ADVERTISEMENT

ಅನ್ಯರಿಗೆ ಬೆಣ್ಣೆ, ಜಿಲ್ಲೆಯವರಿಗೆ ಮಜ್ಜಿಗೆಯೂ ಇಲ್ಲ; ನಿರಾಣಿ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2022, 4:54 IST
Last Updated 15 ಆಗಸ್ಟ್ 2022, 4:54 IST
ಕಲಬುರಗಿ ನಗರದ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಅರಿವಿನ ಮನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಭಾನುವಾರ ಉದ್ಘಾಟಿಸಿದರು. ಬಸವರಾಜ ಪಾಟೀಲ ಸೇಡಂ. ದತ್ತಾತ್ರೇಯ ಪಾಟೀಲ ರೇವೂರ್, ಶಶೀಲ್‌ ಜಿ. ನಮೋಶಿ, ಬಿ.ಜಿ.ಪಾಟೀಲ್, ಯಶವಂತ ವಿ. ಗುರುಕರ್ ಇತರರು ಇದ್ದರು
ಕಲಬುರಗಿ ನಗರದ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಅರಿವಿನ ಮನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಭಾನುವಾರ ಉದ್ಘಾಟಿಸಿದರು. ಬಸವರಾಜ ಪಾಟೀಲ ಸೇಡಂ. ದತ್ತಾತ್ರೇಯ ಪಾಟೀಲ ರೇವೂರ್, ಶಶೀಲ್‌ ಜಿ. ನಮೋಶಿ, ಬಿ.ಜಿ.ಪಾಟೀಲ್, ಯಶವಂತ ವಿ. ಗುರುಕರ್ ಇತರರು ಇದ್ದರು   

ಕಲಬುರಗಿ: ‘ಜಿಲ್ಲೆಯಲ್ಲಿನ 20 ಸಿಮೆಂಟ್ ಕಾರ್ಖಾನೆಗಳು ಅನ್ಯರ ಒಡೆತನದಲ್ಲಿದ್ದು, ಕಾರ್ಖಾನೆಯ
ಉನ್ನತ ಹುದ್ದೆಗಳು ಬೇರೆಯವರ ಪಾಲಾಗಿದ್ದು, ‘ಡಿ’ ದರ್ಜೆಯ ಹುದ್ದೆಗಳಿಗೆ ಮಾತ್ರ ಸ್ಥಳೀಯರನ್ನು ನೇಮಿಸಿಕೊಳ್ಳಲಾಗಿದೆ. ಇದರಿಂದ ಹೊರಗಿನವರಿಗೆ ಬೆಣ್ಣೆ, ಕಲಬುರಗಿ ಜಿಲ್ಲೆಯವರಿಗೆ ಮಜ್ಜಿಗೆಯೂ ಸಿಗದಂತೆ ಆಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ಆರ್.ನಿರಾಣಿ ಅಭಿಪ್ರಾಯಪಟ್ಟರು.

ನಗರದ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘ(ಕೆಕೆಎಚ್‌ಆರ್‌ಎಸಿಎಸ್‌) ಕಚೇರಿ ಆವರಣದಲ್ಲಿ ಭಾನುವಾರ ₹ 2.55 ಕೋಟಿ ವೆಚ್ಚದ ನೂತನ ‘ಅರಿವಿನ ಮನೆ’ ಉದ್ಘಾಟಿಸಿ ಅವರು ಮಾತನಾಡಿದರು.

