ಸೇಡಂ ತಾಲ್ಲೂಕಿನ ಮಳಖೇಡ ಉತ್ತರಾಧಿ ಮಠ ಕಾಗಿಣಾ ನದಿ ನೀರಿನ ಪ್ರವಾಹದಲ್ಲಿ ಬಹುತೇಕ ಮುಳುಗಿರುವುದು
ಪ್ರಜಾವಾಣಿ ಚಿತ್ರ-ಅವಿನಾಶ ಬೋರಂಚಿ
ಸೇಡಂ: ಮೂಡಣ ಸೂರ್ಯ ನೆತ್ತಿಗೇರುವ ಮುನ್ನವೇ ತಾಲ್ಲೂಕಿನ ಕಾಗಿಣಾ ನದಿ ನೀರಿನ ಪ್ರವಾಹ ತನ್ನ ರೌದ್ರವತಾರದ ಸ್ವರೂಪ ಶನಿವಾರ ತಾಳಿದಂತಿತ್ತು. ತನ್ನ ಕಬಂಧಭಾಹು ಅಗಲಿಸಿ ಕೆಲವೇ ಗಂಟೆಗಳಲ್ಲಿ ಹೊಲ, ಗದ್ದೆ, ಮನೆ, ಕಚೇರಿ, ಶಾಲೆ, ಮಠ-ಮಂದಿರ, ಮಸೀದಿಗಳೆಲ್ಲ ತನ್ನ ಕಪಿಮುಷ್ಠಿಗೆ ತೆಗೆದುಕೊಂಡಿದ್ದಳು.
ಕಾಗಿಣಾ ನದಿ ಪ್ರವಾಹಕ್ಕೆ ತಾಲ್ಲೂಕಿನ ಲಾಹೋಡ್, ಹಾಬಾಳ, ಯಡ್ಡಳ್ಳಿ, ಸಟಪಟನಳ್ಳಿ, ಕುಕ್ಕುಂದಾ, ಸಂಗಾವಿ (ಎಂ), ಬಿಬ್ಬಳ್ಳಿ, ಕಾಚೂರು, ತೆಲ್ಕೂರ, ಸಂಗಾವಿ(ಟಿ), ಮಳಖೇಡ ಗ್ರಾಮಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ. ನೀರಿನ ಪ್ರವಾಹಕ್ಕೆ ಮನೆಗಳಲ್ಲಿನ ದವಸ ಧಾನ್ಯ, ಬಟ್ಟೆ, ಕಾಗದಗಳು ಒದ್ದೆಯಾಗಿದ್ದು ಗ್ರಾಮಸ್ಥರು ತಾವಿದ್ದ ಮನೆಯೇ ತೊರೆದರು.
‘ಅವಶ್ಯಕ ಸಾಮಾಗ್ರಿಗಳನ್ನು ಸುರಕ್ಷಿತವಾಗಿಟ್ಟ ಪ್ರವಾಹ ಸಂತ್ರಸ್ಥರಿಗೆ ನೆರೆ ಮನೆ, ಸಂಬಂಧಿಕರ ಮನೆಗಳೇ ಬಹುತೇಕ ಆಶ್ರಯ ತಾಣಗಳಾದವು. ಕೆಲವು ಕಡೆಗಳಲ್ಲಿ ಸರ್ಕಾರ ಕಾಳಜಿ ಕೇಂದ್ರ ಪ್ರಾರಂಭಿಸಿದ್ದು, ಊಟಕ್ಕೆ ಮತ್ತು ಉಪಹಾರಕ್ಕೆ ತೆರಳಿದರು. ‘ಮನ್ಯಾಗ್ ಮುಂಜಾನಿ ಎದ್ದು ಅಡಿಗಿ ಮಾಡ್ಬೇಕು ಅನ್ನೋಷ್ಟರಲ್ಲಿ ಮಳಿ ನೀರು ಮನಿ ಒಳಗೆ ಬಂತು. ಸಾಮಾನಗಳಾದ್ರೂ ಜ್ವಾಕಿ ಮಾಡ್ಬೇಕು ಅನ್ನೋಷ್ಟರಲ್ಲಿ ನೀರ್ ಮೊಳಕಾಲ್ತನ ಏರಿತು. ಜಾಸ್ತಿ ತಡಮಾಡದೇ ಮನಿಗಿ ಕೀಲಿ ಹಾಕಿ, ಪಕ್ಕದ ಮನೆಯತ್ತ ಓಡಿ ಬಂದವ್ರಿ ಸರ್. ತಾಸ್-ಎರಡತಾಸ್ ಆದ್ಮ್ಯಾಲ್ ನದಿನೀರ್ ಹರೆಯೋದ್ ಕಮ್ ಆತದೇನೋ ಅನ್ಕೊಂಡಿವಿ. ಸಂಜೀತನ ಆದ್ರೂ ಆಗ್ಲಿಲ್ಲ. ಪಕ್ಕದ ಮನಿ ಶಿವಲೀಲಾನೇ ಚಾ-ಊಟ ಮಾಡಿಸಿದ್ಲು’ ಎಂದವಳು ಹಾಬಾಳ ಗ್ರಾಮದ ಶರಣಮ್ಮ.
