ADVERTISEMENT

PV Web Exclusive | ನೋಡಿ ಸ್ವಾಮಿ...ಕಲಬುರ್ಗಿ ಆಟೋ ಚಾಲಕರು ಇರೋದೆ ಹೀಗೆ!

ರಾಹುಲ ಬೆಳಗಲಿ
Published 10 ಅಕ್ಟೋಬರ್ 2020, 13:27 IST
Last Updated 10 ಅಕ್ಟೋಬರ್ 2020, 13:27 IST
ಕಲಬುರ್ಗಿಯ ಆಟೋರಿಕ್ಷಾದಲ್ಲಿ ಪ್ರಯಾಣ
ಕಲಬುರ್ಗಿಯ ಆಟೋರಿಕ್ಷಾದಲ್ಲಿ ಪ್ರಯಾಣ   

ಸುಡು ಬಿಸಿಲು. ನೀವು ಬೆಂಗಳೂರಿನಲ್ಲಿ ತುರ್ತಾಗಿ ಸ್ಥಳವೊಂದಕ್ಕೆ ಹೋಗಬೇಕು. ಅತ್ತ ಬಸ್ ಬೇಗನೇ ಬರಲ್ಲ, ಇತ್ತ ಟ್ಯಾಕ್ಸಿಯೂ ಸಿಗಲ್ಲ. ಕೈ ಮಾಡಿದರೂ ಆಟೋ ನಿಲ್ಲಲ್ಲ. ನೇರವಾಗಿ ಆಟೋರಿಕ್ಷಾ ಸ್ಟ್ಯಾಂಡ್‌ಗೆ ತೆರಳಿ, ‘ಇಂಥ ಕಡೆ ಬರುವಿರಾ’ ಎಂದು ಕೇಳಿದರೆ, ‘ಆಗಲ್ಲ, ತುಂಬಾ ದೂರ’ ಎಂಬ ಉತ್ತರ ಸಿಗುತ್ತದೆ. ಅಲ್ಲೇ ಬದಿಯಲ್ಲೇ ಇರುವ ಮತ್ತೊಬ್ಬ, ‘ಮೀಟರ್ ಮೇಲೆ‌ ₹ 50 ಕೊಡುವಿರಾ’ ಎಂಬ ಮರುಪ್ರಶ್ನಿಸಲು ತಡ ಮಾಡುವುದಿಲ್ಲ.

ಆದರೆ, ಕಲಬುರ್ಗಿಯಲ್ಲಿ ಪರಿಸ್ಥಿತಿ ಖಂಡಿತ ಹೀಗಿಲ್ಲ. ನೀವು ಆಟೋ ಸ್ಟ್ಯಾಂಡ್ ಹೋಗಲೇಬೇಕಿಲ್ಲ. ರಸ್ತೆ ಬದಿ ಕೈಕಟ್ಟಿ ಸುಮ್ಮನೆ ನಿಮ್ಮ ಪಾಡಿಗೆ ನೀವು ಒಬ್ಬರೆ ಅಥವಾ ಇನ್ನೊಬ್ಬರ ಜೊತೆ ಮಾತನಾಡುತ್ತ‌ ನಿಂತಿದ್ದು ಕಾಣಸಿಕ್ಕರೆ ಸಾಕು, ‘ಎಲ್ಲಿ ಹೋಗಬೇಕು? ಬನ್ನಿ ಬನ್ನಿ’ ಎಂದು ಕರೆಯುತ್ತಾರೆ. ಮೀಟರ್ ಉಸಾಬರಿಗೆ ಅಪ್ಪಿತಪ್ಪಿಯೂ ಹೋಗಲ್ಲ. ಕಮ್ಮಿಯೆಂದರೆ ₹ 5 ಅಥವಾ ₹ 10, ಜಾಸ್ತಿಯಾದರೆ ₹ 20 ಅಥವಾ ₹ 50ಕ್ಕೆ ಕೇಳಿ, ನೀವು ಹೋಗುವ ಸ್ಥಳಕ್ಕೆ ಸುರಕ್ಷಿತವಾಗಿ ತಲುಪಿಸುತ್ತಾರೆ.

