ADVERTISEMENT

ಕಲಬುರಗಿ: ಕಾಗಿಣಾ ನದಿ ನೀರಿನ ರಭಸಕ್ಕೆ ಕಿತ್ತುಹೋದ ಸೇತುವೆಯ ರಸ್ತೆ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2024, 4:44 IST
Last Updated 3 ಸೆಪ್ಟೆಂಬರ್ 2024, 4:44 IST
<div class="paragraphs"><p>ಚಿತ್ತಾಪುರ ತಾಲ್ಲೂಕಿನ ದಂಡೋತಿ ಸಮೀಪದ ಕಾಗಿಣಾ ನದಿ ಪ್ರವಾಹದ ರಭಸಕ್ಕೆ ಸೇತುವೆಯ ಮೇಲಿನ ಸಿಮೆಂಟ್ ರಸ್ತೆ ಕಿತ್ತು ಬಿದ್ದಿರುವುದು</p></div>

ಚಿತ್ತಾಪುರ ತಾಲ್ಲೂಕಿನ ದಂಡೋತಿ ಸಮೀಪದ ಕಾಗಿಣಾ ನದಿ ಪ್ರವಾಹದ ರಭಸಕ್ಕೆ ಸೇತುವೆಯ ಮೇಲಿನ ಸಿಮೆಂಟ್ ರಸ್ತೆ ಕಿತ್ತು ಬಿದ್ದಿರುವುದು

   

ಚಿತ್ತಾಪುರ: ತಾಲ್ಲೂಕಿನ ದಂಡೋತಿ ಸಮೀಪದ ಕಾಗಿಣಾ ನದಿ ಸೇತುವೆ ಮೇಲಿನ ಸಿಮೆಂಟ್ ರಸ್ತೆ ನದಿ ಪ್ರವಾಹದ ರಭಸಕ್ಕೆ ಕಿತ್ತು ಹೋಗಿದ್ದು, ಮಂಗಳವಾರ ನದಿ ಹರಿವು ತಗ್ಗಿದ್ದರೂ ವಾಹನಗಳ ಓಡಾಟಕ್ಕೆ ನಿಷೇಧಿಸಲಾಗಿದೆ.

ಎರಡು ದಿನಗಳ ಕಾಲ ಸುರಿದ ಧಾರಾಕಾರ ಮಳೆಯಿಂದಾಗಿ ಎರಡೂ ದಿನ ಸೇತುವೆ ಮುಳುಗಡೆಯಾಗಿತ್ತು. ಮಂಗಳವಾರ ಬೆಳಿಗ್ಗೆ ನೀರಿನ ಹರಿವಿನ ಪ್ರಮಾಣ ಇಳಿಮುಖವಾಗಿದ್ದು, ಸೇತುವೆಯ ಮೇಲಿನ ಸಿಮೆಂಟ್ ರಸ್ತೆ ಕಿತ್ತು ಹೋಗಿದೆ. ಕಿತ್ತು ಹೋದ ರಸ್ತೆಯ ಅವಶೇಷಗಳು ಅಲ್ಲಲ್ಲಿ ಜಮೆಯಾಗಿ ನಿಂತಿದೆ. ಕಿತ್ತು ಹೋದ ರಸ್ತೆಯನ್ನು ಸ್ಥಳೀಯರು ಕುತೂಹಲದಿಂದ ವೀಕ್ಷಿಸುತ್ತಿದ್ದಾರೆ.

ADVERTISEMENT

ರಸ್ತೆಗೆ ಹಾನಿಯಾಗಿದ್ದರಿಂದ ಯಾವುದೇ ಬೈಕ್, ವಾಹನಗಳು ತೆಗೆದುಕೊಂಡು ಹೋಗದಂತೆ ಮಾಡಬೂಳ ಪೊಲೀಸ್ ಠಾಣೆಯ ಸಿಬ್ಬಂದಿ ನಿಗಾ ವಹಿಸಿ ಜನರಿಗೆ ಎಚ್ಚರಿಸುತ್ತಿದ್ದಾರೆ.

ಪ್ರವಾಹದಿಂದ ಸೇತುವೆಯ ಮೇಲಿನ ರಸ್ತೆ ಹಾನಿಯಾಗಿದ್ದರಿಂದ ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ಗಳು ದಂಡೋತಿ ಸೇತುವೆಗೆ ಭೇಟಿ ನೀಡಿದ್ದಾರೆ. ಸೇತುವೆ ಸ್ಥಿತಿಗತಿ ತಪಾಸಣೆ ಮಾಡಿ, ಹಾನಿಯಾಗಿರುವ ರಸ್ತೆಯ ತಾತ್ಕಾಲಿಕ ದುರಸ್ತಿ ಬಳಿಕ ವಾಹನಗಳು ಸಂಚರಿಸುವಂತಹ ಸ್ಥಿತಿ ನಿರ್ಮಾಣವಾಗಿದೆ.

