ADVERTISEMENT

ಕಲಬುರಗಿ|ಹೊಸ ರೂಪದ ಅರಿವು ಕೇಂದ್ರ: ತಲೆಎತ್ತುತ್ತಿವೆ 41 ಹೊಸ ವಿನ್ಯಾಸದ ಗ್ರಂಥಾಲಯ

ಬಸೀರ ಅಹ್ಮದ್ ನಗಾರಿ
Published 3 ಡಿಸೆಂಬರ್ 2025, 23:30 IST
Last Updated 3 ಡಿಸೆಂಬರ್ 2025, 23:30 IST
<div class="paragraphs"><p>ಕಲಬುರಗಿ ಜಿಲ್ಲೆಯಲ್ಲಿ ಕೆಕೆಆರ್‌ಡಿಬಿ ಯೋಜನೆಯ ಅನುದಾನದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಹೊಸ ಬಗೆಯ ಅರಿವು ಕೇಂದ್ರದ ವಿನ್ಯಾಸ</p></div>

ಕಲಬುರಗಿ ಜಿಲ್ಲೆಯಲ್ಲಿ ಕೆಕೆಆರ್‌ಡಿಬಿ ಯೋಜನೆಯ ಅನುದಾನದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಹೊಸ ಬಗೆಯ ಅರಿವು ಕೇಂದ್ರದ ವಿನ್ಯಾಸ

   

ಕಲಬುರಗಿ: ಗ್ರಾಮೀಣ ಭಾಗದ ಯುವ ಜನರನ್ನು ಓದಿನತ್ತ ಆಕರ್ಷಿಸಲು ಜಿಲ್ಲೆಯಲ್ಲಿ ನವೀನ ಬಗೆಯ 41 ‘ಅರಿವು ಕೇಂದ್ರಗಳು’ ತಲೆಎತ್ತುತ್ತಿವೆ.

‘ಕಟ್ಟೆಗಳಲ್ಲಿ ಕುಳಿತು ಹರಟುವ ಯುವಕರು, ಚಿಣ್ಣರನ್ನು ಓದಿನತ್ತ ಸೆಳೆಯುವ, ಗುಣಮಟ್ಟದ ಚರ್ಚೆಗೆ ವೇದಿಕೆ ಒದಗಿಸುವ, ಗ್ರಾಮೀಣ ಜನರ ಜ್ಞಾನಮಟ್ಟ ವೃದ್ಧಿಸುವ ಆಶಯವನ್ನು ಈ ಅರಿವು ಕೇಂದ್ರಗಳು ಹೊಂದಿವೆ.

ADVERTISEMENT

ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಮ್ಯಾಕ್ರೊ ಯೋಜನೆಯಡಿ ಒಟ್ಟು ₹11 ಕೋಟಿ ವೆಚ್ಚದಲ್ಲಿ ತಲಾ 40x60 ಅಡಿ ವಿಸ್ತೀರ್ಣದಲ್ಲಿ ಜಿಲ್ಲೆಯಲ್ಲಿ 30 ಗ್ರಾಮ ಪಂಚಾಯಿತಿಗಳಲ್ಲಿ ಈ ಅರಿವು ಕೇಂದ್ರಗಳ ನಿರ್ಮಾಣ ಸಾಗಿದೆ. ಕೆಆರ್‌ಐಡಿಎಲ್‌ ನಿರ್ಮಾಣದ ಹೊಣೆ ಹೊತ್ತಿದೆ.

