ADVERTISEMENT

ಸೌಹಾರ್ದದ ಸಂದೇಶ: ಮುಸ್ಲಿಮರಿಲ್ಲದ ಊರಿನಲ್ಲಿ ದರ್ಗಾ ನಿರ್ಮಿಸಿದ ಹಿಂದೂ ಧರ್ಮೀಯರು

​ಪ್ರಜಾವಾಣಿ ವಾರ್ತೆ
Published 28 ಜೂನ್ 2025, 5:19 IST
Last Updated 28 ಜೂನ್ 2025, 5:19 IST
ಜೇವರ್ಗಿ ತಾಲ್ಲೂಕಿನ ಕಲ್ಲಹಂಗರಗಾ ಗ್ರಾಮದಲ್ಲಿ ನಿರ್ಮಿಸಿರುವ ಶಾ ಹುಸೇನಿ ಬಾಷಾ ದರ್ಗಾದ ನೂತನ ಕಟ್ಟಡ 
ಜೇವರ್ಗಿ ತಾಲ್ಲೂಕಿನ ಕಲ್ಲಹಂಗರಗಾ ಗ್ರಾಮದಲ್ಲಿ ನಿರ್ಮಿಸಿರುವ ಶಾ ಹುಸೇನಿ ಬಾಷಾ ದರ್ಗಾದ ನೂತನ ಕಟ್ಟಡ    

ಜೇವರ್ಗಿ: ತಾಲ್ಲೂಕಿನ ಕಲ್ಲಹಂಗರಗಾ ಗ್ರಾಮದಲ್ಲಿ ಮುಸ್ಲಿಮರು ಇಲ್ಲದಿದ್ದರೂ ಹಿಂದೂ ಸಮಾಜದವರು ಸೇರಿಕೊಂಡು ದರ್ಗಾ ನಿರ್ಮಿಸುವ ಮೂಲಕ ಕೋಮು ಸಾಮರಸ್ಯದ ಸಂದೇಶ ಸಾರಿದ್ದಾರೆ. 

ಕಲ್ಲಹಂಗರಗಾದಲ್ಲಿ ಹಿಂದೂಗಳು ಮಾತ್ರ ವಾಸ ಮಾಡುತ್ತಿದ್ದಾರೆ. ಇಲ್ಲಿ ಶಾ ಹುಸೇನಿ ಬಾಷಾ ಎಂಬ ಮುಸ್ಲಿಂ ಮೌಲ್ವಿಯೊಬ್ಬರ ಸಮಾಧಿ ಇದೆ. ಆ ಸಮಾಧಿಯನ್ನು ಹಿಂದೂಗಳೇ ಪೂಜೆ ಮಾಡುತ್ತಿದ್ದಾರೆ.

ಜೇವರ್ಗಿ ಪಟ್ಟಣದಿಂದ 15 ಕಿ.ಮೀ ದೂರದಲ್ಲಿರುವ ಕಲ್ಲಹಂಗರಗಾ ಗ್ರಾಮದಲ್ಲಿ 5 ಸಾವಿರ ಜನಸಂಖ್ಯೆ ಇದ್ದರೂ, ಒಂದೇ ಒಂದು ಮುಸ್ಲಿಂ ಕುಟುಂಬವಿಲ್ಲ.

