ಕಳೆದ ಎರಡು ಮೂರು ದಿನಗಳಿಂದ ಸುರಿಯುತ್ತಿರುವ ವ್ಯಾಪಕ ಗಾಳಿ ಮಳೆಗೆ ಪಟ್ಟಣದ ಕೃಷಿ ವಿಜ್ಞಾನ ಕೇಂದ್ರದ ಹತ್ತಿರ ಬೆಳೆದು ನಿಂತಿದ್ದ ಪಪ್ಪಾಯಿ ಗಡಿಗಳು ಮುರಿದು ಬಿದ್ದಿವೆ.
ಜೇವರ್ಗಿ (ಕಲಬುರಗಿ): ಜೇವರ್ಗಿ ತಾಲ್ಲೂಕಿನಲ್ಲಿ ಕಳೆದ ಎರಡು ಮೂರು ದಿನಗಳಿಂದ ಸುರಿಯುತ್ತಿರುವ ವ್ಯಾಪಕ ಗಾಳಿ ಮಳೆಗೆ ಪಟ್ಟಣದ ಕೃಷಿ ವಿಜ್ಞಾನ ಕೇಂದ್ರದ ಹತ್ತಿರ ಬೆಳೆದು ನಿಂತಿದ್ದ ಪಪ್ಪಾಯಿ ಗಡಿಗಳು ಮುರಿದು ಬಿದ್ದಿವೆ. ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಜೊತೆಗೆ ಕಲ್ಲಂಗಡಿ ಬೆಳೆಗೂ ಹಾನಿಯಾಗಿದೆ.
ಪಟ್ಟಣದ ಶಾಸ್ತ್ರೀಚೌಕ್ ಬಡಾವಣೆಯ ವಿಷ್ಣು ಮಹೇಂದ್ರಕರ್ ಅವರು ತಮ್ಮ ಮೂರು ಎಕರೆ ಜಮೀನಿನಲ್ಲಿ ಸುಮಾರು ₹4 ಲಕ್ಷ ಖರ್ಚು ಮಾಡಿ 3,000 ಪಪ್ಪಾಯ ಗಿಡಗಳನ್ನು ನೆಟ್ಟಿದ್ದರು. ಉತ್ತಮ ಫಸಲು ಕೂಡ ಬಂದಿತ್ತು. ಆದರೆ ಮಳೆ–ಗಾಳಿಗೆ ನೂರಾರು ಗಿಡಗಳು ನೆಲಕ್ಕುರುಳಿವೆ. ಹತ್ತಾರು ಟನ್ ಪಪ್ಪಾಯ ನಷ್ಟವಾಗಿದೆ.
ಅಲ್ಲದೇ ಎರಡು ಎಕರೆಯಲ್ಲಿ ಮಲ್ಚಿಂಗ್, ಪೈಪ್ ಲೈನ್ ಮಾಡಿ ಬಿತ್ತಿದ್ದ ಕಲ್ಲಂಗಡಿ ಬೆಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ಬೀಜ, ಗೊಬ್ಬರ, ಸ್ಪ್ರಿಂಕ್ಲರ್ ಅಳವಡಿಕೆಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಲಾಗಿತ್ತು. ಇನ್ನೂ 20 ದಿನಗಳಲ್ಲಿ ಕಲ್ಲಂಗಡಿ ಕಟಾವಿಗೆ ಬರುತ್ತಿತ್ತು. ಈ ಹಂತದಲ್ಲಿ ಬೆಳೆಹಾನಿಯಾಗಿ ಆರ್ಥಿಕ ನಷ್ಟವಾಗಿದೆ ಎಂದು ರೈತ ವಿಷ್ಣು ಹೇಳಿದ್ದಾರೆ.
ಜನಪ್ರತಿನಿಧಿಗಳು, ಅಧಿಕಾರಿಗಳು ಕಾಟಾಚಾರಕ್ಕೆ ರಸ್ತೆ ಬದಿಯ ಹೊಲಗಳ ಸಮೀಕ್ಷೆ ಮಾಡಿ ಹೋಗುತ್ತಿದ್ದಾರೆ. ನಿಜವಾಗಿ ಮಳೆಯಿಂದ ಹಾಳಾಗಿರುವ ನಮ್ಮಂಥ ರೈತರ ಜಮೀನಿಗೆ ಭೇಟಿ ಕೊಟ್ಟು ನಮ್ಮ ಕಷ್ಟ ಕೇಳಲು ಯಾರೂ ಬರುತ್ತಿಲ್ಲ. ಕೂಡಲೇ ರಾಜ್ಯ ಸರ್ಕಾರ ನಮಗೆ ಪರಿಹಾರ ನೀಡಬೇಕು.- ವಿಷ್ಣು ಮಹೇಂದ್ರಕ, ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.