ADVERTISEMENT

2022-23ರ ಬಜೆಟ್‌ನಲ್ಲಿ ಕಲ್ಯಾಣ ಕರ್ನಾಟಕಕ್ಕೆ ಅನ್ಯಾಯ: ಈಶ್ವರ ಖಂಡ್ರೆ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2022, 8:01 IST
Last Updated 6 ಮಾರ್ಚ್ 2022, 8:01 IST
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ   

ಕಲಬುರಗಿ: ಸಿಎಂ ಮಂಡಿಸಿದ 2022-23 ರ ಬಜೆಟ್‌ಗೆ ದಿಕ್ಕು ದೆಸೆಯಿಲ್ಲ, ಮುಂದಾಲೋಚನೆ ಇಲ್ಲ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಯಾವುದೇ ಸ್ಪಷ್ಟತೆ ಇಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಟೀಕಿಸಿದರು.

'ಈ ವರ್ಷದಲ್ಲಿ‌ ₹2,65,000 ಕೋಟಿ ಬಜೆಟ್ ಮಂಡನೆ ಮಾಡಲಾಗಿದೆ. ಆದರೆ ಕಲ್ಯಾಣ ಕರ್ನಾಟಕ ಭಾಗಕ್ಕೆ ಹೇಳಿಕೊಳ್ಳುವಂತ ಯೋಜನೆಗಳಿಲ್ಲ. ಕೇವಲ ₹3000 ಕೋಟಿ ಘೋಷಣೆ ಮಾಡಲಾಗಿದೆ. ಆದರೆ ಅನುದಾನ ಹೇಗೆ ಬಳಸಿಕೊಳ್ಳಬೇಕು ಎನ್ನುವ ಬಗ್ಗೆ ಸ್ಪಷ್ಟತೆ ಇಲ್ಲ' ಎಂದರು.

'ಕಳೆದೆರಡು ವರ್ಷದಲ್ಲಿ ಬಿಡುಗಡೆಯಾದ ₹ 1100 ಕೋಟಿಯಲ್ಲಿ ಕೇವಲ ₹ 402 ಕೋಟಿ ಖರ್ಚು ಮಾಡಲಾಗಿದೆ. ಒಟ್ಟು ಅನುದಾನದ ಶೇ 35ರಷ್ಟು ಮಾತ್ರ ವೆಚ್ಚವಾಗಿದೆ. 2021-22 ರಲ್ಲಿ ಬಿಡುಗಡೆಯಾದ ₹ 1500 ಕೋಟಿಯಲ್ಲಿ ₹ 270 ಕೋಟಿ ಮಾತ್ರ ಖರ್ಚಾಗಿದೆ. ಎರಡು ವರ್ಷದಲ್ಲಿ ಕೇವಲ ₹ 680 ಕೋಟಿ ಬಳಕೆ ಮಾಡಲಾಗಿದೆ. ಹೀಗೆ ಇರುವ ಅನುದಾನ ಬಳಸಿಕೊಳ್ಳುವ ವಿವೇಚನೆ ಇಲ್ಲದಿದ್ದರೆ ಹಣವನ್ನು ಏನು ಮಾಡುತ್ತೀರಿ? ಟ್ರಜರಿಯಲ್ಲಿ ಇಟ್ಟು ಪೂಜೆ ಮಾಡಿ' ಎಂದೂ ಕಿಡಿ ಕಾರಿದರು.

ADVERTISEMENT

ಎಸ್ಪರೇಷನಲ್ ತಾಲೂಕುಗಳು ಎಂದು ಹೇಳಲಾದ ತಾಲೂಕುಗಳ ಅಭಿವೃದ್ಧಿಗೆ ಅನುದಾನವನ್ನೇ ಬಿಡುಗಡೆ ಮಾಡಿಲ್ಲ ಎಂದು ಮಾಜಿ ಸಚಿವರಾದ, ಶಾಸಕರಾದ ಹಾಗೂ ಕೆಪಿಸಿಸಿ ವಕ್ತಾರ ‌ಪ್ರಿಯಾಂಕ್ ಖರ್ಗೆ ಆರೋಪಿಸಿದರು

50 ಸಾವಿರ ಹುದ್ದೆ ಖಾಲಿ:ಈ ಭಾಗದ ಏಳೂ ಜಿಲ್ಲೆಗಳು ಸೇರಿ ಪ್ರಾಥಮಿಕ ಶಾಲೆಗಳಲ್ಲಿ 15,500 ಹುದ್ದೆಗಳು ಖಾಲಿ ಇವೆ. ಪ್ರೌಢಶಾಲಾ ಮಟ್ಟದಲ್ಲಿ 3000 ಹುದ್ದೆಗಳು ಖಾಲಿ ಇವೆ. ಡಿ ದರ್ಜೆ ಹಾಗೂ ವಿಶ್ವವಿದ್ಯಾಲಯಗಳೂ ಸೇರಿದಂತೆ ಒಟ್ಟಾರೆ ಶಿಕ್ಷಣ ಕೇತ್ರದಲ್ಲಿ 50 ಸಾವಿರ ಹುದ್ದೆಗಳು ಖಾಲಿ ಇವೆ. ಹುದ್ದೆ ತುಂಬಲು ಯಾವುದೇ ಕ್ರಮ ಕೈಗೊಂಡಿಲ್ಲ' ಎಂದು ಈಶ್ವರ ಖಂಡ್ರೆ ದೂರಿದರು.