ಇಲ್ಲಿನ ಚಾಲಕರು ಎಷ್ಟು ಉದಾರಿಗಳು ಎಂದರೆ, ಯಾರನ್ನೂ ನಿರಾಸೆ ಪಡಿಸುವುದಿಲ್ಲ. ಹಿಂಬದಿ ಸೀಟಿನಲ್ಲಿ ಮೂವರು ಪ್ರಯಾಣಿಕರನ್ನು ಕೂರಿಸಿಕೊಂಡು ಹೊರಡುವ ಆಟೋಚಾಲಕರು, ರಸ್ತೆ ಬದಿ ವ್ಯಕ್ತಿಯೊಬ್ಬ ಕಾಯುತ್ತ ನಿಂತಿರುವುದು ಕಂಡರೆ ಸಾಕು ತಕ್ಷಣ ಬ್ರೇಕ್ ಹಾಕುತ್ತಾರೆ.

ADVERTISEMENT

ತಮ್ಮ ಸೀಟಿನಲ್ಲೇ ಹೊಂದಾಣಿಕೆ ಮಾಡಿಕೊಂಡು ಆ ವ್ಯಕ್ತಿಗೆ ಬಲ ಬದಿ ಕೂರಿಸಿಕೊಳ್ಳುತ್ತಾರೆ. ಮುಂದೆ, ಮತ್ತೊಬ್ ವ್ಯಕ್ತಿ ಸಿಕ್ಕರೆ, ಅವರಿಗೆ ಎಡಬದಿಯಲ್ಲಿ ಜಾಗ. ಹಿಂಬದಿ ಮೂವರು, ಚಾಲಕ ಸಮೇತ ಮುಂಬದಿ ಮೂವರು ಸೇರಿ ಪ್ರಯಾಣ ಮುಂದುವರೆಯುತ್ತದೆ. ರಸ್ತೆ ಬದಿ ಇನ್ನಿಬ್ಬರೂ ಆಟೋಗಾಗಿ ಕಾಯುತ್ತಿದ್ದರೆ, ಅವರಿಗೂ ಸಹ ಜಾಗದ ವ್ಯವಸ್ಥೆ ಮಾಡಲಾಗುತ್ತದೆ. ಅವರಲ್ಲಿ ಒಬ್ಬ ಎಡಬದಿ ಮೀಟರ್ ಕೆಳಗಿನ ಪುಟ್ಟ ಕಬ್ಬಿಣದ ಕಟ್ಟೆ ಮೇಲೆ ಕೂರಬೇಕು, ಮತ್ತೊಬ್ಬ ಬಲ ಬದಿ ತುದಿಯಲ್ಲಿ ಕೂತು ಕಂಬಿ ಗಟ್ಟಿಯಾಗಿ ಹಿಡಿಯಬೇಕು.

ಆಟೋದಲ್ಲಿ ಹೀಗೆ ಏಕಕಾಲಕ್ಕೆ ಎಂಟು ಮಂದಿ ಕೂತು ಪ್ರಯಾಣಿಸಿದಾಗಲೇ ಬಹುತೇಕ ಚಾಲಕರಿಗೆ ಸಮಾಧಾನ. ನಾಲ್ಕು ಜನರಷ್ಟೇ ಪ್ರಯಾಣಿಸುವಂತೆ ವಾಹನ ಸಿದ್ಧಪಡಿಲಾಗಿದ್ದರೂ ಪ್ರತಿಯೊಂದು ಖಾಲಿ ಸ್ಥಳವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂಬ ಉಮೇದು ಚಾಲಕರದ್ದು. ಬೆಳಿಗ್ಗೆ ಅಥವಾ ಸಂಜೆ ವೇಳೆ ಒಂದೊಂದು ಆಟೋದಲ್ಲಿ ಕನಿಷ್ಠ 6 ರಿಂದ 8 ಮಂದಿ ಇದ್ದೇ ಇರುತ್ತಾರೆ!

ಸಂಬಂಧ ವೃದ್ಧಿಸುವ, ಖರ್ಚು ಉಳಿಸುವ ‘ಶೇರಿಂಗ್’