ನದಿಯಲ್ಲಿನ ಪ್ರವಾಹ ಕಡಿಮೆಯಾಗಿ ಸೇತುವೆ ಮೇಲೆ ವಾಹನ ಸಂಚಾರ ಯಥಾಸ್ಥಿತಿ ಮತ್ತೆ ಶುರುವಾಗುತ್ತದೆ ಎಂದು ನಿರೀಕ್ಷಿಸುತ್ತಿದ್ದ ನದಿಯ ಉತ್ತರಕ್ಕೆ ಇದ್ದ ಗ್ರಾಮಗಳ ಜನರಿಗೆ, ವಿದ್ಯಾರ್ಥಿಗಳಿಗೆ ನಿರಾಸೆಯಾಗಿದೆ. ಚಿತ್ತಾಪುರದ ಶಾಲಾ- ಕಾಲೇಜಿಗೆ ಹೋಗಲು ಆಗದೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ.

ರಸ್ತೆ ದುರಸ್ತಿ ಮಾಡುವವರೆಗೆ ಚಿತ್ತಾಪುರ-ಕಲಬುರಗಿ ಬಸ್ ಸಂಚಾರ ಶಹಾಬಾದ್ ಮಾರ್ಗವಾಗಿ ಹಾಗೂ ಚಿತ್ತಾಪುರ- ಸೇಡಂ, ಚಿತ್ತಾಪುರ-ಕಾಳಗಿ ಬಸ್ ಸಂಚಾರ ಮಳಖೇಡ ಮಾರ್ಗವಾಗಿ ಮುಂದುವರಿಸಬೇಕಾಗಿದೆ.

ಸೇತುವೆಯ ಮೇಲೆ ಸಿಮೆಂಟ್ ಕಂಬಗಳ ಪಕ್ಕದಲ್ಲಿ ಅಳವಡಿಸಿದ್ದ ವಿವಿಧ ಮೊಬೈಲ್ ನೆಟ್ ವರ್ಕ್ ವೈರ್ ಪ್ರವಾಹದ ರಭಸಕ್ಕೆ ಕಿತ್ತುಹೋಗಿದೆ. ಸಂಬಂಧಿಸಿದ ಕಂಪನಿಗಳ ಸಿಬ್ಬಂದಿ ಸ್ಥಳಕ್ಕೆ ಬಂದು ದುರಸ್ತಿ ಕಾರ್ಯ ನಡೆಸುತ್ತಿದ್ದಾರೆ.

ಕಳೆದ 2023ರ ಜುಲೈ 25 ರಿಂದ 27ರ ವರೆಗೆ ಕಾಗಿಣಾ ನದಿ ಸೇತುವೆಯು ಎರಡು ದಿನಗಳ ಕಾಲ ಪ್ರವಾಹದಲ್ಲಿ ಮುಳುಗಡೆಯಾಗಿತ್ತು. ಆಗಲೂ ಸೇತುವೆ ಮೇಲಿನ ಸಿಮೆಂಟ್ ರಸ್ತೆಯ ಪದರು ಕಿತ್ತು ಹಾನಿಯಾಗಿ, ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿತ್ತು. ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಲೋಕೋಪಯೋಗಿ ಇಲಾಖೆ ಮುಖ್ಯ ಎಂಜಿನಿಯರ್‌ಗಳೊಂದಿಗೆ ಸೇತುವೆಗೆ ಭೇಟಿ ನೀಡಿ ಪರಿಶೀಲಿಸಿದ್ದರು.

ಅಂದು ತಾತ್ಕಾಲಿಕ ದುರಸ್ತಿಗೆ ಮಾತ್ರ ಆದ್ಯತೆ ನಿಡಿದ್ದರಿಂದ ಇಂದು ಮತ್ತೆ ಅದೇ ರೀತಿಯ ಘಟನೆ ಜರುಗಿದೆ. ಮಳೆಗಾಲದಲ್ಲಿ ಪ್ರವಾಹದಿಂದ ಉಂಟಾಗುತ್ತಿರುವ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಜಿಲ್ಲಾಡಳಿತ ಪ್ರಾಮುಖ್ಯತೆ ನೀಡುತ್ತಿಲ್ಲ ಎನ್ನುವ ಬೇಸರ ಸ್ಥಳೀಯರಿಂದ ಕೇಳಿ ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.