
ಜೇವರ್ಗಿ: ಉದ್ಯೋಗ ಖಾತರಿ ಯೋಜನೆ ಕಾಮಗಾರಿ ಪ್ರಾರಂಭಿಸುವಂತೆ ಒತ್ತಾಯಿಸಿ ಸೋಮವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಘಟಕದ ವತಿಯಿಂದ ತಾಲ್ಲೂಕಿನ ಯಾಳವಾರ ಗ್ರಾಮ ಪಂಚಾಯತಿ ಎದುರು ಪ್ರತಿಭಟನೆ ನಡೆಸಲಾಯಿತು.
‘ಅತೀವೃಷ್ಟಿಯಿಂದ ಹಾಗೂ ಭೀಮಾನದಿಯ ಭೀಕರ ಪ್ರವಾಹದಿಂದ ತಾಲ್ಲೂಕಿನ ರೈತರು ಬೆಳೆ ಹಾನಿಯಾಗಿ ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಸರ್ಕಾರ ಪರಿಹಾರ ಬಿಡುಗಡೆಯಲ್ಲಿ ಸಾಕಷ್ಟು ತಾರತಮ್ಯ ಮಾಡಿದೆ. ಸಾಕಷ್ಟು ಜನ ರೈತರ ಬದುಕು ಬೀದಿಗೆ ಬರುವಂತಾಗಿದೆ. ಯಾಳವಾರ ಗ್ರಾಪಂನಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ನರೇಗಾ ಕೆಲಸ ಸ್ಥಗಿತಗೊಳಿಸಲಾಗಿದೆ. ಹೀಗಾಗಿ ಕೂಡಲೇ ನರೇಗಾ ಕಾಮಗಾರಿ ಪ್ರಾರಂಭಿಸಿ ರೈತರಿಗೆ ಕೂಲಿ ಕಾರ್ಮಿಕರಿಗೆ ಕೆಲಸ ನೀಡಬೇಕು’ ಎಂದು ಒತ್ತಾಯಿಸಿದರು.
‘ಎಲ್ಲಾ ಗ್ರಾಮೀಣ ಪ್ರದೇಶದ ರಸ್ತೆಗಳ ಸುಧಾರಣೆ ಮಾಡಬೇಕು. ಯಾಳವಾರ ಗ್ರಾಮದ ಪೂಜಾರಿ ಬಡಾವಣೆಯ ಮರೆಮ್ಮ ತಾಯಿ ದೇವಸ್ಥಾನ ಹತ್ತಿರ ವಿದ್ಯುತ್ ಕಂಬಗಳನ್ನು ಅಳವಡಿಸಬೇಕು. ರೈತರಿಗೆ ಹೊಲಗಳಿಗೆ ಹೋಗಲು ರಸ್ತೆ ನಿರ್ಮಾಣ ಮಾಡಬೇಕು. ಪ್ರತಿ ಹಳ್ಳಿಗಳಲ್ಲಿ ಶೌಚಾಲಯ ನಿರ್ಮಾಣ ಮಾಡಬೇಕು’ ಎಂಬಿತ್ಯಾದಿ ಬೇಡಿಕೆಗಳಿಗೆ ಒತ್ತಾಯಿಸಲಾಯಿತು.
ನಂತರ ಪಿಡಿಒ ಅವರಿಗೆ ಮನವಿ ಪತ್ರ ಸಲ್ಲಿಸಿ ಮೂರು ದಿನಗಳ ಒಳಗೆ ಬೇಡಿಕೆ ಇಡೇರಿಸದಿದ್ದರೇ ತಾಪಂ ಕಾರ್ಯಾಲಯಕ್ಕೆ ಬೀಗ ಜಡಿದು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಮಲ್ಲಣ್ಣಗೌಡ ಪಾಟೀಲ ಕೆಲ್ಲೂರ, ರಾಜ್ಯ ಸಂಘಟನಾ ಕಾರ್ಯದರ್ಶಿ
ಅಲ್ಲಾಪಟೇಲ ಇಜೇರಿ, ಬಸ್ಸುಗೌಡ ಗಂವ್ಹಾರ, ಮರೆಪ್ಪ ಹಸನಾಪೂರ, ದೇವಕ್ಕಿ ಯಾಳವಾರ ಸೇರಿದಂತೆ ಹಲವಾರು ಜನ ರೈತರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.