ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್
ಕಲಬುರಗಿ: ‘ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ವತಿಯಿಂದ ಕೊಪ್ಪಳದಲ್ಲಿ ಆಗಸ್ಟ್ 4ರಂದು ₹ 154 ಕೋಟಿ ವೆಚ್ಚದಲ್ಲಿ ಹಿಂದುಳಿದ ವರ್ಗಗಳ 34 ಹಾಸ್ಟೆಲ್‌ಗಳ ನಿರ್ಮಾಣದ ಭೂಮಿಪೂಜೆ ಕಾರ್ಯಕ್ರಮವನ್ನು ಆಯೋಜಿಸಲಾಗುವುದು’ ಎಂದು ಮಂಡಳಿ ಅಧ್ಯಕ್ಷ ಡಾ.ಅಜಯ್ ಸಿಂಗ್ ತಿಳಿಸಿದರು.
‘ಅಂದು ನಡೆಯುವ ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷರೂ ಆಗಿರುವ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಸೇರಿದಂತೆ ನಮ್ಮ ಭಾಗದ ಸಚಿವರು, ಶಾಸಕರು ಪಾಲ್ಗೊಳ್ಳುವರು’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
‘ಕಲ್ಯಾಣ ಕರ್ನಾಟಕದ ಆಯ್ದ 34 ವಿಧಾನ ಸಭಾ ಕ್ಷೇತ್ರಗಳಲ್ಲಿ ಒಬಿಸಿ ವಿದ್ಯಾರ್ಥಿ ನಿಲಯಗಳ ನಿರ್ಮಾಣಕ್ಕೆ ₹ 154 ಕೋಟಿ ಖರ್ಚು ಮಾಡಲಾಗುವುದು. ಕೊಪ್ಪಳದ ಬಳಿಕ ಬಳ್ಳಾರಿಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಬೀದರ್‌ನಲ್ಲಿ ಅರಣ್ಯ ಆವಿಷ್ಕಾರ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು’ ಎಂದರು.
‘₹ 5,000 ಕೋಟಿ ಮೊತ್ತದ ಕ್ರಿಯಾ ಯೋಜನೆಗೆ ಅನುಮೋದನೆ ನೀಡುವಂತೆ ರಾಜ್ಯಪಾಲರಿಗೆ ಕೋರಿದ್ದೇವೆ. ಈ ವಾರದಲ್ಲಿ ಅನುಮೋದನೆ ಸಿಗುವ ವಿಶ್ವಾಸವಿದೆ. ಅನುಮೋದನೆಗೂ ಮುನ್ನವೇ ಕ್ರಿಯಾ ಯೋಜನೆಗಳನ್ನು ಸಿದ್ಧಪಡಿಸಿ ಈ ವರ್ಷ ಸುಮಾರು ₹ 4,500 ಕೋಟಿ ಖರ್ಚು ಮಾಡುವ ಗುರಿ ಹಾಕಿಕೊಂಡಿದ್ದೇವೆ’ ಎಂದು ಹೇಳಿದರು.
ಎಂಜಿನಿಯರ್‌ಗಳ ಕೊರತೆ: ‘64 ಸಿಬ್ಬಂದಿಯನ್ನು ಇರಿಸಿಕೊಂಡು ಅವರ ಮೇಲೆಯೇ ಒತ್ತಡ ಹಾಕಿ ಸಾವಿರಾರು ಕೋಟಿ ರೂಪಾಯಿ ಅನುದಾನವನ್ನು ಖರ್ಚು ಮಾಡಬೇಕಿದೆ. ಎಂಜಿನಿಯರ್‌ಗಳಿಗಾಗಿ ಬೇರೆ ಇಲಾಖೆಗಳ ಮೇಲಿನ ಅವಲಂಬನೆಯನ್ನು ತಪ್ಪಿಸಲು ಪ್ರತ್ಯೇಕ ಎಂಜಿನಿಯರಿಂಗ್ ವಿಭಾಗಕ್ಕೆ 229 ಹುದ್ದೆಗಳನ್ನು ಕೇಳಿದ್ದೆವು. ಆದರೆ, ಕಳೆದ ವರ್ಷ 21 ಹುದ್ದೆಗಳನ್ನು ಮಾತ್ರ ಕೊಟ್ಟಿದ್ದಾರೆ. ಪೂರ್ಣ ಪ್ರಮಾಣದಲ್ಲಿ ಪ್ರತ್ಯೇಕ ಎಂಜಿನಿಯರಿಂಗ್ ವಿಭಾಗವಿದ್ದರೆ ಆಯಾ ವರ್ಷದ ಅನುದಾನವನ್ನು ಖರ್ಚು ಮಾಡಬಹುದು’ ಎಂದರು.
‘ಪ್ರವಾಸಿ ತಾಣಗಳ ಅಭಿವೃದ್ಧಿಗೆ ಈ ವರ್ಷ ₹ 25 ಕೋಟಿ ಅನುದಾನ ತೆಗೆದಿರಿಸಿದ್ದು, ಮುಂದಿನ ವರ್ಷ ಹೆಚ್ಚಿಸಲಾಗುವುದು. ಜಲಭಾಗ್ಯಕ್ಕೂ ಅನುದಾನ ಮೀಸಲಿಟ್ಟಿದ್ದು, ಗ್ರಾಮೀಣ ಭಾಗದ ಮಹಿಳೆಯರ ಸಾಮೂಹಿಕ ಶೌಚಾಲಯ ನಿರ್ಮಾಣಕ್ಕೂ ಆದ್ಯತೆ ಕೊಡುತ್ತೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.