ಮನೋಜಕುಮಾರ್ ಗುದ್ದಿ
ಕಲಬುರಗಿ: ಸೂಕ್ತ ನಿರ್ವಹಣೆಯ ಕೊರತೆ, ಈಚೆಗೆ ಸುರಿದ ಭಾರಿ ಮಳೆಯ ಕಾರಣಕ್ಕೆ ನಗರದ ಪ್ರಮುಖ ರಸ್ತೆಗಳು ವಾಹನ ಸಂಚರಿಸಲು ಅಸಾಧ್ಯವೆನ್ನುವಷ್ಟು ಕೆಟ್ಟು ಹೋಗಿದ್ದು, ವಾಹನ ಸವಾರರು ಹಾಗೂ ಸಾರ್ವಜನಿಕರು ಮಹಾನಗರ ಪಾಲಿಕೆಯ ಕಾರ್ಯವೈಖರಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಆದರೆ, ಕಾಲಮಿತಿಯಲ್ಲಿ ರಸ್ತೆಗಳನ್ನು ದುರಸ್ತಿಗೊಳಿಸಬೇಕಿದ್ದ ಮಹಾನಗರ ಪಾಲಿಕೆ, ಲೋಕೋಪಯೋಗಿ ಇಲಾಖೆಗಳು ಇದಕ್ಕೂ ತಮಗೂ ಸಂಬಂಧವಿಲ್ಲದಂತೆ ವರ್ತಿಸುತ್ತಿದ್ದು, ಜನರು ನಿತ್ಯ ಜೀವ ಪಣಕ್ಕಿಟ್ಟು ವಾಹನಗಳನ್ನು ನಡೆಸಬೇಕಾಗಿದೆ. ನಿತ್ಯ ಲಕ್ಷಾಂತರ ಜನರು ಸಂಚರಿಸುವ ಬಸ್ ನಿಲ್ದಾಣ ಮುಂಭಾಗದ ಎಂಎಸ್‌ಕೆ ಮಿಲ್ ರಸ್ತೆ, ಬಸ್ ನಿಲ್ದಾಣದ ಕಡೆಯಿಂದ ಹೀರಾಪುರ ಕಡೆ ಹೋಗುವ ರಸ್ತೆ, ಹಳೇ ಜೇವರ್ಗಿ ರಸ್ತೆ ಹಾಗೂ ಕೋರಂಟಿ ಹನುಮಾನ್ ದೇವಸ್ಥಾನ, ನಾಗನಹಳ್ಳಿ ರಸ್ತೆಗಳು ವಿಪರೀತ ಹದಗೆಟ್ಟಿವೆ.
ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಗರಕ್ಕೆ ಭೇಟಿ ನೀಡಿದ್ದರಿಂದ ಅವರು ಸಂಚರಿಸುವ ಐವಾನ್ ಇ ಶಾಹಿ, ಗುಲಾಬವಾಡಿ, ಸರ್ದಾರ್ ಪಟೇಲ್ ವೃತ್ತದಿಂದ ಮಿನಿ ವಿಧಾನಸೌಧಕ್ಕೆ ತೆರಳುವ ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚಲಾಯಿತು. ಆದರೆ, ನಿತ್ಯ ಲಕ್ಷಾಂತರ ಜನರು ಸಂಚರಿಸುವ ಬಸ್ ನಿಲ್ದಾಣ ರಸ್ತೆ, ಹಳೇ ಜೇವರ್ಗಿ ರಸ್ತೆಗಳು ಹದಗೆಟ್ಟು ತಿಂಗಳಾದರೂ ಯಾರೂ ಸ್ಪಂದಿಸುತ್ತಿಲ್ಲ.
