ಕಲಬುರಗಿ: ‘ಡಾ. ಬಿ.ಆರ್.ಅಂಬೇಡ್ಕರ್ ಕೊಟ್ಟಿರುವ ಸಂವಿಧಾನವೆಂಬ ತಿಳಿನೀರಿನ ಬಾವಿಯನ್ನು ಉಳಿಸಿಕೊಳ್ಳುವ ಅಗತ್ಯವಿದೆ’ ಎಂದು ‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಜಿ.ಭಟ್ಟ ಅಭಿಪ್ರಾಯಪಟ್ಟರು.
ನಗರದ ಬುದ್ಧವಿಹಾರದಲ್ಲಿ ಸಿದ್ಧಾರ್ಥ ವಿಹಾರ ಟ್ರಸ್ಟ್ ಆಯೋಜಿಸಿದ್ದ 69ನೇ ಧಮ್ಮಚಕ್ರ ಪ್ರವರ್ತನ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
‘ಬುದ್ಧ ನನಗಿನ್ನೂ ದಕ್ಕಿಲ್ಲ. ಬಸವಣ್ಣ ನನ್ನವನನ್ನಾಗಿ ಮಾಡಿಕೊಂಡಿಲ್ಲ. ಅಂಬೇಡ್ಕರ್ ನನ್ನೊಳಗೆ ಇನ್ನೂ ಇಳಿದಿಲ್ಲ’ ಎಂದು ಮಾತು ಆರಂಭಿಸಿದ ರವೀಂದ್ರ ಭಟ್ಟ, ‘ಸಮಾಜವೆಂಬ ತಿಳಿನೀರಿನ ಬಾವಿಯಲ್ಲಿದ್ದ ಕಸವನ್ನು ಸರಿಸುವ ಕೆಲಸವನ್ನು ಬಸವಣ್ಣ, ಅಂಬೇಡ್ಕರ್ ಸೇರಿದಂತೆ ಮಹಾನ್ ಯತಿಗಳು, ಸಮಾಜದ ಸುಧಾರಕರು ಮಾಡಿದರು. ಆದರೆ, ನಾವೆಲ್ಲರೂ ಆ ಬಾವಿಯಲ್ಲಿನ ಕಸವನ್ನು ಸರಿಸುವುದಲ್ಲ, ಅದನ್ನು ತೆಗೆದು ಹೊರಗೆ ಹಾಕಬೇಕಿದೆ’ ಎಂದು ಪ್ರತಿಪಾದಿಸಿದರು.
‘2,500 ವರ್ಷಗಳ ಹಿಂದೆ ಬುದ್ಧ ಸಮಾಜದಲ್ಲಿ ಕಸ ತೆಗೆದು ಹೊರಗೆ ಹಾಕುವ ಕೆಲಸ ಮಾಡಿದರು. ಅದೇ ಕೆಲಸವನ್ನು ಕಾನೂನು ಬದ್ಧವಾಗಿ ಮಾಡಿದವರು ಡಾ.ಬಿ.ಆರ್.ಅಂಬೇಡ್ಕರ್. ಅವರು ಸಂವಿಧಾನವೆಂಬ ತಿಳಿನೀರಿನ ಸ್ವಚ್ಛ ಬಾವಿ ಕೊಟ್ಟಿದ್ದರು. ಇದೀಗ ಅದು ಗಲೀಜಾಗಿದೆ. ಎಷ್ಟು ಗಲೀಜಾಗಿದೆ ಎಂದರೆ ಜನರು ಆ ಬಾವಿಯನ್ನೇ ಮುಚ್ಚಿ ಹೊಸ ಬಾವಿಯನ್ನು ತೆಗೆಯಲು ಹೊರಟ್ಟಿದ್ದಾರೆ. ಹೀಗಾಗಿ ಆ ಬಾವಿಯನ್ನು ಉಳಿಸಿಕೊಳ್ಳುವ ಹಾಗೂ ಅದರಲ್ಲಿನ ನೀರು ಸ್ವಚ್ಛವಾಗಿ ಇರುವಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ’ ಎಂದು ಅಭಿಪ್ರಾಯಪಟ್ಟರು.