'ಈ ಭಾಗದ ನೀರಾವರಿ ಯೋಜನೆಗಳ ನಿರ್ಲಕ್ಷ್ಯ ಮಾಡಲಾಗಿದೆ. ಕೆರೆತುಂಬುವ ಯೋಜನೆಗಳು ಹಾಗೂ ನೀರಾವರಿ ಯೋಜನೆಗಳನ್ನು ತಡೆ ಹಿಡಿಯಲಾಗಿದೆ. 2016 ನವೆಂಬರ್ ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಹೊರಡಿಸಿದ ಆದೇಶದ ಮೆರಿಟ್ ಪ್ರಕಾರ ಹೈಕ ಭಾಗದ ಹುದ್ದೆ ತುಂಬಲಿ' ಎಂದರು.

'ಪ್ರವಾಹ ಬಂದಾಗ ₹ 1500 ಕೋಟಿಯಲ್ಲಿ ರಾಜ್ಯದ ಬೇರೆ ಕಡೆ ಅಭಿವೃದ್ಧಿಗೆ ಒತ್ತು ನೀಡಲಾಗಿತ್ತು. ಕ.ಕ ಭಾಗದಲ್ಲಿಯೂ ಪ್ರವಾಹ ಬಂದಿತ್ತು. ಆದರೆ ಅನುದಾನ‌ ನೀಡದೆ ತಾರತಮ್ಯ ಮಾಡಲಾಗಿದೆ' ಆರೋಪಿಸಿದರು.

'ನಂಜುಂಡಪ್ಪ‌ ವರದಿ ಪ್ರಕಾರ‌ ಕ.ಕ ಭಾಗದ ಅಭಿವೃದ್ಧಿ ಮಾಡುವ ಉದ್ದೇಶವಿಲ್ಲ‌. ಈ‌ ಬಗ್ಗೆ ಬಜೆಟ್‌ನಲ್ಲಿ ಉಲ್ಲೇಖವೇ ಇಲ್ಲ. ಈ ಭಾಗದ ಜನರನ್ನು ಎರಡನೆಯ ದರ್ಜೆ ನಾಗರಿಕರಂತೆ ಪರಿಗಣಿಸಲಾಗುತ್ತಿದೆ' ಎಂದೂ ಹೇಳಿದರು.

ಕಲ್ಯಾಣ ಕ್ರಾಂತಿ ಯಾತ್ರೆ:'ಬಜೆಟ್ ಮೇಲಿನ ಚರ್ಚೆಗಾಗಿ ನಡೆಸುವ ಅಧಿವೇಶನದ ನಂತರ ಕಾಂಗ್ರೆಸ್ ಪಕ್ಷದಿಂದ ಕಕ ಭಾಗದ ಅಭಿವೃದ್ದಿಗಾಗಿ 'ಕಲ್ಯಾಣ ಕ್ರಾಂತಿ ಯಾತ್ರೆ' ಕಾರ್ಯಕ್ರಮ ನಡೆಸಲಾಗುವುದು. ಈ‌ ಬಗ್ಗೆ ಎರಡು‌ಸಲ ಚರ್ಚೆ ನಡೆದಿದೆ' ಎಂದು ತಿಳಿಸಿದರು.

'ಬಿಜೆಪಿಯವರು ಧರ್ಮಗಳ ನಡುವೆ ವಿಷಬೀಜ ಬಿತ್ತುತ್ತಿದ್ದಾರೆ. ಈ ಭಾಗದ‌ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಧರಂಸಿಂಗ್ ಅವರ ಆಸೆಯಂತೆ ಈ ಭಾಗದ ಅಭಿವೃದ್ದಿ ಮಾಡಲು‌ ಸರ್ಕಾರ ವಿಫಲವಾಗಿದೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಬಡವರ ಕಾರ್ಮಿಕರ ಹಾಗೂ ಎಲ್ಲ ಜಾತಿ ಧರ್ಮದವರ ಏಳಿಗೆಗಾಗಿ ಕಾರ್ಯಕ್ರಮ ನಿರೂಪಿಸಲಿದೆ' ಎಂದರು.

