಪಾರಾವ ದೇವಿ ಮುತ್ಯಾ, ಸಾವಳಗಿಯ ಶಾಂತಲಿಂಗೇಶ್ವರ ಶ್ರೀ, ಆರ್‌ಎಸ್‌ಎಸ್‌ನ ಕಲಬುರಗಿ ವಿಭಾಗ ಪ್ರಚಾರಕ ವಿಜಯ್ ಮಹಾಂತೇಶ, ಬಿಜೆಪಿ ನಗರ ಜಿಲ್ಲಾಧ್ಯಕ್ಷ ಚಂದು ಪಾಟೀಲ, ಮಾಜಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ಹಿಂದೂ ಮಹಾಗಣಪತಿ ಸಮಿತಿಯ ಸಂಜೀವ್ ಗುಪ್ತಾ, ಗೌರವಾಧ್ಯಕ್ಷ ಮಲ್ಲಿಕಾರ್ಜುನ ಗಂಗಾ, ಸುರೇಶ್ ಟೆಂಗಳಿ, ಕಾರ್ಯದರ್ಶಿ ಶ್ರೀಮಂತ ರಾಜು ನವಲದಿ ಜಂಟಿಯಾಗಿ ಚಾಲನೆ ನೀಡಿದರು. ಚಂದು ಪಾಟೀಲ ತುಸು ದೂರ ಗಣೇಶ ಮೂರ್ತಿಯಿದ್ದ ಟ್ರ್ಯಾಕ್ಟರ್‌ ಚಲಾಯಿಸಿ ಗಮನ ಸೆಳೆದರು.

ಬಿಗಿ ಬಂದೋಬಸ್ತ್‌:

ಕಲಬುರಗಿ ನಗರ ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ., ಡಿಸಿಪಿ ಪ್ರವೀಣ್‌ ನಾಯಕ, ಎಸಿಪಿಗಳು, ಇನ್‌ಸ್ಪೆಕ್ಟರ್‌ಗಳು ಸೇರಿದಂತೆ ಬಿಗಿ ಪೊಲೀಸ್‌ ಬಂದೋಬಸ್ತ್‌ ವಹಿಸಲಾಗಿತ್ತು.

‘ಗಣಪತಿ ವಿಸರ್ಜನೆಗೆ 800ರಷ್ಟು ಪೊಲೀಸರು ಅಧಿಕಾರಿಗಳು–ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು’ ಎಂದು ನಗರ ಪೊಲೀಸ್ ಕಮಿಷನರ್‌ ಶರಣಪ್ಪ ಎಸ್‌.ಡಿ. ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಲಿಂಗದಕಾಯಿ, ಖಡ್ಗ ಹರಾಜು:

ಬೆಳಿಗ್ಗೆ ಕೋಟೆ ಎದುರಿನ ಗಣೇಶ ಮಂಟಪದ ಬಳಿ ಗಣಪತಿಗೆ ತೊಡಿಸಿದ ವಸ್ತುಗಳ ಹರಾಜು ನಡೆಯಿತು. ‘ಈ ವರ್ಷದ ಹರಾಜಿನಲ್ಲಿ ಲಿಂಗದಕಾಯಿಯನ್ನು ಉಮೇಶ ಎಂಬುವರು ₹21 ಸಾವಿರಕ್ಕೆ ಖಡ್ಗವನ್ನು ಡಾ.ಸುಧಾ ಹಾಲಕೈ ₹15 ಸಾವಿರಕ್ಕೆ ಪಡೆದರು. ಉಡುದಾರವನ್ನು ₹15 ಸಾವಿರಕ್ಕೆ ಹರಾಜು ಮಾಡಲಾಯಿತು’ ಎಂದು ಹಿಂದೂ ಮಹಾಗಣಪತಿ ಉತ್ಸವ ಸಮಿತಿಯ ಉಪಾಧ್ಯಕ್ಷ ಸಿದ್ದರಾಜ ಬಿರಾದಾರ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.