ADVERTISEMENT

ಅಕ್ಕಪಡೆ ಯೋಜನೆಯ ಅನುಷ್ಠಾನ ಶೀಘ್ರ: ಅಡ್ಡೂರು ಶ್ರೀನಿವಾಸುಲು

​ಪ್ರಜಾವಾಣಿ ವಾರ್ತೆ
Published 2 ಜನವರಿ 2026, 7:35 IST
Last Updated 2 ಜನವರಿ 2026, 7:35 IST
ಅಡ್ಡೂರು ಶ್ರೀನಿವಾಸುಲು
ಅಡ್ಡೂರು ಶ್ರೀನಿವಾಸುಲು   

ಕಲಬುರಗಿ: ಸಂಕಷ್ಟದಲ್ಲಿರುವ ಮಹಿಳೆಯರ ಮತ್ತು ಮಕ್ಕಳಿಗೆ ತಕ್ಷಣದ ರಕ್ಷಣೆ ನೀಡುವ ಸಲುವಾಗಿ ರಾಜ್ಯ ಸರ್ಕಾರವು ಅಕ್ಕಪಡೆ ಯೋಜನೆ ಜಾರಿಗೆ ತಂದಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು ಹೇಳಿದರು.

ಬುಧವಾರ ತಮ್ಮ ಕಚೇರಿಯಲ್ಲಿ ಜರುಗಿದ ಅಕ್ಕಪಡೆ ಯೋಜನೆಯ ಅನುಷ್ಠಾನ ಕುರಿತು ಜಿಲ್ಲಾ ಮಟ್ಟದ ಮೇಲ್ವಿಚಾರಣೆ ಮತ್ತು ಪರಿಶೀಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಅಕ್ಕಪಡೆಯ ಅನುಷ್ಠಾನಕ್ಕಾಗಿ ರಾಜ್ಯ ಸರ್ಕಾರವು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಜಿಲ್ಲೆಗೆ ಮಹೇಂದ್ರ ಬೊಲೆರೊ ವಾಹನವನ್ನು ಪೊಲೀಸ್‌ ಇಲಾಖೆಗೆ ಒದಗಿಸಿದೆ. ಶಾಲೆ, ಕಾಲೇಜು, ವಿದ್ಯಾರ್ಥಿನಿಯರ ಹಾಗೂ ಬಾಲಕಿಯವರ ವಸತಿ ಗೃಹಗಳಿಗೆ ಭೇಟಿ ನೀಡುವುದು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ತಡೆಯುವುದು, ದೌರ್ಜನ್ಯ, ಹಿಂಸೆ, ನಿರ್ಲಕ್ಷ್ಯ ಅಥವಾ ಶೋಷಣೆ ಎದುರಿಸುತ್ತಿರುವ ಮಹಿಳೆಯರ ಮತ್ತು ಮಕ್ಕಳಿಗೆ ಸಕಾಲಿಕ ಸಹಾಯ ಹಸ್ತ ಮತ್ತು ರಕ್ಷಣೆ ಒದಗಿಸುವುದು, ಸಾರ್ವಜನಿಕ ಮತ್ತು ಖಾಸಗಿ ಸ್ಥಳಗಳಲ್ಲಿ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆ, ಘನತೆ ಮತ್ತು ಸಬಲೀಕರಣವನ್ನು ಉತ್ತೇಜಿಸುವುದು ಅಕ್ಕಪಡೆ ಯೋಜನೆಯ ಮುಖ್ಯ ಉದ್ದೇಶವಾಗಿದೆ’ ಎಂದರು.

ADVERTISEMENT

ಅಕ್ಕಪಡೆ ಯೋಜನೆಯಡಿ 5 ಮಹಿಳಾ ಗೃಹ ರಕ್ಷಕರವರನ್ನೊಳಗೊಂಡ ತಂಡವು ಸ್ಥಳೀಯ ಪೊಲೀಸರ ನಿಕಟ ಸಹಯೋಗದೊಂದಿಗೆ ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 8 ರವರೆಗೆ 2 ಪಾಳಿಗಳಲ್ಲಿ ಕಾರ್ಯನಿರ್ವಹಿಸಬೇಕು. ಮಹಿಳಾ ಕಿರುಕುಳ ಪ್ರಕರಣಗಳ ಬಗ್ಗೆ ವ್ಯಾಪ್ತಿಯಲ್ಲಿರುವ ಪೊಲೀಸ್ ಠಾಣೆಗೆ ವರದಿ ಮಾಡಬೇಕು. ಮಹಿಳೆಯರ ಮೇಲಿನ ಕಿರುಕುಳ ತಡೆಗಟ್ಟಲು ಶಾಲೆ, ಕಾಲೇಜು, ಉದ್ಯಾನವನ, ಸಿನಿಮಾ ಮಂದಿರ, ಸ್ಥಳೀಯ ಮಾರುಕಟ್ಟೆಗಳಿಗೆ ನಿಯಮಿತವಾಗಿ ಭೇಟಿ ನೀಡಬೇಕು. ಪೋಕ್ಸೊ, ಬಾಲ್ಯವಿವಾಹ, ಬಾಲ ಕಾರ್ಮಿಕ ಪದ್ಧತಿ, ಮಹಿಳೆಯರ ಮತ್ತು ಮಕ್ಕಳ ಸಾಗಾಣಿಕೆ, ಮಾದಕ ವಸ್ತುಗಳ ದುರುಪಯೋಗದ ಬಗ್ಗೆ ಜಾಗೃತಿ ಮೂಡಿಸುವುದು. ಸಂಚಾರ ನಿಯಮಗಳ ಬಗ್ಗೆ, ಉಚಿತ ಸಹಾಯವಾಣಿಗಳಾದ 1098, 181, 112 ಇವುಗಳ ಬಗ್ಗೆ ಜಾಗೃತಿ ಮೂಡಿಸುವುದು ಅಕ್ಕಪಡೆ ಯೋಜನೆಯ ಜವಾಬ್ದಾರಿಯಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಸಮಿತಿಯ ಸದಸ್ಯರಾದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆ, ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಕಣಾಧಿಕಾರಿಗಳಾದ ಮಂಜುಳಾ ಪಾಟೀಲ, ಗೃಹರಕ್ಷಕ ದಳದ ತರಬೇತಿದಾರ ಹಣಮಂತರಾಯ ಗೌಡ ಉಪಸ್ಥಿತರಿದ್ದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ರಾಜಕುಮಾರ ರಾಠೋಡ ಸ್ವಾಗತಿಸಿದರು. ಶಿವಶರಣಪ್ಪ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.