ಆಳಂದ, ಸೇಡಂ ತಾಲ್ಲೂಕಿನಲ್ಲಿ ತಲಾ ಐದು, ಅಫಜಲಪುರ, ಚಿತ್ತಾಪುರ, ಕಮಲಾಪುರ, ಜೇವರ್ಗಿ ತಾಲ್ಲೂಕಿನಲ್ಲಿ ತಲಾ ನಾಲ್ಕು, ಚಿಂಚೋಳಿ ತಾಲ್ಲೂಕಿನಲ್ಲಿ ಮೂರು ಹಾಗೂ ಯಡ್ರಾಮಿ ತಾಲ್ಲೂಕಿನ ಕುಕನೂರು ಗ್ರಾಮ ಪಂಚಾಯಿತಿಯಲ್ಲಿ ಈ ಹೊಸ ಬಗೆಯ ಅರಿವು ಕೇಂದ್ರಗಳು ತಲೆಎತ್ತಲಿವೆ.

ವೈಶಿಷ್ಟ್ಯವೇನು?:
‘ಸಣ್ಣ ಮೊಗಸಾಲೆ, ಗ್ರಂಥಪಾಲಕರ ಕೊಠಡಿ, ರೆಫರೆನ್ಸ್ ವಿಭಾಗ, ಕಾನ್ಫರೆನ್ಸ್‌ ಕೊಠಡಿ, ಬಲಬದಿಗೆ ಡಿಜಿಟಲ್‌ ಗ್ರಂಥಾಲಯ ಕೊಠಡಿ, ಹೊಸ ಪುಸ್ತಕಗಳು, ಪೀಠೋಪಕರಣಗಳು, ಶೌಚಾಲಯ ವ್ಯವಸ್ಥೆ ಸೇರಿದಂತೆ ಸುಸಜ್ಜಿತ ಸೌಲಭ್ಯ ಗಳನ್ನು ಹೊಸ ಬಗೆಯ ಅರಿವು ಕೇಂದ್ರಗಳು ಹೊಂದಿರಲಿವೆ’ ಎನ್ನುತ್ತಾರೆ ಅಧಿಕಾರಿಗಳು.
ಜಿ.ಪಂ., ತಾ.ಪಂ.ನಿಂದ 11:
ಇದರೊಂದಿಗೆ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿಯ ₹2.75 ಕೋಟಿ ವೆಚ್ಚದಲ್ಲಿ ಇದೇ ಮಾದರಿಯ ಸಣ್ಣ ಪ್ರಮಾಣದ 11 ಅರಿವು ಕೇಂದ್ರಗಳು ಜಿಲ್ಲೆಯಲ್ಲಿ ನಿರ್ಮಾಣವಾಗಲಿವೆ. ತಲಾ ₹25 ಲಕ್ಷ ಅನುದಾನದಲ್ಲಿ ಈ ಅರಿವು ಕೇಂದ್ರಗಳು ರೂಪುಗೊಳ್ಳಲಿವೆ. ಇದರ ಟೆಂಡರ್‌ ಪ್ರಕ್ರಿಯೆ ಮುಗಿದ್ದು ಶೀಘ್ರವೇ ಕೆಲಸ ಶುರುವಾಗಲಿದೆ.

‘ಚಿತ್ತಾಪುರದಲ್ಲಿ 3, ಅಫಜಲಪುರ ದಲ್ಲಿ 2, ಆಳಂದ, ಶಹಾಬಾದ್‌, ಯಡ್ರಾಮಿ, ಜೇವರ್ಗಿ, ಕಮಲಾಪುರ ಹಾಗೂ ಕಲಬುರಗಿಯಲ್ಲಿ ತಲಾ ಒಂದೊಂದು ಪಂಚಾಯಿತಿಗಳಲ್ಲಿ ಈ ಅರಿವು ಕೇಂದ್ರಗಳು ತಲೆಎತ್ತಲಿವೆ. ಮುಂಬರುವ ಮಾರ್ಚ್‌ ಹೊತ್ತಿಗೆ ಇವುಗಳ ಕಾಮಗಾರಿ ಪೂರ್ಣಗೊಳ್ಳ
ಲಿದೆ’ ಎಂಬುದು ಅಧಿಕಾರಿಗಳ ವಿಶ್ವಾಸ.