ಸಿ.ಎಂ ಭೇಟಿ ನೀಡಲಿ:ಯಾದಗಿರಿ ಜಿಲ್ಲೆಯ ದೋರನಹಳ್ಳಿ ಸಿಲಿಂಡರ್ ಸ್ಫೋಟಗೊಂಡು 14 ಜನ ಸಾವನ್ನಪ್ಪಿದ್ದಾರೆ. ಆ ಕುಟುಂಬಕ್ಕೆ‌ ಪರಿಹಾರ ನೀಡಬೇಕು. ಜಿಲ್ಲಾಡಳಿತದ ನಿರ್ಲಕ್ಷ್ಯದಿಂದಾಗಿ ಘಟನೆ ನಡೆದಿದೆ' ಆಗ್ರಹಿಸಿದರು.

'ಕುಮಾರಸ್ವಾಮಿ ಅವರು ಹೊಟ್ಟೆಕಿಚ್ಚಿನಿಂದ ಪಾದಯಾತ್ರೆ ಬಗ್ಗೆ ಇಲ್ಲಸಲ್ಲದ ಮಾತನಾಡುತ್ತಿದ್ದಾರೆ. ಅದಕ್ಕೆ ನಾವು ಏನೂ ಹೇಳಲಾಗದು. ನಮ್ಮ ಪಾದಾಯಾತ್ರೆ ನಂತರ ಸರ್ಕಾರ ₹ 1000 ಕೋಟಿ‌ ಅನುದಾನ ಘೋಷಿಸಿದೆ. ಈ‌ ಯೋಜನೆಯಿಂದ ಬೆಂಗಳೂರು ‌ಜನರಿಗೆ‌ ಕುಡಿಯುವ ನೀರು ಲಭ್ಯವಾಗಲಿದೆ. ಕುಮಾರಸ್ವಾಮಿ‌ ಈ‌ ವಿಚಾರದಲ್ಲಿ‌ ರಾಜಕೀಯ ಹೇಳಿಕೆ ನೀಡುವುದು ಶೋಭೆ ತರುವುದಿಲ್ಲ' ಎಂದರು.

ಸಿ.ಎಂ. ಇಬ್ರಾಹಿಂ ‌ಹಿರಿಯ ಮುಖಂಡರು‌. ಜಾತ್ಯತೀತ ತತ್ವ ಹೊಂದಿದ್ದಾರೆ. ಹಾಗಾಗಿ ಕೋಮುವಾದಿ ಪಕ್ಷಗಳೊಂದಿಗೆ ಗುರುತಿಸಿಕೊಳ್ಳುವುದಿಲ್ಲ ಎನ್ನುವ ನಂಬಿಕೆ ಇದೆ. ಅವರಿಗೆ ನೋವಾಗಿರಬೇಕು ಅವರೊಂದಿಗೆ ಪಕ್ಷದ ಹಿರಿಯರು ಮಾತನಾಡುತ್ತಾರೆ. ಅವರು‌ ಪಕ್ಷ‌ಬಿಟ್ಟು ಹೋಗುವುದಿಲ್ಲ. ಇಬ್ರಾಹಿಂ ಅವರೊಬ್ಬ ಪಕ್ಷದ‌ ಹಿರಿಯ ನಾಯಕರು. ‌ದೇಶ ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಪಕ್ಷ‌ ಬಿಟ್ಟು ಹೋಗಬಾರದು ಎಂದು ಹೇಳಿದರು.

ಅವಧಿಗೆ ಮುನ್ನ ಚುನಾವಣೆ ನಡೆದರೆ ಪಕ್ಷ‌ಸಿದ್ದವಿರುವುದಾಗಿ ಮಾಜಿ‌ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಊಹಾಪೋಹದ ಪ್ರಶ್ನೆಗೆ ಉತ್ತರಿಸುವುದಿಲ್ಲ. ಆದರೂ‌ ಚುನಾವಣೆ ಬಂದರೆ ಎದುರಿಸುತ್ತೇವೆ ಎಂದು ಪ್ರಿಯಾಂಕ್ ಹೇಳಿದರು.

ಶಾಸಕರಾದ ಡಾ.ಅಜಯ ಸಿಂಗ್, ಎಂ.ವೈ ಪಾಟೀಲ, ಮಾಜಿ ಸಚಿವರಾದ ಶರಣಪ್ರಕಾಶ ಪಾಟೀಲ್, ಮಾಜಿ‌ ಎಂ‌ಎಲ್‌ಸಿಗಳಾದ ಅಲ್ಲಮಪ್ರಭು ಪಾಟೀಲ, ತಿಪ್ಪಣ್ಣಪ್ಪ ಕಮಕನೂರು, ಮಾಜಿ ಶಾಸಕ ಬಿ.ಆರ್.ಪಾಟೀಲ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಗದೇವ‌ ಗುತ್ತೇದಾರ, ಶರಣು‌ ಮೋದಿ, ನೀಲಕಂಠರಾವ ಮುಲಗೆ ಮತ್ತಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.