ಅಷಾಡ ಏಕಾದಶಿ ಅಂಗವಾಗಿ ಕಲಬುರಗಿಯ ಸ್ಟೇಷನ್ ಬಜಾರ್ ಬಳಿ ವಿಠ್ಠಲ ಮಂದಿರದಲ್ಲಿ ಭಾನುವಾರ ಮೂರ್ತಿಗೆ ವಿಶೇಷವಾಗಿ ಅಲಂಕಾರ ಮಾಡಲಾಯಿತು. ಪ್ರಜಾವಾಣಿ ಚಿತ್ರ
ಕಲಬುರಗಿ: ನಗರದ ವಿಠ್ಠಲ–ರುಕ್ಮಿಣಿ ಮಂದಿರಗಳಲ್ಲಿ ಭಾನುವಾರ ಆಷಾಢ ಏಕಾದಶಿಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಬ್ರಹ್ಮಪುರ ಬಡಾವಣೆಯ ಉತ್ತರಾಧಿ ಮಠದ ವಿಠ್ಠಲ–ರುಕ್ಮಿಣಿ ಮಂದಿರ, ಶಹಾಬಜಾರನ ವಿಠ್ಠಲ ಮಂದಿರ, ವೆಂಕಟರಮಣ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ವಿಠ್ಠಲ–ರುಕ್ಮಿಣಿ ಮೂರ್ತಿಗೆ ಪಂಚಾಮೃತ ಅಭಿಷೇಕ, ಜಲಾಭಿಷೇಕ, ಶೃಂಗಾರ ಆರತಿ, ಮಹಾಮಂಗಳಾರತಿ, ನೈವೇದ್ಯ, ಗರುಡ ವಾಹನ ಮೆರವಣಿಗೆ ಸೇರಿದಂತೆ ನಾನಾ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಬೆಳಿಗ್ಗೆಯಿಂದಲೇ ಭಕ್ತಾದಿಗಳು ದೇವಸ್ಥಾನಗಳಿಗೆ ಆಗಮಿಸಿ, ಸಾಲಾಗಿ ನಿಂತು ವಿಠ್ಠಲ ದೇವರ ದರ್ಶನ ಪಡೆದು ಧನ್ಯತಾ ಭಾವ ಅನುಭವಿಸಿದರು. ಭಜನಾ ಮಂಡಳಿಗಳಿಂದ ಭಜನೆ ಮತ್ತು ಭಗವದ್ಗೀತಾ ಪಠಣ ನಡೆಯಿತು. ಬಂದಂತಹ ಭಕ್ತರಿಗೆ ದೇವಸ್ಥಾನದ ಪರವಾಗಿ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.
ಗರುಡ ವಾಹನ ಮೆರವಣಿಗೆ: ಬ್ರಹ್ಮಪುರ ಬಡಾವಣೆಯ ದೇಶಮುಖ ವಾಡಾದಲ್ಲಿ ರುಕ್ಮಿಣಿ–ಪಾಂಡುರಂಗ ದೇವರ ಗರುಡ ವಾಹನವನ್ನು ಪಾಂಡುರಂಗ ದೇವಸ್ಥಾನದವರೆಗೆ ಬಾಜಾ– ಭಜಂತ್ರಿ, ಭಜನೆಯೊಂದಿಗೆ ತೆರಳಿ ಪೂಜೆ ಸಲ್ಲಿಸಿದ ನಂತರ ಮರಳಿ ದೇಶಮುಖ ವಾಡಾಕ್ಕೆ ಬಂದು ಪ್ರತಿಷ್ಠಾಪನೆ ಮಾಡಲಾಯಿತು.
ದೇವರಾವ ದೇಶಮುಖ, ಪಾಂಡುರಂಗ ದೇಶಮುಖ, ಅಭಿಜಿತ್ ದೇಶಮುಖ, ಅಶ್ವಿನ್ ದೇಶಮುಖ, ಅಂಬರೀಶ್ ದೇಶಮುಖ, ಔರಂಗಾಬಾದ್‌ನ ಧನಂಜಯ, ಗೋವಿಂದ ಕುಲಕರ್ಣಿ, ನಿಕೇತ್, ಸಂಜಯ ಮಾಡ್ಯಾಳಕರ್, ಅಶ್ವತ್ಥ, ನಾರಾಯಣ ಓಂಕಾರ, ಉಡುಪಿ ಪುರೋಹಿತ್, ವೆಂಕಟೇಶ ಅಷ್ಟಗಿ, ಭೀಮಸೇನ ಕುಲಕರ್ಣಿ, ಕಂದಿಯ ದೀಪಕ್, ಸುನೀಲ್ ದೇಶಮುಖ, ಸುಧೀಂದ್ರ ಪಾಲ್ಗೊಂಡಿದ್ದರು.
