ADVERTISEMENT

ಮಾವಿನ ಬೆಳೆ ಬೂದಿರೋಗ ನಿರ್ವಹಣೆಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2021, 5:02 IST
Last Updated 24 ಜನವರಿ 2021, 5:02 IST
ಹೂ ಬಿಟ್ಟ ಮಾವಿನ ಮರ
ಹೂ ಬಿಟ್ಟ ಮಾವಿನ ಮರ   

ಕಲಬುರ್ಗಿ: ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಈಗ ಮಾವಿನ ಗಿಡಗಳು ಹೂ ಬಿಡಲು ಪ್ರಾರಂಭಿಸಿವೆ. ಈ ಹಂಥದಲ್ಲಿ ಮಾವಿಗೆ ಜಿಗಿಹುಳು ಬಾಧೆ ಕಂಡುಬರುವ ಸಾಧ್ಯತೆ ಹೆಚ್ಚಾಗಿದೆ. ಆದ್ದರಿಂದ ರೈತರು ಮುಂಜಾಗೃತಾ ಕ್ರಮವಾಗಿ ಇದರ ನಿಯಂತ್ರಣಕ್ಕೆ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಇಲ್ಲಿನ ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕಾ ವಿಜ್ಞಾನಿ ಡಾ.ವಾಸುದೇವ ನಾಯಕ ಸಲಹೆ ನೀಡಿದ್ದಾರೆ.

ಮಾವಿನ ಗಿಡಗಳು ಹೂ ಬಿಡಲು ಪ್ರಾರಂಭಿಸಿದ್ದು, ಉತ್ತಮ ಮಾವು ಫಸಲಿಗೆ ಬೆಳೆಯ ವಿವಿಧ ಹಂತಗಳಲ್ಲಿ ಸೂಕ್ತ ನಿರ್ವಹಣೆ ಮುಖ್ಯ. ಅದರಲ್ಲಿಯೂ ಸದ್ಯಕ್ಕೆ ಹೂವಾಡುವ ಹಂತದಲ್ಲಿ ಅಧಿಕವಾಗಿ ಹಾಗೂ ಪ್ರಮುಖವಾಗಿ ಹಾನಿ ಮಾಡುತ್ತಿರುವ ಕೀಟವೆಂದರೆ ಮಾವಿನ ಜಿಗಿಹುಳು. ಚಳಿಗಾಲದಲ್ಲಿ ಫೆಬ್ರುವರಿ ತಿಂಗಳಿನಿಂದ ಹೂವಿನ ಮೊಗ್ಗು ಮತ್ತು ಹೂ ಗೊಂಚಲುಗಳ ಮೇಲೆ ಕುಳಿತು ರಸಹೀರುವುದಕ್ಕೆ ಪ್ರಾರಂಭಿಸುತ್ತವೆ. ಮಾರ್ಚ್‌ ಮೊದಲನೆಯ ವಾರದಲ್ಲಿ ಈ ಕೀಟಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತವೆ. ನಂತರ ಹೂ ಗೊಂಚಲುಗಳಲ್ಲಿ ಹಾಗೂ ಮೃದುವಾದ ಎಲೆಗಳ ಮೇಲೆ ಬಾಧೆ ಉಂಟುಮಾಡುತ್ತವೆ. ಹೂವಾಡುವ ಮತ್ತು ಕಾಯಿಯ ಹಂತದಲ್ಲಿ ಹವಾಮಾನ ವೈಪರೀತ್ಯ ಸಂದರ್ಭದಲ್ಲಿ ಹೂ ಕಾಯಿ ಉದುರುವ ಸಾಧ್ಯತೆ ಇದ್ದು, ಇದರ ಹತೋಟಿಗೆ ಮ್ಯಾಂಗೋ ಸ್ಪೇಷಲ್ 5 ಗ್ರಾಂ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು’ ಎಂದು ಅವರು ತಿಳಿಸಿದ್ದಾರೆ.

ಜಿಗಿಹುಳು ಹಾಗೂ ಬೂದಿರೋಗದ ನಿರ್ವಹಣೆ: ತೋಟವನ್ನು ಸ್ವಚ್ಛವಾಗಿಡಿ. ತೋಟಕ್ಕೆ ಪದೇಪದೇ ನೀರುಣಿಸುದಾಗಲೀ ಅಥವಾ ಸಾರಜನಕಯುಕ್ತ ಗೊಬ್ಬರ ನೀಡುವುದಾಗಲಿ ಮಾಡಬಾರದು. ಹೂ ಬಿಡುವುದಕ್ಕೆ ಮುಂಚೆ ಹಾಗೂ ಕಾಯಿ ಕಟ್ಟಿದ ಕೂಡಲೇ ಗಿಡಗಳಿಗೆ 2 ಮಿ.ಲೀ ಮೇಲಾಥಿಯಾನ್ 50 ಇಸಿ ಅಥವಾ 0.5 ಮಿ.ಲೀ. ಇಮಿಡಾಕ್ಲೊಪ್ರಿಡ್ 17.8 ಎಸ್.ಎಲ್. ಅಥವಾ 0.3 ಗ್ರಾಂ. ಅಸಿಟಾಮೆಪ್ರಿಡ್ 25 ಡಬ್ಲ್ಯುಡಿಜಿ (ಯಾವುದಾದರೂ ಒಂದು) ಜೊತೆಗೆ ನೀರಿನಲ್ಲಿ ಕರಗುವ ಗಂಧಕ 2 ಗ್ರಾಂ. ಅಥವಾ 1 ಮಿ.ಲೀ ಹೆಕ್ಸಾಕೋನೋಜೋಲ್ ಪ್ರತಿ ಲೀಟರ್ ನೀರಿಗೆ ಬೆರಸಿ ಸಿಂಪರಿಸಿ.

ADVERTISEMENT

ಅವಶ್ಯವಿದ್ದಲ್ಲಿ ಇದೇ ಸಿಂಪರಣೆಯನ್ನು 20 ದಿನಗಳ ನಂತರ ಮತ್ತೊಮ್ಮೆ ಕೈಗೊಳ್ಳಿ. ಜಿಗಿಹುಳುದಿಂದಾಗಿ ಅಂಟು ದ್ರವ ಉತ್ಪಾದನೆಯಾಗಿ ಇಡೀ ಹೂ ಗೊಂಚಲು ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಸೂಕ್ತ ಸನ್ನಿವೇಶದಲ್ಲಿ ಔಷಧಿಯನ್ನು ಸಿಂಪಡಿಸಬೇಕು ಎಂದು ಕೀಟ ತಜ್ಞ ಡಾ.ರಾಜು ತೆಗ್ಗೆಳ್ಳಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.