
ಕಲಬುರಗಿ: ತಾಲ್ಲೂಕಿನ ಹಾರುತಿ ಹಡಗಿಲ ಸಮೀಪ ಕಲಬುರಗಿ–ಅಫಜಲಪುರ ರಸ್ತೆಯಲ್ಲಿ ಗುರುವಾರ ಮಧ್ಯಾಹ್ನ ಸಂಭವಿಸಿದ ಸರಣಿ ಅಪಘಾತದಲ್ಲಿ ವೃದ್ಧ ದಂಪತಿ ಸೇರಿದಂತೆ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಫಜಲಪುರ ಕಡೆಯಿಂದ ಕಲಬುರಗಿಯತ್ತ ಬರುತ್ತಿದ್ದ ಜೀಪ್ ಹಾಗೂ ಕಲಬುರಗಿಯಿಂದ ಅಫಜಲಪುರದತ್ತ ಹೊರಟ್ಟಿದ್ದ ಕೆಕೆಆರ್‌ಟಿಸಿ ಬಸ್ ನಡುವೆ ಮೊದಲಿಗೆ ಅಪಘಾತ ಸಂಭವಿಸಿದೆ. ಬಳಿಕ ಅಪಘಾತಕ್ಕೀಡಾದ ಬಸ್‌ಗೆ ಹಿಂದಿನಿಂದ ಬಂದ ಮತ್ತೊಂದು ಬಸ್ ಕೂಡ ಡಿಕ್ಕಿ ಹೊಡೆದಿದೆ. ದುರಂತದಲ್ಲಿ ಜೀಪ್ ನಜ್ಜುಗುಜ್ಜಾಗಿದೆ.
ಜೀಪ್‌ನಲ್ಲಿದ್ದ ಅಫಜಲಪುರ ತಾಲ್ಲೂಕಿನ ತೆಲ್ಲೋಣಗಿ ಗ್ರಾಮದ ಚಂದ್ರಕಾಂತ ಶಿವರಾಯ (80), ಸುಲೋಚನಾ ಚಂದ್ರಕಾಂತ (70), ಮಿಟ್ಟುಸಾಬ್ ಪಟೇಲ್ (35) ಮೃತರು. ಜೀಪ್‌ನಲ್ಲಿ ಪ್ರಯಾಣಿಸುತ್ತಿದ್ದ ಅದೇ ಊರಿನ ಶ್ರೀಶೈಲ್ ಭೂತಾಳೆ ಗಾಯಗೊಂಡಿದ್ದಾರೆ. ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಘತ್ತರಗಾದ ವಿಜಯಲಕ್ಷ್ಮಿ, ಬಂದರವಾಡದ ಗುರುದೇವಿ ಅವರು ಗಾಯಗೊಂಡಿದ್ದಾರೆ.
ಕಲಬುರಗಿ ನಗರ ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ., ಸಂಚಾರ ವಿಭಾಗದ ಎಸಿಪಿ ಸುಧಾ ಆದಿ, ಸಂಚಾರ ಪೊಲೀಸ್ ಠಾಣೆ–1ರ ಇನ್‌ಸ್ಪೆಕ್ಟರ್ ಶಕೀಲ್ ಅಂಗಡಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಗಾಯಾಳುಗಳನ್ನು ಕಲಬುರಗಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.
ಈ ಕುರಿತು ಕಲಬುರಗಿ ಸಂಚಾರ ಠಾಣೆ–1ರಲ್ಲಿ ಪ್ರಕರಣ ದಾಖಲಾಗಿದೆ.
ಗುಲಬರ್ಗಾ ವಿಶ್ವವಿದ್ಯಾಲಯದ ರಸಾಯನ ವಿಜ್ಞಾನ ವಿಭಾಗದ ಪ್ರಯೋಗಾಲಯಗಳ ಕಟ್ಟಡದ ಹಿಂದಿನ ಜಾಲರಿಯಂಥ ಗೋಡೆ ಒಡೆದು ಒಳ ನುಗ್ಗಿದ ದುಷ್ಕರ್ಮಿಗಳು ಮೂರು ಪ್ರಯೋಗಾಲಯಗಳ 10 ಹೆಚ್ಚು ಬಗೆಯ ವಸ್ತುಗಳನ್ನು ಕದ್ದು ಪರಾರಿಯಾಗಿದ್ದಾರೆ. ‘ಪ್ರಯೋಗಾಲಯದಲ್ಲಿ 30 ಗ್ಯಾಸ್ ಬರ್ನರ್ 3 ದೊಡ್ಡ ಬ್ಯಾಟರಿಗಳು 50ಕ್ಕೂ ಅಧಿಕ ನೀರಿನ ಹೊಸ ನಲ್ಲಿಗಳು ಸೇರಿದಂತೆ ವಿವಿಧ ವಸ್ತುಗಳನ್ನು ಕದಿಯಲಾಗಿದೆ. ನಲ್ಲಿಗಳನ್ನು ಕದ್ದ ಬಳಿಕ ನೀರಿನ ಪೈಪ್‌ಗಳಿಗೆ ಬೇರೆ ವಸ್ತುಗಳನ್ನು ತುರುಕಿ ನೀರು ನಿಲ್ಲಿಸಲು ಪ್ರಯತ್ನಿಸಲಾಗಿದೆ. ಅದಾಗ್ಯೂ ಪ್ರಯೋಗಾಲದಲ್ಲಿ ನೀರು ಸೋರಿ ತೊಂದರೆಯಾಗಿದೆ’ ಎಂದು ಮೂಲಗಳು ತಿಳಿಸಿವೆ. ಈ ಕುರಿತು ಪ್ರತಿಕ್ರಿಯೆ ಪಡೆಯಲು ಕುಲಪತಿ ಪ್ರೊ.ಶಶಿಕಾಂತ ಉಡಿಕೇರಿ ಅವರಿಗೆ ಕರೆ ಮಾಡಿದರೂ ಅವರು ಸಂಪರ್ಕಕ್ಕೆ ಸಿಗಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.