ADVERTISEMENT

ಶತಮಾನಗಳಷ್ಟು ಹಳೆಯದಾದ ಶಿಥಿಲಗೊಂಡ 6×8 ಅಡಿಯ ಸ್ಥಳದ ಚಿಕ್ಕ ಕೊಣೆಯೊಂದರಲ್ಲಿ ಶಾ ಹುಸೇನಿ ಬಾಷಾ ದರ್ಗಾ ಇತ್ತು. ಗ್ರಾಮದ ಯುವಕರೆಲ್ಲ ಸೇರಿಕೊಂಡು ದರ್ಗಾ ನಿರ್ಮಾಣಕ್ಕೆ ಸಂಕಲ್ಪ ಮಾಡಿದರು. ಗ್ರಾಮದ ಜನರಿಂದ ₹4 ಲಕ್ಷ ದೇಣಿಗೆ ಸಂಗ್ರಹಿಸಿದ್ದಾರೆ. ಕೆಕೆಆರ್‌ಡಿಬಿ ಅಧ್ಯಕ್ಷರೂ ಆಗಿರುವ ಶಾಸಕ ಡಾ.ಅಜಯಸಿಂಗ್ ಅವರು ದರ್ಗಾ ನಿರ್ಮಾಣಕ್ಕೆ ₹5 ಲಕ್ಷ ಅನುದಾನ ನೀಡಿದ್ದಾರೆ. ಒಟ್ಟು ₹10 ಲಕ್ಷ ಅಂದಾಜು ಮೊತ್ತದಲ್ಲಿ 20×12 ಅಡಿಯ ನಿವೇಶನದಲ್ಲಿ ದರ್ಗಾ ನಿರ್ಮಾಣಗೊಂಡಿದೆ. ಪಕ್ಕದಲ್ಲಿ ಒಂದು ಕೋಣೆ‌ಯನ್ನೂ ನಿರ್ಮಿಸಲಾಗಿದೆ.

ಕಲ್ಲಹಂಗರಗಾ ಗ್ರಾಮದಲ್ಲಿ ಶಾ ಹುಸೇನಿ ಬಾಷಾ ಉರುಸ್ ಅನ್ನು ಹಿಂದೂಗಳೇ ಆಚರಿಸುತ್ತಾರೆ. ಪ್ರತಿ ವರ್ಷ ಮೊಹರಂ ಈ ಗ್ರಾಮದಲ್ಲಿ ವಿಜೃಂಭಣೆಯಿಂದ ಜರುಗುತ್ತದೆ.

ದರ್ಗಾ ಉದ್ಘಾಟನೆ:

ತಾಲ್ಲೂಕಿನ ಕಲ್ಲಹಂಗರಗಾ ಗ್ರಾಮದಲ್ಲಿ ನಿರ್ಮಿಸಿರುವ ನೂತನ ದರ್ಗಾವನ್ನು ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಶುಕ್ರವಾರ ಉದ್ಘಾಟಿಸಿದರು. ನೆಲೋಗಿ ವಿರಕ್ತ ಮಠದ ಸಿದ್ದಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. 

ಬಿಜೆಪಿ ಮುಖಂಡ ಶಿವರಾಜ ಪಾಟೀಲ ರದ್ದೇವಾಡಗಿ, ರಾಜಶೇಖರ ಸಾಹು ಸೀರಿ, ಜಯಪ್ರಕಾಶ್ ಪಾಟೀಲ ನರಿಬೋಳ, ವೀರಶೈವ ಸಮಾಜದ ಅಧ್ಯಕ್ಷ ಸಿದ್ದು ಸಾಹು ಅಂಗಡಿ ಹಾಗೂ ಗ್ರಾಮಸ್ಥರು ಹಾಜರಿದ್ದರು. ದರ್ಗಾಕ್ಕೆ ಬಂದ ಭಕ್ತರಿಗಾಗಿ ಅನ್ನಪ್ರಸಾದ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು.

ದೊಡ್ಡಪ್ಪಗೌಡ ಪಾಟೀಲ
ಶಾ ಹುಸೇನಿ ಬಾಷಾ ಸಂತ ಈ ಗ್ರಾಮದಲ್ಲೇ ಹಿಂದೆ ನೆಲೆಸಿದ್ದರು. ಗ್ರಾಮದಲ್ಲಿ ಮುಸ್ಲಿಮರು ಇಲ್ಲದಿದ್ದರೂ ಉರುಸ್ ಹಾಗೂ ಮೊಹರಂ ಅನ್ನು ಹಿಂದೂಗಳೇ ಸಂಭ್ರಮದಿಂದ ಆಚರಿಸುತ್ತಾರೆ
– ದೊಡ್ಡಪ್ಪಗೌಡ ಪಾಟೀಲ ಕಲ್ಲಹಂಗರಗಾ ದರ್ಗಾ ಕಮಿಟಿ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.