ಇದು ಕೇವಲ ಶರಣಮ್ಮ ಒಬ್ಬಳದ ಮಾತಲ್ಲ. ಇಂತಹ ಅನೇಕ ಸಂತ್ರಸ್ತೆ ಮಾತುಗಳು. ತಾಲ್ಲೂಕಿನ ಸಟಪಟನಳ್ಳಿ, ಕಾಚೂರು, ಬಿಬ್ಬಳ್ಳಿ, ಹಾಬಾಳ್, ಮಳಖೇಡದ ಜನ ಪ್ರವಾಹಕ್ಕೆ ನಲುಗಿ, ದಿನವಿಡಿ ಮರುಗಿದರು. ಇದೆಂಥಾ ಮಳಿ ಸ್ವಾಮಿ ಅಂತಾ ನೋವು ತೋಡಿಕೊಂಡರು. ತಾಲ್ಲೂಕಿನ ವಿವಿಧೆಡೆ ತೆರಳಿದ ತಹಶೀಲ್ದಾರ್ ಶ್ರೀಯಾಂಕ ಧನಶ್ರೀ, ನೀರ್ ಜಾಸ್ತಿ ಬರ್ತಿದೆ ನದಿ ನೀರನತ್ತ ಹೋಗ್ಬೇಡಿ ಎನ್ನುವ ಸಂದೇಶದ ಜೊತೆಗೆ, ಕಾಳಜಿ ಕೇಂದ್ರಗಳಲ್ಲಿ ಜನರ ಸುರಕ್ಷತೆಯತ್ತ ಗಮನ ಹರಿಸಿದರು. ಪಟ್ಟಣದಲ್ಲಿ ಉಪವಿಭಾಗಾಧಿಕಾರಿ ಪ್ರಭುರೆಡ್ಡಿ, ಪುರಸಭೆ ಅಧ್ಯಕ್ಷ ವೀರೇಂದ್ರ ರುದ್ನೂರ, ಮುಖ್ಯಾಧಿಕಾರಿ ಶರಣಯ್ಯಸ್ವಾಮಿ, ಶಿವಶರಣರರೆಡ್ಡಿ ಪಾಟೀಲ ಸೇರಿದಂತೆ ಇನ್ನಿತ ಅಧಿಕಾರಿಗಳು ತೆರಳಿ ಪರಿಸ್ಥಿತಿ ಅವಲೋಕಿಸಿ ಜನರಿಗೆ ಜಾಗೃತೆಯ ನುಡಿಗಳನ್ನಾಡುತ್ತಿರುವುದು ಸರ್ವೆ ಸಾಮಾನ್ಯವಾಗಿತ್ತು.
ಸೇಡಂ ತಾಲ್ಲೂಕು ಮಳಖೇಡ ಮುಖ್ಯರಸ್ತೆಯ ಮೇಲೆ ಕಾಗಿಣಾ ನದಿ ನೀರಿನ ಬೈಕ್ ಸವಾರರು ಸಂಚರಿಸುತ್ತಿರುವುದು-
ಕಾಗಿಣಾ ನದಿ ನೀರಿನ ಪ್ರವಾಹದ ಶನಿವಾರ ಹೆಚ್ಚಿದ್ದು ಕಾಗಿಣಾ ನದಿ ಮೇಲಿನ ಸೇತುವೆಗಳು ಬಹುತೇಕ ಜಲಾವೃತ್ತಗೊಂಡಿವೆ. ತಾಲ್ಲೂಕಿನಲ್ಲಿ ಸಾಕಷ್ಟು ಪ್ರವಾಹವಾಗಿದ್ದು ಯಾವದೇ ರೀತಿಯ ಪ್ರಾಣಹಾನಿಯಾಗಿರುವ ಕುರಿತು ವರದಿಯಾಗಿಲ್ಲ.ಶ್ರೀಯಾಂಕ ಧನಶ್ರೀ ತಹಶೀಲ್ದಾರ್ ಸೇಡಂ
ಮಳಖೇಡ ಉತ್ತರಾಧಿ ಮಠ ಜಲಾವೃತ್ತ!
ತಾಲ್ಲೂಕಿನ ಮಳಖೇಡ ಗ್ರಾಮದ ಧಾರ್ಮಿಕ ಕೇಂದ್ರ ಉತ್ತರಾಧಿ ಮಠ ಕಾಗಿಣಾ ನದಿ ಪ್ರವಾಹಕ್ಕೆ ಬಹುತೇಕ ಮುಳುಗಿದೆ. ನದಿಗೆ ಅಡ್ಡಲಾಗಿ ನಿರ್ಮಿಸಿದ ತಡೆಗೋಡೆ ಉಕ್ಕಿ ಮಠದ ಆವರಣ ಜಲಾವೃತ್ತಗೊಂಡಿದೆ. ಮೂರನೇ ನೆಲಮಹಡಿ ಒಂದನೇ ಮಹಡಿಗೆ ನೀರು ನುಗ್ಗಿದೆ. ಉತ್ತರಾಧಿದ ಯಾತ್ರಿಕ ನಿವಾಸ ಸೇರಿದಂತೆ ಹಲವು ಕಡೆಗಳಲ್ಲಿ ನೀರು ಸೇರಿದೆ. ಅಲ್ಲಿನ ಅರ್ಚಕರು ಮೂರನೆ ಮಹಡಿಗೆ ಸ್ಥಳಾಂತರಗೊಂಡಿದ್ದಾರೆ ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.