ಬೇರೆ ಬೇರೆ ಸ್ಥಳಗಳಿಗೆ ಹೋಗಬೇಕಿರುವ ಪ್ರಯಾಣಿಕರನ್ನು ಕೂರಿಸಿಕೊಂಡು ಅಲ್ಲಲ್ಲಿ ಇಳಿಸುವ ಆಟೋ ಚಾಲಕರ ‘ಶೇರಿಂಗ್’ ಪದ್ಧತಿ ಒಂದೆಡೆ ಪ್ರಯಾಣಿಕರ ನಡುವಿನ ಸಂಬಂಧ ವೃದ್ಧಿಗೊಳಿಸಿದರೆ, ಮತ್ತೊಂದೆಡೆ ಖರ್ಚನ್ನೂ ಉಳಿಸುತ್ತದೆ. ಪ್ರಯಾಣಿಕರು ₹ 5 ರಿಂದ ₹ 15 ರವೆರೆಗೆ ಕೊಟ್ಟರೆ ಸಾಕು, ಚಾಲಕರಿಗೆ ನಿರೀಕ್ಷೆಯಷ್ಟು ಆದಾಯ ಬರುತ್ತದೆ. ಪ್ರಯಾಣಿಕರಿಗೆ ಹೆಚ್ಚಿನ ಹಣ ನೀಡುವುದು ಕೂಡ ತಪ್ಪುತ್ತದೆ.

‘ಒಮ್ಮೆಲೇ ₹ 40 ಅಥವಾ ₹ 50 ಕೇಳಿಬಿಟ್ಟರೆ, ಜನರು ಆಟೊ ಹತ್ತಲು ಹಿಂಜರಿಯುತ್ತಾರೆ. ಕೇಳಿದಷ್ಟು ಹಣ ನೀಡುವ ಕೆಲವರು ತಮ್ಮನ್ನು ಅಷ್ಟೇ ಕೂರಿಸಿಕೊಂಡು ಹೋಗಲು ಹೇಳುತ್ತಾರೆ. ಇನ್ನೂ ಕೆಲವರು ಕಡಿಮೆ ಹಣವನ್ನು ಕೊಟ್ಟು, ಶೇರಿಂಗ್‌ ಮಾಡಿಕೊಳ್ಳಲು ಹೇಳುತ್ತಾರೆ. ಹೀಗಾಗಿ ನಾವು ಎರಡೂ ರೀತಿಯ ಪ್ರಯಾಣಿಕರ ಜೊತೆ‌ ಒಗ್ಗಿ ಹೋಗಿದ್ದೇವೆ. ಅವರನ್ನು ಅವರು ಹೇಳಿದ ಸ್ಥಳಕ್ಕೆ ತಲುಪಿಸುವುದು ನಮ್ಮ ಗುರಿ’ ಎಂದು ಆಟೋ ಚಾಲಕ ನಯೀಮ್ ಹೇಳುತ್ತಾರೆ.

ಸೀಟಿನಲ್ಲಿ ಪ್ರಯಾಣಿಕರು ಕೆಲವೇ ಹೊತ್ತು ಕೂತರೂ ಪರಸ್ಪರ ಪರಿಚಯ ಮಾಡಿಕಳ್ಳುತ್ತಾರೆ. ಇಂಥ ಕಡೆ ಮನೆ, ಅಲ್ಲಿ ಅಂಗಡಿಯಿದೆ ಎಂದು ಹೇಳಿಕೊಂಡು ಮಾತುಗಳನ್ನು ಆರಂಭಿಸುವ ಅವರ ನಡುವೆ ಗಟ್ಟಿಯಾದ ಸಂಬಂಧ ಬೇರೂರುತ್ತದೆ. ಒಂದೇ ಪ್ರದೇಶದವರು ಆಗಿಬಿಟ್ಟರಂತೂ ಸ್ನೇಹ ಸಂಬಂಧ ವೃದ್ಧಿಸುತ್ತದೆ.

