ಅಫಜಲಪುರ: ‘ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಯಿಂದ 26 ಪ್ರವಾಸಿಗರು ಮೃತಪಟ್ಟಿರುವ ಹಿನ್ನೆಲೆಯಲ್ಲಿ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಿಕೊಳ್ಳದೇ ಬುಡಕಟ್ಟು ಜನಾಂಗದವರಿಗೆ ಹೊದಿಕೆ ವಿತರಣೆ ಮಾಡಲಾಗಿದೆ’ ಎಂದು ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷ ಜೆ.ಎಂ.ಕೊರಬು ತಿಳಿಸಿದರು.
ಪಟ್ಟಣದ ಹೊರವಲಯದಲ್ಲಿರುವ ಬುಡಕಟ್ಟು ಜನಾಂಗದ ಬಡಾವಣೆಯಲ್ಲಿನ ಜನರಿಗೆ ಶನಿವಾರ ತಮ್ಮ 66ನೇ ಹುಟ್ಟುಹಬ್ಬದ ಅಂಗವಾಗಿ ಹೊದಿಕೆ ವಿತರಣೆ ಮಾಡಿ ಮಾತನಾಡಿದ ಅವರು, ‘ಹುಟ್ಟುಹಬ್ಬ ಬಂದಾಗ ಅದನ್ನು ಈ ಸಮಾಜಕ್ಕೆ ಮಾದರಿಯಾಗುವ ರೀತಿಯಲ್ಲಿ ಆಚರಣೆ ಮಾಡಿಕೊಂಡಾಗ ಮಾತ್ರ ಅದು ಸಾರ್ಥಕವಾಗುತ್ತದೆ. ಆದರೆ ಇಂದಿನ ಯುವಜನತೆ ಹುಟ್ಟು ಹಬ್ಬದ ನೆಪದಲ್ಲಿ ದುಶ್ಚಟಗಳಿಗೆ ಬಲಿಯಾಗುತ್ತಿರುವುದು ನೋವಿನ ಸಂಗತಿ’ ಎಂದರು.
ಗ್ರಾ.ಪಂ. ಸದಸ್ಯ ದುಂಡು ಗೌಡಗಾಂವ್ ಮಾತನಾಡಿ, ‘ತಾಲ್ಲೂಕಿನಲ್ಲಿ ನಿರಂತರವಾಗಿ ಜೆ.ಎಂ.ಕೊರಬು ಸಮಾಜಸೇವೆ ಮಾಡುತ್ತಾ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯರಾಗಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಅಫಜಲಪುರ ಮತಕ್ಷೇತ್ರದಲ್ಲಿ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇದನ್ನು ಕಾಂಗ್ರೆಸ್ ಪಕ್ಷದ ವರಿಷ್ಠರು ಗಮನದಲ್ಲಿಟ್ಟುಕೊಂಡು ಅವರನ್ನು ವಿಧಾನ ಪರಿಷತ್ ಸದಸ್ಯ ಅಥವಾ ಯಾವುದಾದರೂ ಒಂದು ನಿಗಮ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು. ಶರಣು ನಂದಗೊಡ್ಡ, ಅಮೋಗಿ ಪೂಜಾರಿ, ಗುರುಲಿಂಗಯ್ಯ ಝಳಕಿಮಠ, ರಾಜು ಬೇನೂರ, ಭೀಮಾಶಂಕರ ಬಿರಾದಾರ, ದತ್ತು ಕಟ್ಟಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.