ADVERTISEMENT

ಆಳಂದ: ಖಜೂರಿ ಗ್ರಾಮದಲ್ಲಿ ಜಾನಪದ ಝೇಂಕಾರ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2021, 3:07 IST
Last Updated 28 ಡಿಸೆಂಬರ್ 2021, 3:07 IST
ಆಳಂದ ತಾಲ್ಲೂಕಿನ ಖಜೂರಿಯಲ್ಲಿ ನಡೆದ ಜಾನಪದ ಝೇಂಕಾರ ಕಾರ್ಯಕ್ರಮದಲ್ಲಿ ಜಾನಪದ ಕಲೆ ಪ್ರದರ್ಶನ ನಡೆಯಿತು
ಆಳಂದ ತಾಲ್ಲೂಕಿನ ಖಜೂರಿಯಲ್ಲಿ ನಡೆದ ಜಾನಪದ ಝೇಂಕಾರ ಕಾರ್ಯಕ್ರಮದಲ್ಲಿ ಜಾನಪದ ಕಲೆ ಪ್ರದರ್ಶನ ನಡೆಯಿತು   

ಆಳಂದ: ಆಯಾ ಸಮುದಾಯಗಳಲ್ಲಿನ ಜನಪದ ಕಲೆ, ಆಚರಣೆಗಳು ನಿಜವಾದ ಮಣ್ಣಿನ ಸಂಸ್ಕೃತಿಯಾಗಿದ್ದು, ಅವು ಕೇವಲ ಜಾತಿ, ಧರ್ಮ, ಭಾಷೆಗಳಿಗೆ ಸೀಮಿತವಾಗಿರದೆ ಸಾರ್ವತ್ರಿಕವಾಗಿವೆ ಎಂದು ಧುತ್ತರಗಾಂವನ ವಿಶ್ವನಾಥ ಕೋರಣೇಶ್ವರ ಸ್ವಾಮೀಜಿ ತಿಳಿಸಿದರು.

ತಾಲ್ಲೂಕಿನ ಖಜೂರಿ ಗ್ರಾಮದ ಕನ್ನಡಭವನದಲ್ಲಿ ಕನ್ನಡ ಜಾನಪದ ಪರಿಷತ್ ಹಾಗೂ ಗಡಿನಾಡು ಮಹಿಳಾ ಜಾನಪದ ಪರಿಷತ್ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡ ಜಾನಪದ ಝೇಂಕಾರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಭಾಷೆ , ಸಾಹಿತ್ಯ ಹಾಗೂ ಕಲೆಗಳ ವಿಷಯದಲ್ಲಿ ಯಾವುದೇ ಕಾರಣಕ್ಕೂ ರಾಜಕಾರಣ ನಡೆಯಬಾರದು, ರಾಜಕಾರಣವು ಇಂದು ಎಲ್ಲ ಕ್ಷೇತ್ರವನ್ನು ಮಲೀನಗೊಳಿಸುತ್ತಿದೆ. ಇದರಿಂದ ಪ್ರತಿಷ್ಠೆ, ದ್ವೇಷ ಹಾಗೂ ಸಾಮರಸ್ಯ ಕದಡುವ ವಾತಾವರಣ
ನಡೆದಿದೆ ಎಂದರು.

ADVERTISEMENT

ಜಾನಪದ ಪರಿಷತ್ ರಾಜ್ಯ ಘಟಕದ ಅಧ್ಯಕ್ಷ ಡಾ.ಎಸ್.ಬಾಲಾಜಿ ಮಾತನಾಡಿ, ಉತ್ತಮ ಸಂಸ್ಕೃತಿ ಮತ್ತು ಸಂಸ್ಕಾರಗಳು ಜಾನಪದ ಕಲೆಗಳ ಜೀವಾಳವಾಗಿದೆ, ಸರ್ಕಾರ ಹಾಗೂ ಶಾಲಾ ಕಾಲೇಜುಗಳು ಶಿಷ್ಟ ಸಾಹಿತ್ಯಕ್ಕೆ ನೀಡುವ ಪ್ರೋತ್ಸಾಹ ಜಾನಪದ ಸಾಹಿತ್ಯ, ಕಲೆಗಳಿಗೆ ನೀಡುತ್ತಿಲ್ಲ ಎಂದರು.

ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಅಪ್ಪಾಸಾಹೇಬ ತೀರ್ಥೆ ಅಧ್ಯಕ್ಷತೆ ವಹಿಸಿದರು.

ಜಿಲ್ಲಾ ಘಟಕದ ಧ್ಯಕ್ಷ ಎಂ.ಬಿ.ನಿಂಗಪ್ಪ, ಕಾರ್ಯದರ್ಶಿ ಎಚ್.ಬಿ.ಪಾಟೀಲ, ರಾಜಶೇಖರ ಕಂದಗೋಳೆ, ಅಶೋಕ ಸಾವಳೇಶ್ವರ, ಸಂಜೀವನ ದೇಶಮುಖ, ಚಂದ್ರಕಲಾ ಬಂಡೆ, ಮಂಜುನಾಥ ಕಂದಗೋಳೆ, ಗಂಗಾಧರ ಕುಂಬಾರ, ಮಂಜುನಾಥ ಕಂದಗೋಳೆ. ವೈಜುನಾಥ ತಡಕಲ, ಶ್ರೀಶೈಲ ಭೀಮಪೂರೆ, ದಯಾನಂದ ದನ್ನೂರೆ, ವೀರಭದ್ರಪ್ಪ ಹಾರಕೆ, ಡಿ.ಎಂ.ಪಾಟೀಲ, ಸಂಗಯ್ಯ ಸ್ವಾಮಿ ಇದ್ದರು.

ಇದಕ್ಕೂ ಮೊದಲು ಸ್ವಾಮಿ ವಿವೇಕಾನಂದ ವೃತ್ತದಿಂದ ಆರಂಭಗೊಂಡ ಜಾನಪದ ಮೇಳಗಳ ಮೆರವಣಿಗೆಗೆ ಕೆಎಂಎಫ್ ಅಧ್ಯಕ್ಷ ಆರ್.ಕೆ.ಪಾಟೀಲ ಗೋ ಪೂಜೆ ಮಾಡುವ ಮೂಲಕ ಚಾಲನೆ ನೀಡಿದರು. ಪೋತರಾಜನ ಕುಣಿತ, ತಡೋಳಾದ ಹರಿಭಜನೆ, ಪುರವಂತರ ಕುಣಿತ, ಸೋಬಾನ, ಹಂತಿಪದಗಳ ಗಾಯನ, ಮಕ್ಕಳ ಕೋಲಾಟ ಹಾಗೂ ವಿವಿಧ ಜನಪದ ಕಲಾವಿದರ ಕುಣಿತ, ಗಾಯನವು ಕಣ್ಮನ ಸೆಳೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.