ಇದಕ್ಕೂ ಮುನ್ನ ಮಾತನಾಡಿದ ಥಾಯ್ಲೆಂಡ್ ಬೌದ್ಧ ಬಿಕ್ಕು ಸಮವರ್ ಥೆರೋ, ‘ಡಾ.ಅಂಬೇಡ್ಕರ್ ಮಹಾನ್ ಮೇಧಾವಿ. ಅವರು ಜಗತ್ತಿನ ಎಲ್ಲ ಧರ್ಮಗಳನ್ನು ಅಧ್ಯಯನ ಮಾಡಿದ ಬಳಿಕ ಬೌದ್ಧ ಧರ್ಮ ಸ್ವೀಕರಿಸಿದರು. ಇದರಿಂದಲೇ ಬೌದ್ಧ ಧರ್ಮದ ವೈಶಿಷ್ಟ್ಯ ತಿಳಿಯಬಹುದು. ಬುದ್ಧನ ಪಂಚಶೀಲತತ್ವಗಳು ಜಗತ್ತಿಗೆ ಬೆಳಕಾಗಿವೆ. ಮೊದಲ ತತ್ವವಾದ ಅಹಿಂಸೆಯನ್ನು ಪ್ರತಿಯೊಬ್ಬರೂ ಪಾಲಿಸಿದರೆ ಇಡೀ ಜಗತ್ತಿನಲ್ಲಿ ಶಾಂತಿ ನೆಲೆಸುತ್ತದೆ’ ಎಂದರು.
ವಿದೇಶಿ ಬೌದ್ಧ ಬಿಕ್ಕುಗಳು ಸೇರಿದಂತೆ 15ಕ್ಕೂ ಅಧಿಕ ಭಂತೇಜಿಗಳಿಂದ 26 ನಿಮಿಷಗಳ ಬುದ್ಧವಂದನೆ ನಡೆಯಿತು. ಬಳಿಕ ಬೌದ್ಧ ಬಿಕ್ಕುಗಳಿಗೆ ಚೀವರದಾನ ನಡೆಯಿತು. ನಂತರ ಗಣ್ಯರು ಕಾರ್ಯಕ್ರಮ ಉದ್ಘಾಟಿಸಿದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪತ್ನಿ ರಾಧಾಬಾಯಿ ಖರ್ಗೆ, ಶಾಸಕ ಅಲ್ಲಮಪ್ರಭು ಪಾಟೀಲ, ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಮುಖಂಡರಾದ ಅರವಿಂದ ಅರಳಿ, ಸಿದ್ಧಾರ್ಥ ವಿಹಾರ ಟ್ರಸ್ಟ್ ಆಡಳಿತಾಧಿಕಾರಿ ರಮೇಶ ಬೇಗಾರ, ಮುಖಂಡ ಡಾ.ಕಿರಣ ದೇಶಮುಖ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಬುದ್ಧ ಪ್ರತಿಮೆ, ಅಂಬೇಡ್ಕರ್ ಚಿತ್ರಕ್ಕೆ ಪುಷ್ಪ ನಮನ | ಬುದ್ಧವಂದನೆ ಸಲ್ಲಿಸಿದ ಭಂತೇಜಿಗಳು | ನೂರಾರು ಉಪಾಸಕರು ಭಾಗಿ
‘ಇನ್ನೂ ಎಚ್ಚರಗೊಂಡಿಲ್ಲ...’
