ADVERTISEMENT

ಕಲಬುರಗಿ | ಮರ್ಯಾದೆಗೇಡು ಹತ್ಯೆ ತಡೆ ಕಾಯ್ದೆ ಜಾರಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 4 ಜನವರಿ 2026, 7:45 IST
Last Updated 4 ಜನವರಿ 2026, 7:45 IST
ಕಲಬುರಗಿಯ ಟೌನ್‌ಹಾಲ್‌ ಬಳಿಯ ಬಾಬು ಜಗಜೀವನರಾಂ ಪ್ರತಿಮೆ ಎದುರು ಶೋಷಿತ ಜನಜಾಗೃತಿ ವೇದಿಕೆ ಪದಾಧಿಕಾರಿಗಳು ಶನಿವಾರ ಧರಣಿ ನಡೆಸಿದರು
ಪ್ರಜಾವಾಣಿ ಚಿತ್ರ
ಕಲಬುರಗಿಯ ಟೌನ್‌ಹಾಲ್‌ ಬಳಿಯ ಬಾಬು ಜಗಜೀವನರಾಂ ಪ್ರತಿಮೆ ಎದುರು ಶೋಷಿತ ಜನಜಾಗೃತಿ ವೇದಿಕೆ ಪದಾಧಿಕಾರಿಗಳು ಶನಿವಾರ ಧರಣಿ ನಡೆಸಿದರು ಪ್ರಜಾವಾಣಿ ಚಿತ್ರ   

ಕಲಬುರಗಿ: ಹುಬ್ಬಳ್ಳಿ ತಾಲ್ಲೂಕಿನ ಇನಾಂವೀರಾಪುರ ಗ್ರಾಮದಲ್ಲಿ ನಡೆದ ಮರ್ಯಾದೆಗೇಡು ಹತ್ಯೆ ಹಾಗೂ ದಲಿತ ಕುಟುಂಬದ ಮೇಲೆ ನಡೆದ ಹಲ್ಲೆ ಖಂಡಿಸಿ ಶೋಷಿತ ಜನ ಜಾಗೃತಿ ವೇದಿಕೆ ಹಾಗೂ ಕರ್ನಾಟಕ ಮಹಿಳಾಪರ ಜನಜಾಗೃತಿ ಸಮಿತಿ ಪದಾಧಿಕಾರಿಗಳು ಶನಿವಾರ ಧರಣಿ ಸತ್ಯಾಗ್ರಹ ನಡೆಸಿದರು.

ನಗರದ ಮಹಾನಗರ ಪಾಲಿಕೆಯ ಬಳಿವಿರುವ ಬಾಬು ಜಗಜೀವನರಾಮ್‌ ಪುತ್ಥಳಿ ಎದುರು ಧರಣಿ ನಡೆಸಿದ ಪದಾಧಿಕಾರಿಗಳು ಮರ್ಯದೆಗೇಡು ಹತ್ಯೆ ಕಾಯ್ದೆ ಜಾರಿ ಮಾಡುವಂತೆ ಆಗ್ರಹಿಸಿದರು.

‘ಅನ್ಯ ಜಾತಿಯ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದಕ್ಕೆ ಏಳು ತಿಂಗಳ ಗರ್ಭಿಣಿಯಾಗಿದ್ದ ಮಾನ್ಯಾ ಪಾಟೀಲ ಮೇಲೆ ಸ್ವತಃ ಜನ್ಮ ನೀಡಿದ ತಂದೆ ಹಾಗೂ ಕುಟುಂಬಸ್ಥರು ನಡೆಸಿದ್ದ ಮರ್ಯಾದೆಗೇಡು ಹತ್ಯೆ ಇಡೀ ರಾಜ್ಯವನ್ನು ಬೆಚ್ಚಿಬೀಳಿಸಿದೆ. ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ಕಠಿಣ ಕ್ರಮಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ನೊಂದ ಕುಟುಂಬಕ್ಕೆ ರಕ್ಷಣೆ ನೀಡಬೇಕು. ಹಲ್ಲೆ ಮಾಡಿದ ಆರೋಪಿಯನ್ನು ಗಲ್ಲಿಗೇರಿಸಿ, ನೊಂದ ಕುಟುಂಬಕ್ಕೆ ₹ 1 ಕೋಟಿ ಪರಿಹಾರ ನೀಡಬೇಕು. ಕುಟುಂಬಕ್ಕೆ 2 ಎಕರೆ ಜಮೀನು ಮತ್ತು ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ಉದ್ಯೋಗ ನೀಡಬೇಕು’ ಎಂದು ಆಗ್ರಹಿಸಿದರು.

ಸರ್ಕಾರ ಕೂಡಲೇ ಮರ್ಯಾದೆಗೇಡು ಹತ್ಯೆ ವಿರುದ್ಧ ಕಠಿಣ ಕಾಯ್ದೆ ರೂಪಿಸಲು ಸರ್ಕಾರ ಮುಂದಾಗಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಧರಣಿ ಸತ್ಯಾಗ್ರಹದಲ್ಲಿ ಶೋಷಿತ ಜನಜಾಗೃತಿ ವೇದಿಕೆ ರಾಜ್ಯ ಮುಖಂಡ ಬಸವರಾಜ ಜವಳಿ, ಸುಂದರ ಸಾಗರ, ಜಿಲ್ಲಾ ಅಧ್ಯಕ್ಷ ಲಕ್ಕಪ್ಪ ಜವಳಿ, ಮಾತಂಗಿ ವಿಕಾಸ ಸಮಿತಿ ರಾಜ್ಯ ಅಧ್ಯಕ್ಷ ರಾಮಚಂದ್ರ ಕಾಂಬಳೆ, ಕರ್ನಾಟಕ ಮಹಿಳಾಪರ ಜಾಗೃತ ವೇದಿಕೆಯ ರಾಜ್ಯ ಅಧ್ಯಕ್ಷೆ ಜಗದೇವಿ ಹೆಗಡೆ, ಭೀಮಶಾ ಧರಣಿ, ಮಹಾದೇವ ಎಸ್‌. ಸೇರಿದಂತೆ ಅನೇಕರಿದ್ದರು.