ADVERTISEMENT

5 ಸಾವಿರ ಎಕರೆಯಲ್ಲಿ ಕೈಗಾರಿಕಾ ವಲಯ: ಸಚಿವ ನಿರಾಣಿ

​ಪ್ರಜಾವಾಣಿ ವಾರ್ತೆ
Published 26 ಜನವರಿ 2022, 7:05 IST
Last Updated 26 ಜನವರಿ 2022, 7:05 IST
 ಮುರುಗೇಶ ‌ನಿರಾಣಿ
ಮುರುಗೇಶ ‌ನಿರಾಣಿ   

ಕಲಬುರಗಿ: ಹಿಂದುಳಿದ ಭಾಗವಾದ ಕಲಬುರಗಿ ಜಿಲ್ಲೆಯಲ್ಲಿ ಕೈಗಾರಿಕೆಗಳನ್ನು ಆಕರ್ಷಿಸಲು ಸೇಡಂ ರಸ್ತೆಯಲ್ಲಿರುವ ವಿಮಾನ ನಿಲ್ದಾಣಕ್ಕೆ ಹೊಂದಿಕೊಂಡಂತೆ 5 ಸಾವಿರ ಎಕರೆ ಜಮೀನು ವಶಕ್ಕೆ ಪಡೆದುಕೊಂಡು ಬೇರೆ ಬೇರೆ ಉದ್ಯಮಗಳನ್ನು ಆರಂಭಿಸುವ ಹಾಗೂ ‌ಕೈಗಾರಿಕಾ ವಲಯವನ್ನಾಗಿ ಪರಿವರ್ತಿಸುವ ಚಿಂತನೆ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ‌ನಿರಾಣಿ ಪ್ರಕಟಿಸಿದರು.

ಇಲ್ಲಿನ ಪೊಲೀಸ್ ಪರೇಡ್ ಮೈದಾನದಲ್ಲಿ ಬುಧವಾರ 73ನೇ ಗಣರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಕೇಂದ್ರ ಸರ್ಕಾರವು ಜಿಲ್ಲೆಗೆ ಮೆಗಾ ಟೆಕ್ಸ್ ಟೈಲ್ ಪಾರ್ಕ್ ಮಂಜೂರು ಮಾಡಿದ್ದು, 1 ಸಾವಿರ ಎಕರೆ ಪ್ರದೇಶದಲ್ಲಿ ತಲೆ ಎತ್ತಲಿದೆ. ಕೈಗಾರಿಕಾ ನೀತಿ 2020-25ರಲ್ಲಿ ಬೆಂಗಳೂರಿನಾಚೆಗೆ 2 ಮತ್ತು 3ನೇ ಹಂತದ ನಗರಗಳಲ್ಲಿ ಹೂಡಿಕೆ ‌ಮಾಡುವ ಉದ್ಯಮಿಗಳಿಗೆ ವಿಶೇಷ ರಿಯಾಯಿತಿ ನೀಡಲಾಗಿದೆ. ಇದರಲ್ಲಿ ಜಿಲ್ಲೆಗೆ ಗರಿಷ್ಠ ರಿಯಾಯಿತಿ ಮತ್ತು ಪ್ರೋತ್ಸಾಹ ದೊರೆಯಲು ವಲಯ 1ರಲ್ಲಿ ಸೇರಿಸಲಾಗಿದೆ ಎಂದರು.

ADVERTISEMENT

ಜಿಲ್ಲೆಯ ಶಹಬಾದ್ ಪಟ್ಟಣದಲ್ಲಿ ಕಳೆದ 20 ವರ್ಷಗಳಿಂದ ಪಾಳು ಬಿದ್ದಿದ್ದ ಇಎಸ್ಐ ಆಸ್ಪತ್ರೆಯನ್ನು ₹ 14 ಕೋಟಿ ವೆಚ್ಚದಲ್ಲಿ ನವೀಕರಿಣಗೊಳಿಸಲಾಗುತ್ತಿದ್ದು, ಶೀಘ್ರ ಸಾರ್ವಜನಿಕ ಆರೋಗ್ಯ ಸೇವೆಗೆ ಇದು ಲಭ್ಯವಾಗಲಿದೆ. ಇಎಸ್ಐ ಸಂಸ್ಥೆಯು ಈ ಆಸ್ಪತ್ರೆಯ ನಿರ್ವಹಣೆ ಮಾಡಲಿದೆ‌ ಎಂದು ಹೇಳಿದರು.

