
ಕಲಬುರಗಿ: ಜಿಲ್ಲೆಯ ಕಲಬುರಗಿ ಮತ್ತು ಆಳಂದ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ದಿನಗೂಲಿ, ಹೊರಗುತ್ತಿಗೆ ಹಾಗೂ ಗೌರವಧನದ ಮೇಲೆ ಕೆಲಸ ಮಾಡುವ ಸಿಬ್ಬಂದಿಗೆ ಬುಧವಾರ ಆಯೋಜಿಸಿದ್ದ ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ (ಪಿಎಂಜೆಜೆಬಿವೈ) ಮತ್ತು ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ (ಪಿಎಂಎಸ್‌ಬಿವೈ) ವಿಮೆ ನೋಂದಣಿ ಮಹಾಮೇಳ ಯಶಸ್ವಿಯಾಯಿತು.
ಎರಡೂ ತಾಲ್ಲೂಕಿನಲ್ಲಿ 2,112 ಸಿಬ್ಬಂದಿ ವಿಮೆಗಳನ್ನು ಮಾಡಿಸಿಕೊಳ್ಳುವ ಮೂಲಕ ಸಾಮಾಜಿಕ ಭದ್ರತೆಗೆ ಒಳಪಟ್ಟರು.
ಕಲಬುರಗಿಯಲ್ಲಿ ವಿಮೆ ನೋಂದಣಿ ಮೇಳ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಸಿಇಒ ಭಂವರ್‌ಸಿಂಗ್ ಮೀನಾ, ‘ಈ ಯೋಜನೆ ನಿಮ್ಮ ಕುಟುಂಬಕ್ಕೆ ಆರ್ಥಿಕ ಭದ್ರತೆ ನೀಡಬಲ್ಲದು. ಎಲ್ಲರೂ ಇದರ ಪ್ರಯೋಜನ ಪಡೆಯಬೇಕು’ ಎಂದರು.
ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಲೀಡ್ ಬ್ಯಾಂಕ್ ಸಂಯುಕ್ತಾಶ್ರಯದಲ್ಲಿ ನಡೆದ ಅಭಿಯಾನದಲ್ಲಿ ಪಿಡಿಒ, ಪಂಚಾಯಿತಿ ಕಾರ್ಯದರ್ಶಿಗಳು, ದ್ವಿತೀಯ ದರ್ಜೆ ಲೆಕ್ಕ ಸಹಾಯಕರು, ಗ್ರಾಮ ಪಂಚಾಯಿತಿ ಸಿಬ್ಬಂದಿಯಾದ ಕರವಸೂಲಿಗಾರರು, ಕ್ಲರ್ಕ್-ಕಂ-ಡಾಟಾ ಎಂಟ್ರಿ ಆಪರೇಟರ್, ಪಂಪ್ ಆಪರೇಟರ್, ಗ್ರೂಪ್ ‘ಡಿ’ ಸಿಬ್ಬಂದಿ, ಸ್ವಚ್ಛತಾಗಾರರು, ನರೇಗಾ-ಎನ್‌ಆರ್‌ಎಲ್‌ಎಂ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಅಡುಗೆ ಸಿಬ್ಬಂದಿ, ಸಹಾಯಕರು ವಿಮೆಗೆ ಹೆಸರು ನೋಂದಾಯಿಸಿದರು.
ಇದಕ್ಕಾಗಿ ಬ್ಯಾಂಕ್‌ನಿಂದ ವಿಶೇಷ ನೋಂದಣಿ ಶಿಬಿರ ಆಯೋಜಿಸಲಾಗಿತ್ತು. ಕಲಬುರಗಿಯಲ್ಲಿ ಸುಮಾರು 1,500 ಸಿಬ್ಬಂದಿ ವಿಮೆ ನೋಂದಣಿ ಮಾಡಿಕೊಂಡರು.
ಕಲಬುರಗಿಯ ಕಾರ್ಯಕ್ರಮದಲ್ಲಿ ಡಿಎಚ್‌ಒ ಡಾ.ಶರಣಬಸಪ್ಪ ಕ್ಯಾತನಾಳ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಜಕುಮಾರ ರಾಠೋಡ, ಜಿಲ್ಲಾ ಲೀಡ್ ಬ್ಯಾಂಕ್ ಪ್ರಭಾರ ಮುಖ್ಯ ವ್ಯವಸ್ಥಾಪಕ ನಾಗೇಂದ್ರ ಬಾಪೂಗೋಳ, ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಸಂಗಮೇಶ, ತಾಲ್ಲೂಕು ಪಂಚಾಯಿತಿ ಇಒ ಸೈಯದ್ ಪಟೇಲ್, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಮಾರುತಿರಾವ ಕಾಂಬಳೆ ಸೇರಿದಂತೆ ಅನೇಕ ಅಧಿಕಾರಿ-ಸಿಬ್ಬಂದಿ ಭಾಗಿಯಾಗಿದ್ದರು.