ಶ್ರೀಮದ್ಭಗವದ್ಗೀತಾ ಶ್ರವಣ: ಆಷಾಢ ಉತ್ಸವದ ಅಂಗವಾಗಿ ವಿಶ್ವಮಧ್ವ ಮಹಾಪರಿಷತ್ ಮತ್ತು ಪಾಂಡುರಂಗ ಯುವಕ ಮಂಡಳಿ ವತಿಯಿಂದ ನಿರಂತರ ಶ್ರೀಮದ್ಭಗವದ್ಗೀತಾ ಶ್ರವಣ ನಡೆಯಿತು.
ಹನುಮಂತಾಚಾರ್ಯ ಸರಡಗಿ, ಗುರುಮಧ್ವಾಚಾರ್ಯ ನವಲಿ, ವಿಷ್ಣುದಾಸಾಚಾರ್ಯ ಖಜೂರಿ, ವಿನೋದಾಚಾರ್ಯ ಗಲಗಲಿ, ಗೋಪಾಲಾಚಾರ್ಯ ಅಕಮಂಚಿ, ಪ್ರಸನ್ನಾಚಾರ್ಯ ಜೋಶಿಯವರಿಂದ ಪ್ರವಚನ ಜರುಗಿತು. ಬಳಿಕ ಲಕ್ಷ್ಮಿನಾರಾಯಣ ಭಜನಾ ಮಂಡಳಿ ಹಾಗೂ ಶ್ರೀರಂಗವಿಠ್ಠಲ ಭಜನಾ ಮಂಡಳಿಯಿಂದ ಹರಿಭಜನೆ ನಡೆಯಿತು.
ಭಕ್ತರ ದಿಂಡಿ ಯಾತ್ರೆ
ಆಷಾಢ ಉತ್ಸವದ ಅಂಗವಾಗಿ ಮಾರವಾಡಿ ಸಮಾಜದ ವತಿಯಿಂದ ಮಾಯಾ ಮಂದಿರ, ಸೂಪರ್ ಮಾರ್ಕೆಟ್‌ದಿಂದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದ ಮೂಲಕ ಸ್ಟೇಷನ್ ಬಜಾರ್‌ನ ವಿಠ್ಠಲ ಮಂದಿರದ ವರೆಗೆ ದಿಂಡಿ ಯಾತ್ರೆ ಜರುಗಿತು.
ಮಂದಿರದ ಮೂರ್ತಿಗಳಿಗೆ ಪಂಚಾಮೃತ ಅಭಿಷೇಕ, ಮೂರ್ತಿ ಅಲಂಕಾರ, ಜಲ ಅಭಿಷೇಕ, ಶೃಂಗಾರ ಆರತಿ, ಮಧ್ಯಾಹ್ನ 12ಕ್ಕೆ ಆರತಿ, ಸಂಜೆ 7ಕ್ಕೆ ಮಹಾ ಮಂಗಳಾರತಿ, ರಾತ್ರಿ 10ಕ್ಕೆ ಶಯನ ಆರತಿ ನಡೆಯಿತು. ವಿಷ್ಣು ಸಹಸ್ರನಾಮ ಪಠಣವೂ ಮಾಡಲಾಯಿತು.
ರಂಗ ವಿಠ್ಠಲ ಮಹಿಳಾ ಭಜನಾ ಮಂಡಳ, ವಿಠ್ಠಲ ಮಂದಿರ ಮಹಿಳಾ ಭಜನಾ ಮಂಡಳಿ, ರಜಪೂತ ಮಾತಾ ಜಾಗರಣಾ ಸಮಿತಿ ಹಾಗೂ ಶರಣಬಸವೇಶ್ವರ ಸಂಗೀತ ಕಲಾ ಬಳಗದ ವತಿಯಿಂದ ಭಜನಾ ಕಾರ್ಯಕ್ರಮ ನಡೆದವು. ವಿಠಲ ಮಂದಿರ ಟ್ರಸ್ಟ್ ಅಧ್ಯಕ್ಷ ದತ್ತಾತ್ರೇಯ ಪುಕಾಳೆ, ಉಪಾಧ್ಯಕ್ಷ ಬ್ರಿಜ್‌ಗೋಪಾಲ ಡಾಗಾ, ಟ್ರಸ್ಟಿ ಮನೀಷ್ ಜಾಜು, ಪ್ರಮುಖರಾದ ದತ್ತಾತ್ರೇಯ ಜೇವರ್ಗಿ, ಹುಲಿಗೆಪ್ಪ ಕನಕಗಿರಿ, ಪ್ರವೀಣ್ ಪುಣೆ, ಅರ್ಚಕ ರೋಷನ್ ಮಹಾರಾಜ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.