‘ನನ್ನ ದೃಷ್ಟಿಯಲ್ಲಿ ಅಂಬೇಡ್ಕರ್ ಸಮುದಾಯ ಇನ್ನೂ ಎಚ್ಚರವಾಗಿಲ್ಲ ಬಾಬಾಸಾಹೇಬರ ಕನಸು ಸಾಕಾರಗೊಂಡಿಲ್ಲ ಎಂಬುದು ನನ್ನ ಭಾವನೆ. ನಾವು–ನೀವೆಲ್ಲ ಸೇರಿಕೊಂಡು ಸಮಾಜದಲ್ಲಿ ನಮ್ಮ ಮೇಲಿದ್ದವರಿಗೆ ನಾವು ಹಿಂದುಳಿಯಲು ಕಾರಣ ನೀವು ಎಂಬುದನ್ನು ತೋರಿಸಬೇಕಾದ ಸನ್ನಿವೇಶದಲ್ಲಿ ನಾವಿದ್ದೇವೆ. ದೇವರ ದೃಷ್ಟಿಯಲ್ಲಿ ಎಲ್ಲರೂ ಸಮಾನರು ಎಂಬುದು ಬೇಕಿಲ್ಲ ಮನುಷ್ಯರ ದೃಷ್ಟಿಯಲ್ಲಿ ನಾವೆಲ್ಲರೂ ಸಮಾನರಾಗಬೇಕು ಎಂಬುದು ಅಂಬೇಡ್ಕರ್ ನಿಲುವಾಗಿತ್ತು. ನಾವೆಲ್ಲ ಪ್ರಯತ್ನ ಪಟ್ಟರೆ ಅಂಥ ಸಮಾಜ ಸಾಕಾರ ಸಾಧ್ಯ’ ಎಂದು ರವೀಂದ್ರ ಭಟ್ಟ ಹೇಳಿದರು.
‘ಜನಪ್ರತಿನಿಧಿಗಳನ್ನು ಕರೆ ತರಲಿ’ ‘ನಾವೆಲ್ಲ ಗಲಾಟೆಯ ಪ್ರಪಂಚದಲ್ಲಿದ್ದೇವೆ. ಗಲಾಟೆ ನಿಂತರೆ ನಾವೆಲ್ಲ ಸಹಜ ಸ್ಥಿತಿಗೆ ಬರುತ್ತೇವೆ. ಮಲ್ಲಿಕಾರ್ಜುನ ಖರ್ಗೆ ಪ್ರಬುದ್ಧರಾಗಿ ಬೆಳೆಯಲು ಇಲ್ಲಿನ ಬುದ್ಧನೇ ಕಾರಣ. ಇದೀಗ ಅವರು ಎಐಸಿಸಿ ಅಧ್ಯಕ್ಷರಾಗಿದ್ದಾರೆ. ರಾಜ್ಯದಲ್ಲೂ ಅವರದ್ದೇ ಸರ್ಕಾರವಿದೆ. ಎಲ್ಲ ಶಾಸಕರು ವಿಧಾನ ಪರಿಷತ್ ಸದಸ್ಯರು ಹಾಗೂ ಸಂಸದರನ್ನು ಕರೆತಂದು ಈ ಧ್ಯಾನ ಮಂದಿರದಲ್ಲಿ ಒಂದಿಡೀ ದಿನ ಸುಮ್ನನೆ ಕೂರುವಂತೆ ಮಾಡಬೇಕು. ಅದರಿಂದ ರಾಜ್ಯ ಉದ್ದಾರವಾಗಬಲ್ಲದು’ ಎಂದು ರವೀಂದ್ರ ಭಟ್ಟ ಅಭಿಪ್ರಾಯಪಟ್ಟರು.
‘ಮಹಾ ಪೌರ್ಣಿಮೆ’
ನಾಟಕ ಪ್ರದರ್ಶನ ಬುದ್ಧವಿಹಾರದ ಬಯಲು ರಂಗ ಮಂದಿರದಲ್ಲಿ ಗುರುವಾರ ಸಂಜೆ ಜೆ.ಎಂ.ಪ್ರಲ್ಹಾದ ರಚಿಸಿದ ‘ಮಹಾಪೌರ್ಣಿಮೆ’ ನಾಟಕ ಪ್ರದರ್ಶನಗೊಂಡಿತು. ಮಂಡ್ಯದ ಕಿರಗಂದೂರಿನ ಗೋತಮಿ ಫೌಂಡೇಷನ್ ಈ ನಾಟಕ ಪ್ರಸ್ತುತ ಪಡಿಸಿತು. ಇಸ್ಮಾಯಿಲ್ ಗೋನಾಳ್ ಸಂಗೀತ ಶಿವಲಿಂಗಯ್ಯ ಎನ್. ನಿರ್ದೇಶನವಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.