‘ಮೈಸೂರಿಗೆ ಹೋಲಿಸಿದರೆ ಕಲಬುರಗಿ ಯಾವುದೇ ಕ್ಷೇತ್ರದಲ್ಲಿ ಹಿಂದೆ ಬಿದ್ದಿಲ್ಲ. ಜಿಲ್ಲೆಯಲ್ಲಿ ಸಾಕಷ್ಟು ಶ್ರೀಮಂತರಿದ್ದಾರೆ. ನೀರಾವರಿ, ಹೊಲ, ಗದ್ದೆ ಸಮೃದ್ಧವಾಗಿ ಇದೆ. ಮೂಲಸೌಕರ್ಯ, ನೈಸರ್ಗಿಕ ಸಂಪತ್ತು ಹೇರಳವಾಗಿದೆ. ಆದರೆ, ನಮ್ಮಲ್ಲಿ ಕಾರ್ಯಪ್ರವೃತ್ತರಾಗುವ ಮನಸ್ಸುಗಳ ಕೊರತೆ ಇದೆ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಮೈಸೂರಿನ ಅರಮನೆ, ಕೆಆರ್‌ಎಸ್, ಕೈಗಾರಿಕೆಗಳನ್ನು ನೋಡಿ ಆನಂದ ಪಡುತ್ತೇವೆ. ಕಲಬುರಗಿಯಲ್ಲಿ ನಾವು ಏಕೆ ಅಂತಹ ಕೆಲಸಗಳನ್ನು ಮಾಡುತ್ತಿಲ್ಲ? ಬಳ್ಳಾರಿ, ರಾಯಚೂರು, ಬಾಗಲಕೋಟೆ, ವಿಜಯಪುರ, ಕಲಬುರಗಿ, ಯಾದಗಿರಿ ಮತ್ತು ಬೀದರ್‌ ಜಿಲ್ಲೆಗಳಲ್ಲಿ ಉತ್ಪತ್ತಿಯಾಗುವ 31 ಲಕ್ಷ ಮಿಲಿಯನ್ ಟನ್ ಹತ್ತಿ ಹೊರ ರಾಷ್ಟ್ರಗಳಿಗೆ ಹೋಗುತ್ತಿದೆ. ಇದನ್ನು ಸ್ಥಳೀಯವಾಗಿ ಬಳಸುವ ಬಗ್ಗೆ ಚಿಂತಿಸಬೇಕಿದೆ’ ಎಂದರು.

ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಡಾ.ಪಿ.ಎಸ್.ಶಂಕರ, ಜಗನ್ನಾಥ ಬಸವತೀರ್ಥಪ್ಪ ಸಜ್ಜನ್, ಡಾ.ಶುಭಾಂಗಿ, ವೇಣುಗೋಪಾಲ ಹೇರೂರು ಹಾಗೂ ಎ.ಕೆ.ರಾಮೇಶ್ವರ ಅವರನ್ನು ಸನ್ಮಾನಿಸಲಾಯಿತು. ಸಂಘದ ವತಿಯಿಂದ ಕೃಷಿ–2050 ವಿಜನ್ ಕರಡು ಡಾಕ್ಯುಮೆಂಟ್‍ ಅನ್ನು ಜಿಲ್ಲಾ ಉಸ್ತುವಾರಿ ಸಚಿವರಿಗೆ ನೀಡಲಾಯಿತು.ಸಂಘದ ಕಾರ್ಯದರ್ಶಿ ಭೀಮಾಶಂಕರ ತೆಗ್ಗೆಳ್ಳಿ ಪ್ರಗತಿ ವರದಿಯ ಪ್ರ್ಯಾತ್ಯಕ್ಷಿಕೆ ವಿವರಿಸಿದರು.