ಆಯಿ, ಬಾಬಾ, ಮುತ್ಯಾಗೆ ಗೌರವ

ಆಟೋಗಾಗಿ ಕಾಯುವ ಹಿರಿಯ ನಾಗರಿಕರಿಗೆ ಇಲ್ಲಿ ವಿಶೇಷ ಗೌರವ. ಯಾರಾದರೂ ವೃದ್ಧರು ಇಂಥ ಸ್ಥಳಕ್ಕೆ ಹೋಗಬೇಕೆಂದು ಹೇಳಿದರೆ ಸಾಕು, ಸ್ಥಳಾವಕಾಶ ಇಲ್ಲದಿದ್ದರೆ ಹಿಂಬದಿ ಕೂತ ಯುವಕರನ್ನು ಕೆಳಗಿಳಿಸಿ ಮುಂಭಾಗದಲ್ಲಿ ಕೂರಿಸಲಾಗುತ್ತದೆ. ‘ಬಾಬಾ ಅದಾರು, ಮುಂದ ಕೂಡ ಬಾರೋ ತಮ್ಮಾ’ ಎಂದು ಹಿಂಬದಿ ಕೂತವರನ್ನು ಚಾಲಕ ಹೀಗೆ ಆತ್ಮೀಯವಾಗಿ ಕರೆಯುತ್ತಾರೆ. ‘ಆಯಿ ಜೊತೀಗ ನೀವು ಹಿಂದ್ ಅರಾಮಾಗಿ ಕೂಡ್ರಿ ಮುತ್ಯಾ’ ಎಂದು ವೃದ್ಧ ಜೋಡಿಯನ್ನು ಪ್ರೀತಿಯಿಂದ ಬರಮಾಡಿಕೊಳ್ಳುತ್ತಾರೆ.

ಮಾರುಕಟ್ಟೆಯಲ್ಲಿ ಖರೀದಿಸಿದ ಹಣ್ಣು, ತರಕಾರಿಗಳ ತೂಕದ ಚೀಲ ಇದ್ದರಂತೂ ಅವುಗಳನ್ನು ವೃದ್ಧರಿಂದ ಪಡೆದುಕೊಂಡು ಮುಂಭಾಗದಲ್ಲಿ ಇರಿಸಿಕೊಳ್ಳುತ್ತಾರೆ. ‘ನಿಮ್ಮಂಥವು ಈ ವಯಸ್ಸಿನ್ಯಾಗ್ ಕಷ್ಟಪಡಬಾರದು. ಬರ್ರೀ...ಕೂಡ್ರಿ’ ಎಂದು ಕರೆಯುತ್ತಾರೆ. ಇದರಿಂದ ಹರ್ಷಗೊಳ್ಳುವ ವೃದ್ಧರು ಪ್ರೀತಿಯಿಂದ ಸ್ವಲ್ಪ ಜಾಸ್ತಿಯೇ ಬಾಡಿಗೆ ಹಣ ಕೊಡುತ್ತಾರೆ.

ಪ್ರಯಾಣಿಕರಿಗೆ ಪ್ರೀತಿ, ಕೊಂಚ ರಿಯಾಯಿತಿ!

ಕೆಲ ಪ್ರಯಾಣಿಕರ ಬಳಿ ₹ 100 ಅಥವಾ ₹ 500ರ ನೋಟು ಇರುತ್ತದೆ. ಚಿಲ್ಲರೆ ಮಾಡಿಕೊಂಡಿರುವುದಿಲ್ಲ. ಆಗ ಆಟೋ ಚಾಲಕರಿಗೂ ಮತ್ತು ಪ್ರಯಾಣಿಕರಿಗೂ ಇಕ್ಕಟ್ಟಿನ ಪರಿಸ್ಥಿತಿ. ಉದಾಹರಣೆಗೆ, ಸರ್ದಾರ್ ವಲ್ಲಭಭಾಯ್ ಪಟೇಲ್ ಚೌಕ್‌ನಿಂದ ಕೇಂದ್ರ ಬಸ್‌ ನಿಲ್ದಾಣದವರೆಗಿನ ಪ್ರಯಾಣಕ್ಕೆ ಸದ್ಯ ₹ 10 ಕೊಡಬೇಕು. ಆದರೆ, ಪ್ರಯಾಣಿಕನ ಬಳಿ ಚಿಲ್ಲರೆ ಇರುವುದಿಲ್ಲ. ₹ 100 ಅಥವಾ ₹ 500 ಕೊಡಲು ಮುಂದಾದಾಗ, ಚಾಲಕರಿಗೆ ಕೊಂಚ ಬೇಸರವಾಗುತ್ತದೆ.

