
ಆಳಂದ: ತಾಲ್ಲೂಕಿನ ಕಡಗಂಚಿ ಗ್ರಾಮದ ಭೀಮ ನಗರ ಬಡಾವಣೆಗೆ ಶಾಶ್ವತ ಕುಡಿಯುವ ನೀರು ಪೂರೈಸುವಂತೆ ಆಗ್ರಹಿಸಿ ಮಂಗಳವಾರ ರಾಮಜೀ ಯುವಕ ಸಂಘದ ಸದಸ್ಯರು ಹಾಗೂ ಬಡಾವಣೆಯ ನಾಗರಿಕರು ಕೈಯಲ್ಲಿ ಖಾಲಿ ಕೊಡಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು.
ಸಂಘದ ಅಧ್ಯಕ್ಷ ದತ್ತರಾಜ ಬಮನಳ್ಳಿ, ಕಾರ್ಯದರ್ಶಿ ಪ್ರಮೋದ ಡೋಣಿ ಅವರ ನೇತೃತ್ವದಲ್ಲಿ ಸುಮಾರು ಒಂದು ಗಂಟೆ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತ ಪಡಿಸಿದರು.
ಈ ವೇಳೆ ಸಂಘದ ಅಧ್ಯಕ್ಷ ದತ್ತರಾಜ ಬಮನಳ್ಳಿ ಮಾತನಾಡಿ, ‘ಕಳೆದ ಒಂದು ವರ್ಷದಿಂದಲೂ ಭೀಮ ನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಗ್ರಾ.ಪಂ, ತಾ.ಪಂ ಅಧಿಕಾರಿಗಳಿಗೆ ಅನೇಕ ಸಲ ಮನವಿ ಮಾಡಿದರೂ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಗ್ರಾ.ಪಂ ಅಧ್ಯಕ್ಷರು ಮತ್ತು ಪಿಡಿಒ ಬಡಾವಣೆಯ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಂದುವರೆದು, ಸತತ ಕುಡಿಯುವ ನೀರಿನ ಸಮಸ್ಯೆಗೆ ಕಾರಣರಾದ ಗ್ರಾ.ಪಂ ಪಿಡಿಒ ಅವರನ್ನು ಕೂಡಲೇ ಅಮಾನತು ಮಾಡುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.
ಅಮರ್ಜ ಅಣೆಕಟ್ಟಿನಿಂದ ಕರ್ನಾಟಕ ಕೇಂದ್ರೀಯ ವಿವಿಗೆ ಸರಬರಾಜು ಮಾಡುವ ಶುದ್ಧ ನೀರನ್ನು ಬಡಾವಣೆಗೆ ಪೂರೈಸಬೇಕು, ಪ್ರತ್ಯೇಕ ಹೊಸ ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣ ಮಾಡಬೇಕು, ಬಡಾವಣೆ ಪಕ್ಕದ ಹಳೆಯ ಬಾವಿಯಿಂದ ನೀರು ಸರಬರಾಜು ಮಾಡಬೇಕೆಂಬ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕೆಂದು ಆಗ್ರಹಿಸಿ ತಹಶೀಲ್ದಾರ್ ಅಣ್ಣಾರಾವ ಪಾಟೀಲ ಹಾಗೂ ತಾ.ಪಂ ಇಒ ಮಾನಪ್ಪ ಕಟ್ಟಿಮನಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ತಹಶೀಲ್ದಾರ್ ಅವರ ಭರವಸೆಯ ಮೇರೆಗೆ ರಸ್ತೆ ತಡೆ ಹಿಂಪಡೆಯಲಾಯಿತು. ರಸ್ತೆ ತಡೆಯಿಂದಾಗಿ ಕಲಬುರಗಿ ಆಳಂದ ಮಾರ್ಗದ ಸಂಚಾರ ಅಸ್ತವ್ಯಸ್ತಗೊಂಡು ಪ್ರಯಾಣಿಕರು ಪರದಾಡುವಂತಾಯಿತು.
ದಲಿತ ಮುಖಂಡ ಮಲ್ಲಿಕಾಜುನ ಬೋಳಣಿ, ಅರುಣಕುಮಾರ ಗಡಬಳ್ಳಿ, ಸೋಮನಾಥ ಡೋಣಿ, ನಿರಂಜನ ಗಡಬಳ್ಳಿ, ಪ್ರಕಾಶ ಸೂರನ, ನಾಗಪ್ಪ ಧನ್ನಿ, ಗುಡ್ಡಪ್ಪ ಮೂಕ, ವಿಜಯಕುಮಾರ ಕೊಡಲಹಂಗರಗಾ, ಕಲ್ಯಾಣಿ ಬಮನಳ್ಳಿ, ಸುರೇಖಾ ಡೋಣಿ, ರಾಮಬಾಯಿ ಡೋಣಿ, ಅನೀತಾ ಚೇಂಗಟಿ, ಸಂಗೀತಾ ಖಜೂರಿ, ನಾಗಮ್ಮ ಡೋಣಿ, ಪ್ರಿಯಾಂಕಾ ಬಮನಳ್ಳಿ, ಸಾಬವ್ವ ಗೊಬ್ಬೂರ, ಭೀಮಾಶಂಕರ ಡೋಣಿ, ವಿಠ್ಠಲ ಧನ್ನಿ, ನಿರಂಜನ ಬಮನಳ್ಳಿ, ನಿಂಗಪ್ಪ ಧನ್ನಿ, ಶಾರದಾಬಾಯಿ ದುಧನ ಸೇರಿದಂತೆ ಭೀಮ ನಗರದ ಮಹಿಳೆಯರು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಬೀಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.