ಕಾರ್ಯಕ್ರಮದಲ್ಲಿ ಶಾಸಕರಾದ ಡಾ. ಅವಿನಾಶ ಜಾಧವ, ವಿಧಾನ ಪರಿಷತ್ ಸದಸ್ಯರಾದ ಬಿ.ಜಿ.ಪಾಟೀಲ, ಶಶೀಲ್ ಜಿ. ನಮೋಶಿ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಕ್ರೆಡೆಲ್ ಅಧ್ಯಕ್ಷ ಚಂದು ಪಾಟೀಲ, ಕೆಕೆಆರ್‌ಡಿಬಿ ಕಾರ್ಯದರ್ಶಿ ಆರ್.ವೆಂಕಟೇಶ ಕುಮಾರ, ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್, ಜಿ.ಪಂ. ಸಿಇಒ ಗಿರೀಶ್ ಡಿ. ಬದೋಲೆ, ಪಾಲಿಕೆ ಆಯುಕ್ತ ಭುವನೇಶ ಪಾಟೀಲ ದೇವಿದಾಸ, ಸಂಘದ ಅಡಳಿತ ಮಂಡಳಿ ನಿರ್ದೇಶಕರಾದ ವಿ.ಎಂ.ಭೂಸನೂರಮಠ, ವಿ.ಶಾಂತರೆಡ್ಡಿ, ರೇವಣಸಿದ್ಧ ಜಾಲಾದಿ, ಪ್ರಭುದೇವ ಕಪ್ಪಗಲ್, ಮಂಜುಳಾ ಡೊಳ್ಳೆ, ದುರ್ಗನಾ ಬೇಗಂ, ತಿಪ್ಪಣ್ಣರೆಡ್ಡಿ ಕೋಲಿ, ಶ್ರೀನಿವಾಸ ನಂದಪೂರ, ಪ್ರಭುರಾಜ ಸಿದ್ದರಾಮಪ್ಪ, ನೀಲಕಂಠ ಇಲೇರಿ, ಸಂಘದ ಅಧೀನ ಕಾರ್ಯದರ್ಶಿ ಮಲ್ಲಿಕಾರ್ಜುನ ರೆಡ್ಡಿ ಇದ್ದರು.

ಜಲಾಶಯಗಳ 1 ಕಿ.ಮೀ. ದೂರದ ಕೃಷಿಕರು ಪೈಪ್ ಲೈನ್ ಮೂಲಕ ನೀರಾವರಿ ಕಲ್ಪಿಸಿಕೊಂಡು, ಅಲ್ಪಾವಧಿಯ ಬೆಳೆಗಳನ್ನು ಬೆಳೆದು ಆರ್ಥಿಕವಾಗಿ ಸ್ವಾವಲಂಬನೆಯಾಗಬೇಕು

-ಮುರುಗೇಶ ಆರ್.ನಿರಾಣಿ, ಜಿಲ್ಲಾ ಉಸ್ತುವಾರಿ ಸಚಿವ

ಕೆಕೆಆರ್‌ಡಿಬಿ, ಕೆಕೆಎಚ್‌ ಆರ್‌ಎಸಿಎಸ್‌ ಪರಸ್ಪರ ಸಮನ್ವಯದಿಂದ ಅಭಿವೃದ್ಧಿಗೆ ಕಾರ್ಯನಿರ್ವಹಿಸುತ್ತಿದ್ದು, ಕಲಬುರಗಿ ಕೋಟೆಯನ್ನು ಪ್ರವಾಸಿ ತಾಣವಾಗಿಸಲು ₹ 20 ಕೋಟಿ ವಿನಿಯೋಗಿಸಲಾಗುತ್ತಿದೆ

-ದತ್ತಾತ್ರೇಯ ಪಾಟೀಲ ರೇವೂರ,ಕೆಕೆಆರ್‌ಡಿಬಿ ಅಧ್ಯಕ್ಷ

ಕಲ್ಯಾಣ ಕರ್ನಾಟಕ ಇತಿಹಾಸ, ಇಲ್ಲಿನ ಸಂಸ್ಕೃತಿ ಮುಂದಿನ ಪೀಳಿಗೆಗೆ ಪರಿಚಯಿಸಲು ₹ 15 ಕೋಟಿ ವೆಚ್ಚದಲ್ಲಿ ಕಲಬುರಗಿಯಲ್ಲಿ ಮ್ಯೂಸಿಯಂ ಸ್ಥಾಪಿಸಲು ಗುಲಬರ್ಗಾ ವಿಶ್ವವಿದ್ಯಾಲಯದ ಜತೆಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ

-ಬಸವರಾಜ ಪಾಟೀಲ ಸೇಡಂ,ಅಧ್ಯಕ್ಷ, ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.