ಆದರೆ, ಅವರು ಒಮ್ಮೆಲೇ ಪ್ರಯಾಣಿಕರ ಮೇಲೆ ಸಿಟ್ಟು ವ್ಯಕ್ತಪಡಿಸುವುದಿಲ್ಲ. ಚಿಲ್ಲರೆ ಕೊಡಲು ಹೇಳುತ್ತಾರೆ. ಪರ್ಸ್‌ನಲ್ಲಿ ಮತ್ತು ಕಿಸೆಯಲ್ಲಿ ತಡಕಾಡಿದ ನಂತರವೂ ಬರೀ ₹ 5 ಅಥವಾ ₹ 8 ಸಿಗುತ್ತದೆ. ‘ಇಷ್ಟೇ ಸಾಕು ಬಿಡಿ, ಮುಂದೆ ಯಾವಾಗಲಾದರೂ ಕೊಡುವಿರಿಯಂತೆ’ ಎಂದು ಪ್ರಯಾಣಿಕನನ್ನು ಬೀಳ್ಕೊಟ್ಟು ಬೇರೆ ಪ್ರಯಾಣಿಕರನ್ನು ಹುಡುಕುತ್ತ ಚಾಲಕರು ಹೊರಡುತ್ತಾರೆ.

ಪೊಲೀಸರ ಜೊತೆ ಕಣ್ಣುಮುಚ್ಚಾಲೆ, ದಂಡ ಪಾವತಿ

ಬಹುತೇಕ ಆಟೋ ಚಾಲಕರು ನಿಯಮಾನುಸಾರ ಖಾಕಿ ಸಮವಸ್ತ್ರ ಧರಿಸುವುದಿಲ್ಲ. ತೊಟ್ಟಿರುವ ಶರ್ಟ್ ಮೇಲೆ ಕಾಟಾಚಾರಕ್ಕೆ ಖಾಕಿ ಶರ್ಟು ತೂಗಿ ಹಾಕಿಕೊಂಡಿರುತ್ತಾರೆ ಇಲ್ಲವೇ ಅದನ್ನು ಆಟೋದ ಮೂಲೆಯಲ್ಲೇ ಮುದ್ದೆ ಮಾಡಿ ಬಿಸಾಕಿರುತ್ತಾರೆ. ದೂರದ ವೃತ್ತದಲ್ಲಿ ಅಥವಾ ರಸ್ತೆ ತಿರುವಿನಲ್ಲಿ ಪೊಲೀಸ್ ಸಿಬ್ಬಂದಿ ನಿಂತಿದ್ದು ಕಂಡ ಕೂಡಲೇ, ಚಾಲಕರು ಕ್ಷಣಮಾತ್ರದಲ್ಲಿ ಖಾಕಿ ಶರ್ಟು ತೊಡುತ್ತಾರೆ. ಇನ್ನೂ ಕೆಲವರು ಮಾರ್ಗವನ್ನೇ ಬದಲಿಸಿ ಬಿಡುತ್ತಾರೆ.

ನಿಗದಿಗಿಂತ ಹೆಚ್ಚು ಸಂಖ್ಯೆಯ ಪ್ರಯಾಣಿಕರನ್ನು ಕರೆದೊಯ್ಯಬಾರದು ಎಂದು ಪೊಲೀಸರು ಹಲವು ಬಾರಿ ತಾಕೀತು ಮಾಡಿದ್ದಾರೆ. ಆದರೆ, ಇದು ಪೂರ್ಣಪ್ರಮಾಣದಲ್ಲಿ ಜಾರಿ ಬಂದಿಲ್ಲ. ಪೊಲೀಸರು ದೂರದಲ್ಲಿ ನಿಂತಿರುವ ಬಗ್ಗೆ ಸುಳಿವು ದೊರೆತ ಕೂಡಲೇ ಆಟೋ ಚಾಲಕರು ತಮ್ಮ ಅಕ್ಕಪಕ್ಕ ಕೂತ ಪ್ರಯಾಣಿಕರನ್ನು ಕೆಳಗಿಳಿಸಿ, ಸ್ವಲ್ಪ ದೂರ ನಡೆದುಕೊಂಡು ಬಂದು ಮುಂದೆ ಹತ್ತು ಎಂದು ವಿನಂತಿಸಿಕೊಳ್ಳುತ್ತಾರೆ. ಪೊಲೀಸರ ನಿಗಾವಣೆಯಿಂದ ಪಾರಾದ ಕೂಡಲೇ, ನಡೆದುಕೊಂಡು ಬರುತ್ತಿರುವ ಪ್ರಯಾಣಿಕರನ್ನು ಹತ್ತಿಸಿಕೊಂಡು ಪ್ರಯಾಣ ಮುಂದುವರೆಸುತ್ತಾರೆ.

