ADVERTISEMENT

ನೀರಾವರಿಗೆ ಆದ್ಯತೆ ಜೆಡಿಎಸ್‌ ಗುರಿ- ಜಿಲ್ಲಾ ಘಟಕದ ಅಧ್ಯಕ್ಷ ಕೇದಾರಲಿಂಗಯ್ಯ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2022, 5:59 IST
Last Updated 18 ಏಪ್ರಿಲ್ 2022, 5:59 IST
ಜೆಡಿಎಸ್‌ನಿಂದ ಆಯೋಜಿಸಿದ ‘ಜನತಾ ಜಲಧಾರೆ’ ಅಭಿಯಾನಕ್ಕೆ ಕಲಬುರಗಿಯಲ್ಲಿ ಭಾನುವಾರ ಕೇದಾರಲಿಂಗಯ್ಯ ಹಿರೇಮಠ ಹಾಗೂ ಕೃಷ್ಣ ರೆಡ್ಡಿ ಚಾಲನೆ ನೀಡಿದರು
ಜೆಡಿಎಸ್‌ನಿಂದ ಆಯೋಜಿಸಿದ ‘ಜನತಾ ಜಲಧಾರೆ’ ಅಭಿಯಾನಕ್ಕೆ ಕಲಬುರಗಿಯಲ್ಲಿ ಭಾನುವಾರ ಕೇದಾರಲಿಂಗಯ್ಯ ಹಿರೇಮಠ ಹಾಗೂ ಕೃಷ್ಣ ರೆಡ್ಡಿ ಚಾಲನೆ ನೀಡಿದರು   

ಕಲಬುರಗಿ: ರಾಜ್ಯದ ರೈತರ ಉದ್ಧಾರಕ್ಕೆ ಕೃಷಿಗೆ ನೀರು ಒದಗಿಸುವುದು ಹಾಗೂ ಹಳ್ಳಿ ಜನರಿಗೆ ಸಮರ್ಪಕ ಕುಡಿಯುವ ನೀರು ಪೂರೈಸುವುದು ಇಂದಿನ ತುರ್ತು ಅಗತ್ಯಗಳಾಗಿವೆ. ಹೀಗಾಗಿ, ನೀರಿನ ಮಹತ್ವ ಸಾರುವ ಜತೆಗೆ ಜೆಡಿಎಸ್‌ ಪಕ್ಷದ ಆದ್ಯತೆಗಳನ್ನು ಜನರಿಗೆ ಮುಟ್ಟಿಸಲು ‘ಜನತಾ ಜಲಧಾರೆ’ ಅಭಿಯಾನ ಆರಂಭಿಸಲಾಗಿದೆ ಎಂದು ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಕೇದಾರಲಿಂಗಯ್ಯ ಹಿರೇಮಠ ಹೇಳಿದರು.

ನಗರದ ಶರಣಬಸವೇಶ್ವರ ದೇವಸ್ಥಾನ ಆವರಣದಲ್ಲಿ ಭಾನುವಾರ ‘ಜನತಾ ಜಲಧಾರೆ’ ರಥಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ‘ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಹಾಗೂ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರ ಕನಸಿ ಕೂಸು ಇದು. ರಾಜ್ಯದ ದುಡಿಯುವ ವರ್ಗ, ರೈತರು, ಶ್ರಮಜೀವಿಗಳ ಉದ್ಧಾರ ಆರಂಭವಾಗುವುದೇ ನೀರು ಪೂರೈಕೆಯ ಮೂಲಕ. ಹಳ್ಳಿಗಳಿಗೆ ಕುಡಿಯುವ ನೀರು, ಹೊಲಗಳಿಗೆ ನೀರಾವರಿ ಎಷ್ಟು ಅವಶ್ಯ ಎನ್ನುವುದನ್ನು ನಮ್ಮ ನಾಯಕರು ಮೊದಲಿನಿಂದಲೂ ಸಾರುತ್ತ ಬಂದಿದ್ದಾರೆ. ಅವರ ಅಧಿಕಾರಾವಧಿಯಲ್ಲಿ ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಿದ್ದೇ ಇದಕ್ಕೆ ಸಾಕ್ಷಿ’ ಎಂದರು.

ಈ ರಥಯಾತ್ರೆಗೆ ರಾಜ್ಯದೆಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಜಿಲ್ಲೆಯಲ್ಲಿ ಕೂಡ ಈಗಾಗಲೇ ಅಭಿಯಾನ ಆರಂಭಿಸಲಾಗಿದ್ದು, ಇನ್ನೂ ಒಂದು ವಾರ ಸಂಚರಿಸಲಿದೆ. ಜೆಡಿಎಸ್‌ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದರು.

ADVERTISEMENT

ಪಕ್ಷದ ಯುವ ಘಟಕದ ರಾಜ್ಯ ಉಪಾಧ್ಯಕ್ಷ ಕೃಷ್ಣಾ ರೆಡ್ಡಿ,ಜಿಲ್ಲಾ ಘಟಕದ ಮಹಾಪ್ರಧಾನ ಕಾರ್ಯದರ್ಶಿ ಶಾಮರಾವ್‌ ಸೂರನ್‌, ಜಿಲ್ಲಾ ಘಟಕದ ವಕ್ತಾರ ಮನೋಹರ ಪೋದ್ದಾರ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಪಾರ್ವತಿ ಪುರಾಣಿಕ, ಮುಖಂಡರಾದ ಗುರುನಾಥ ಪೂಜಾರಿ, ದೇವೇಂದ್ರ ಹಸನಾಪೂರ, ಬಾಬರ್‌ ಮುಸ್ತಫಾ, ಬಸವರಾಜ ಬಿಡಬಿಟ್ಟಿ, ವಿಜಯಕುಮಾರ ಚಿಂಚನಸೂರ, ಮಹಾದೇವಿ ಕೆಸರಟಗಿ ನೇತೃತ್ವ ವಹಿಸಿದ್ದರು.

ಶರಣಬಸವೇಶ್ವರ ದೇವಸ್ಥಾನದಿಂದ ಮೆರವಣಿಗೆ ಆರಂಭಿಸಿ ನಗರದ ಪ್ರಮುಖ ರಸ್ತೆಗಳು ಹಾಗೂ ದಕ್ಷಿಣ ವಿಧಾನಸಭಾ ಕ್ಷೇತ್ರದ ಕೆಲವು ಗ್ರಾಮಗಳಲ್ಲೂ ಅಭಿಯಾನ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.