ಆಳಂದಲ್ಲಿ 612 ಜನರಿಂದ ನೋಂದಣಿ:
ಆಳಂದ ತಾಲ್ಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿಯೂ ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ವಿಕಾಸ ಸಜ್ಜನ್ ನೇತೃತ್ವದಲ್ಲಿ ಜರುಗಿದ ಮೇಳದಲ್ಲಿ 612 ಸಿಬ್ಬಂದಿ ವಿಮೆ ರಕ್ಷಣೆ ಪಡೆದರು. ತಾಲ್ಲೂಕು ಪಂಚಾಯಿತಿ ಇಒ ಮಾನಪ್ಪ ಕಟ್ಟಿಮನಿ, ಲೆಕ್ಕಾಧಿಕಾರಿ ಪ್ರಕಾಶ ಜಾಧವ ಸೇರಿದಂತೆ ಅನೇಕರು ಇದ್ದರು.
ಏನೆಲ್ಲ ಪ್ರಯೋಜನ ಸಿಗಲಿದೆ?
ಪಿಎಂಜೆಜೆಬಿವೈ ಅಡಿ 18-50 ವಯೋಮಾನದವರು ವಾರ್ಷಿಕ ₹436 ಹಣ ಪಾವತಿಸಿ ನೋಂದಣಿ ಮಾಡಿಕೊಳ್ಳಬಹುದು. ಸಹಜ ಸಾವು ಸಂಭವಿಸಿದರೆ ₹2 ಲಕ್ಷ ಪರಿಹಾರ ಸಿಗಲಿದೆ. ಅದೇ ರೀತಿ ಪಿಎಂಎಸ್‌ಬಿವೈ ಅಡಿ 18-70 ವಯೋಮಾನದವರು ವಾರ್ಷಿಕ ₹20 ಪಾವತಿಸಿ ವಿಮೆ ರಕ್ಷಣೆ ಪಡೆಯಬಹುದು. ಈ ವಿಮೆ ಹೊಂದಿದವರು ಅಪಘಾತದಲ್ಲಿ ದುರ್ಮರಣ ಹೊಂದಿದಲ್ಲಿ ₹2 ಲಕ್ಷ ಭಾಗಶಃ ಗಾಯಗೊಂಡರೆ ₹1 ಲಕ್ಷ ಮತ್ತು ಅಪಘಾತದದಿಂದ ಸಂಪೂರ್ಣ ಅಂಗವಿಕಲರಾದಲ್ಲಿ ಗರಿಷ್ಠ ₹2 ಲಕ್ಷದವರೆಗೆ ಪರಿಹಾರ ಸಿಗಲಿದೆ. ಉಳಿತಾಯ ಖಾತೆ ಹೊಂದಿರುವ ಅಂಚೆ ಬ್ಯಾಂಕ್‌ಗಳನ್ನು ಸಂಪರ್ಕಿಸಿ ವಿಮೆ ನೋಂದಣಿ ಮಾಡಬಹುದಾಗಿದೆ.
ಮಹಿಳೆಗೆ ಸ್ಥಳದಲ್ಲೇ ₹2 ಲಕ್ಷ ಚೆಕ್
‘2024ರ ನವೆಂಬರ್ 9ರಂದು ರಸ್ತೆ ಅಪಘಾತದಲ್ಲಿ ಪತಿ ಗಣೇಶ ಖಂಡೆಪ್ಪ ಪೂಜಾರಿ (ವಾಹನ ಚಾಲಕ) ಮೃತಪಟ್ಟಿದ್ದರು. ಅವರು ಮಾಡಿಸಿದ್ದ ವಿಮೆ ಪರಿಹಾರಕ್ಕೆ ವರ್ಷದಿಂದ ಬ್ಯಾಂಕ್‌ಗೆ ಅಲೆದಾಡಿದರೂ ಹಣ ಸಿಕ್ಕಿಲ್ಲ’ ಎಂದು ಆಳಂದ ತಾಲ್ಲೂಕು ಪಂಚಾಯಿತಿ ಎನ್‌ಆರ್‌ಎಲ್‌ಎಂ ಸಿಬ್ಬಂದಿ ಲಕ್ಷ್ಮಿ ಪೂಜಾರಿ ವಿಮೆ ನೋಂದಣಿ ಮೇಳದಲ್ಲೇ ಅಳಲು ತೋಡಿಕೊಂಡರು. ಈ ವಿಷಯ ಅರಿತ ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ವಿಕಾಸ ಸಜ್ಜನ್ ಕೂಡಲೆ ಬ್ಯಾಂಕ್‌ಗೆ ದೌಡಾಯಿಸಿ ವಿಚಾರಿಸಿದರು. ಬ್ಯಾಂಕ್ ಸಿಬ್ಬಂದಿ ಎಚ್ಚೆತ್ತುಕೊಂಡು ಲಕ್ಷ್ಮಿ ಅವರಿಗೆ ಅಪಘಾತ ವಿಮೆಯಡಿ ತಕ್ಷಣವೇ ₹2 ಲಕ್ಷ ಚೆಕ್ ನೀಡಿದರು. ಇನ್ನುಳಿದಂತೆ ‘ಪಿಎಂಜೆಜೆಬಿವೈ ಅಡಿಯ ಇನ್ನೊಂದು ವಿಮೆಗೂ ಒಂದು ವಾರದಲ್ಲಿ ₹2 ಲಕ್ಷ ಪರಿಹಾರ ನೀಡಲಾಗುವುದು’ ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.