ಇಷ್ಟೆಲ್ಲ ಮಧ್ಯೆಯೂ ಕೆಲ ಆಟೋ ಚಾಲಕರು ದಂಡ ಪಾವತಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ದಂಡ ಪಾವತಿಸಿಕೊಂಡ ಪೊಲೀಸರು ಮುಂದೆ ಇಂತಹ ತಪ್ಪು ಮಾಡದಂತೆ ಎಚ್ಚರಿಕೆಯೂ ನೀಡುತ್ತಾರೆ. ಕೊರೊನಾ ನಿಯಮಾವಳಿಗಳನ್ನು ಪಾಲಿಸುವಂತೆಯೂ ಅವರಿಗೆ ಹೇಳುತ್ತಾರೆ.

ಜಿಂದಗಿ ಕಾ ಸಫರ್ ಖತಂ ನಹಿ ಹೋತಿ...

ಹಿಂದಿ, ಉರ್ದು ಮಿಶ್ರಿತ ಕನ್ನಡ ಮಾತನಾಡುವ ಬಹುತೇಕ ಆಟೋ ಚಾಲಕರಿಗೆ ಒಳ್ಳೆಯ ಶಾಯರಿ, ಹಾಡುಗಳು ಬರುತ್ತವೆ. ಕೆಲವರು ಮಾತಿಮಾತಿನಲ್ಲೇ ಶಾಯರಿ ಹೇಳಿ ಚಕಿತಗೊಳಿಸಿದರೆ, ಇನ್ನೂ ಕೆಲವರು ಚಿತ್ರಗೀತೆಗಳನ್ನು ಹಾಡಿ ರಂಜಿಸುತ್ತಾರೆ. ಸಂಗೀತ ಪ್ರಿಯರಾದ ಕೆಲವರು ತಮ್ಮ ಆಟೋಗಳಲ್ಲಿ ಉತ್ತಮ ಸೌಂಡ್‌ ಸಿಸ್ಟಂ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಅವರು ಚಿತ್ರಗೀತೆಗಳನ್ನು ಹಾಕಿ, ಪ್ರಯಾಣಿಕರನ್ನು ಕೆಲ ಹೊತ್ತು ಮಟ್ಟಿಗಾದರೂ ಖುಷಿ ಪಡಿಸುತ್ತಾರೆ.

ಹೀಗೊಬ್ಬ ಶಾಯರಿ ಹೇಳುವ ಆಟೋ ಚಾಲಕ ಶೋಯಬ್‌ ವಯಸ್ಸು ಬಹುಶಃ 40 ದಾಟಿದೆ. ಸದಾ ಹಿಂದಿ ಚಿತ್ರಗೀತೆಗಳನ್ನು ಗುನುಗುನಿಸುವ ಒಮ್ಮೆ ಮಾತಿಗೆ ಸಿಕ್ಕಾಗ ಬದುಕಿನ ಕುರಿತು ಶಾಯರಿಗಳನ್ನು ಹೇಳಿ, ಖುಷಿಪಡಿಸಿದ್ದರು. ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಶೋಯಬ್ ಸೇರಿದಂತೆ ಬಹಳಷ್ಟು ಮಂದಿ ಸಂಕಷ್ಟಕ್ಕೆ ಸಿಲುಕಿದರು. ಆರ್ಥಿಕ ಮುಗ್ಗಟ್ಟು ಎದುರಿಸಿದರು.

ಕೊರೊನಾ ಲಾಕ್‌ಡೌನ್ ಅವಧಿಯಲ್ಲಿ ಜೀವನ ಹೇಗೆ ನಿಭಾಯಿಸಿದ್ದೀರಿ ಎಂದು ಕೇಳಿದಾಗ, ಶೋಯಬ್ ಹೇಳಿದ್ದು ಒಂದೇ ಮಾತು: ‘ಸಾಬ್, ಪರೆಶಾನಿಯಾ ಆತೆ–ಜಾತೆ ರಹತೆ ಹೈ. ಲೋಗ್ ಮಿಲ್ತೆ ಹೈ, ಬಿಚಡ್ ಜಾತೆ ಹೈ. ಜಿಂದಗಿ ಯಹಿ ಪೇ ಖತಂ ನಹೀ ಹೋತಿ. ಔರ್ ಭಿ ರಾಸ್ತೆ ಮಿಲೆಂಗೆ. ಮಂಜಿಲ್ ಪಹೂಂಚೆ ಬಿನಾ ಜಿಂದಗಿ ರುಖ್ತಿ ನಹಿ’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.