‘ಅರಿವು ಕೇಂದ್ರಗಳ ಸರಣಿ ಬಲವರ್ಧನೆ’

‘ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿಗಳ ₹3 ಕೋಟಿ ಅನುದಾನದಲ್ಲಿ 100 ಅರಿವು ಕೇಂದ್ರಗಳ ದುರಸ್ತಿ, ಜೀರ್ಣೋದ್ಧಾರ ಮಾಡಲಾಗಿದೆ. ಪೀಠೋಪಕರಣ, ಹೊಸ ಪುಸ್ತಕಗಳು, ಚಿತ್ತಾಕರ್ಷಕ ತಾರಸಿ, ಮಕ್ಕಳ ಸ್ನೇಹಿ ವರ್ಣಚಿತ್ರ ಸೇರಿ ಡಿಜಿಟಲ್‌ ಮೂಲಸೌಕರ್ಯಗಳನ್ನು ಒದಗಿಸಲಾಗಿದೆ’ ಎನ್ನುತ್ತಾರೆ ಜಿಲ್ಲಾ ಪಂಚಾಯಿತಿ ಸಿಇಒ ಭಂವರ್‌ಸಿಂಗ್‌ ಮೀನಾ.

‘ಇದಲ್ಲದೇ, ₹2.50 ಕೋಟಿ ವೆಚ್ಚದಲ್ಲಿ 235 ಗ್ರಂಥಾಲಯಗಳಿಗೆ ಪೀಠೋಪಕರಣ ಒದಗಿಸಲಿದ್ದು, ₹77 ಲಕ್ಷ ವೆಚ್ಚದಲ್ಲಿ ಕಂಪ್ಯೂಟರ್‌ ಖರೀದಿಸಿ ಒದಗಿಸಲಾಗಿದೆ ಎಂದರು.

ಅರಿವು ಕೇಂದ್ರಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಓದುವ ವಿದ್ಯಾರ್ಥಿಗಳಿಗೆ ಅನುವಾಗುವಂತೆ ಪುಸ್ತಕ, ಡಿಜಿಟಲ್ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. 3 ಸಾವಿರ ಡೆಸ್ಕ್‌ಟಾಪ್‌ ಖರೀದಿಸಲಾಗಿದೆ
ಪ್ರಿಯಾಂಕ್ ಖರ್ಗೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ
‘ಪ್ಲಾಸ್ಟಿಕ್‌ ತ್ಯಾಜ್ಯ’ ಮರುಬಳಕೆ
‘ಕೆಕೆಆರ್‌ಡಿಬಿ ಅನುದಾನದಲ್ಲಿ ಕೆಆರ್‌ಐಡಿಎಲ್‌ನಿಂದ ನಿರ್ಮಿಸುತ್ತಿರುವ 30 ಅರಿವು ಕೇಂದ್ರಗಳಲ್ಲಿ 29 ಅರಿವು ಕೇಂದ್ರಗಳ ಕಟ್ಟಡ ಮರಳು, ಸಿಮೆಂಟ್‌, ಕಬ್ಬಿಣ, ಜಲ್ಲಿಕಲ್ಲಿನಲ್ಲಿ ನಿರ್ಮಾಣವಾಗಲಿವೆ. ಆದರೆ, ಚಿತ್ತಾಪುರ ತಾಲ್ಲೂಕಿನ ಅಳ್ಳೊಳ್ಳಿಯ ಅರಿವು ಕೇಂದ್ರ ಹೊಸ ಬಗೆಯಲ್ಲಿ ನಿರ್ಮಾಣವಾಗುತ್ತಿದೆ. ಅದಕ್ಕಾಗಿ ಪ್ಲಾಸ್ಟಿಕ್‌ ತ್ಯಾಜ್ಯವನ್ನು ಮರುಬಳಕೆ ಮಾಡಿ ಬಳಸಲಾಗಿದೆ. ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್‌ ಸಚಿವರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಒತ್ತಾಸೆಯೇ ಇದಕ್ಕೆ ಪ್ರೇರಣೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.