ವಿಮಾನ ತರಬೇತಿ ಆರಂಭ: 2019ರಲ್ಲಿ ಆರಂಭವಾದ ವಿಮಾನ ನಿಲ್ದಾಣದಲ್ಲಿ ಹೈದರಾಬಾದ್ ನ ಏಷ್ಯಾ ಫೆಸಿಫಿಕ್ ವಿಮಾನ ತರಬೇತಿ ಸಂಸ್ಥೆಯು ತನ್ನ ತರಬೇತಿ ಶಾಲೆಯನ್ನು ಆರಂಭಿಸಿದ್ದು, ನವದೆಹಲಿಯ ರೆಡ್ ಬರ್ಡ್ ಏವಿಯೇಷನ್‌ ಅಕಾಡೆಮಿ ಸಂಸ್ಥೆಯ ಶಾಲೆಯೂ ಕೆಲ ತಿಂಗಳಲ್ಲಿ ಆರಂಭಗೊಳ್ಳಲಿದೆ.‌ ಇದರಿಂದ ಪೈಲಟ್ ಆಗಬೇಕೆಂಬ ಇಲ್ಲಿನ ಆಕಾಂಕ್ಷಿಗಳ ಕನಸಿಗೆ ರೆಕ್ಕೆ ಬಂದಿದೆ ಎಂದು ಸಚಿವ ನಿರಾಣಿ ಹೇಳಿದರು.

ಉಪಪಂಗಡಗಳಿಗೂ ಸೌಲಭ್ಯ ಸಿಗಬೇಕು: ಪಂಚಮಸಾಲಿ ಸಮಾಜ ಅಷ್ಟೇ ಅಲ್ಲದೇ, ವೀರಶೈವ ಲಿಂಗಾಯತ ಸಮಾಜದ ಇತರ ಉಪ ಪಂಗಡಗಳೂ ಸಾಮಾಜಿಕವಾಗಿ, ಆರ್ಥಿಕವಾಗಿ ‌ಮೇಲೆ ಬರಬೇಕು ಎಂಬುದು ನನ್ನ ಆಸೆ. ಹಾಗಾಗಿ, ಅವರಿಗೂ ಮೀಸಲಾತಿಯ ಪ್ರಯೋಜನ ಸಿಗಬೇಕು ಎಂದಿದ್ದೇನೆ. ಈ ಬಗ್ಗೆ ಅನಗತ್ಯ ವಿವಾದ ಉಂಟು ಮಾಡಲಾಗುತ್ತಿದೆ ಎಂದು ಕಾರ್ಯಕ್ರಮದ ಬಳಿಕ ಸುದ್ದಿಗಾರರಿಗೆ ತಿಳಿಸಿದರು.

ಪಕ್ಷದ ‌ಮುಖಂಡರು ನಿರ್ಧರಿಸುವರು: ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮುಖ್ಯಮಂತ್ರಿ ‌ಬಸವರಾಜ ಬೊಮ್ಮಾಯಿ ಹಾಗೂ ಕೇಂದ್ರ, ರಾಜ್ಯದ ವರಿಷ್ಠರು ಶೀಘ್ರ ‌ನಿರ್ಣಯ ಕೈಗೊಳ್ಳಲಿದ್ದಾರೆ.‌ ಕಲಬುರಗಿ ಜಿಲ್ಲೆಗೆ ಸಚಿವ ಸ್ಥಾ‌ನ ನೀಡಬೇಕು ಎಂಬ ಬೇಡಿಕೆಯನ್ನು ಪರಿಗಣಿಸಲಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.