ಕೆಲ ತಿಂಗಳ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಬಸ್ ನಿಲ್ದಾಣದಿಂದ ಕಣ್ಣಿ ಮಾರ್ಕೆಟ್ ಕಡೆ ಹೋಗುವ ಮಾರ್ಗದಲ್ಲಿ ₹1 ಕೋಟಿ ವೆಚ್ಚದ ಸಿಮೆಂಟ್ ರಸ್ತೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ್ದರು. ಆದರೆ, ಇನ್ನೂ ಕಾಮಗಾರಿ ಶುರುವಾಗಿಲ್ಲ. ನಿತ್ಯ ಸಾವಿರಾರು ಬಸ್‌ಗಳು ಇದೇ ರಸ್ತೆಯಲ್ಲಿ ಸಂಚರಿಸುತ್ತವೆ. ಜೊತೆಗೆ ನೂರಾರು ಆಟೊಗಳು, ಕಾರುಗಳು, ದ್ವಿಚಕ್ರ ವಾಹನಗಳು ಗುಂಡಿಬಿದ್ದ ರಸ್ತೆಗಳಲ್ಲಿಯೇ ಸಾಗುತ್ತವೆ. ರಸ್ತೆ ಹದಗೆಟ್ಟಿದ್ದರಿಂದ ವಾಹನಗಳು ನಿಧಾನಗತಿಯಲ್ಲಿ ಸಂಚರಿಸುತ್ತವೆ. ಇದರಿಂದಾಗಿ ಒಂದರ ಹಿಂದೆ ಒಂದರಂತೆ ವಾಹನಗಳು ನಿಂತು ಕೆಲ ನಿಮಿಷಗಳವರೆಗೆ ಟ್ರಾಫಿಕ್ ಜಾಮ್ ಉಂಟಾಗುತ್ತದೆ. ಸಂಚಾರ ಪೊಲೀಸರು ಒಂದು ಕ್ಷಣ ಅಲ್ಲಿರದಿದ್ದರೆ ಆ ರಸ್ತೆಯಲ್ಲಿ ಸಂಚರಿಸುವುದು ಯಾತನಾದಾಯಕವಾಗುತ್ತದೆ.
ಹಳೇ ಜೇವರ್ಗಿ ರಸ್ತೆಯ ರೈಲ್ವೆ ಅಂಡರ್‌ಪಾಸ್‌ನಿಂದ ರಾಮಮಂದಿರಕ್ಕೆ ಹೋಗುವ ರಸ್ತೆ ಕೆಲ ತಿಂಗಳಿಂದ ತೀವ್ರವಾಗಿ ಹದಗೆಟ್ಟು ಹೋಗಿದ್ದು, ವಾಹನ ಸವಾರರಿಗೆ ದುಃಸ್ವಪ್ನವಾಗಿ ಕಾಡುತ್ತಿದೆ. ಈ ರಸ್ತೆಯ ಮೂಲಕ ಜೇವರ್ಗಿ, ಶಹಾಬಾದ್ ರಿಂಗ್ ರೋಡ್ ಕಡೆಗೆ ಜನರು ಪ್ರಯಾಣಿಸುತ್ತಾರೆ. ಒಂದು ಗುಂಡಿಯನ್ನು ತಪ್ಪಿಸುವಷ್ಟರಲ್ಲಿ ಮತ್ತೊಂದು ಗುಂಡಿ ಎದುರಾಗಿದ್ದರಿಂದ ಹಿಂದಿನಿಂದ ಬಂದ ವಾಹನಗಳು ಡಿಕ್ಕಿ ಹೊಡೆದ ಉದಾಹರಣೆಗಳೂ ಇವೆ. ಹಾಪ್‌ಕಾಮ್ಸ್ ಮಳಿಗೆ ಹಾಗೂ ಎಸ್‌ಕೆಜಿ ಮಳಿಗೆಯ ಎದುರಿಗೆ ಬೃಹತ್ ಹೊಂಡಗಳು ನಿರ್ಮಾಣವಾಗಿದ್ದರಿಂದ ವಾಹನಗಳಷ್ಟೇ ಅಲ್ಲದೇ ಕಾಲ್ನಡಿಗೆಯಲ್ಲಿ ಹೋಗುವವರಿಗೂ ತೊಂದರೆಯಾಗುತ್ತಿದೆ.
ಶಾಸಕರು, ಮೇಯರ್, ಸಂಬಂಧಪಟ್ಟ ಪಾಲಿಕೆ ಸದಸ್ಯರು, ಪಾಲಿಕೆ ಅಧಿಕಾರಿಗಳು ರಸ್ತೆ ದುರಸ್ತಿಗೆ ಗಮನ ಹರಿಸದಿದ್ದರೆ ಪ್ರಯಾಣಿಕರ ಜೀವಕ್ಕೆ ಎರವಾದರೂ ಅಚ್ಚರಿಯಿಲ್ಲ ಎನ್ನುತ್ತಾರೆ ನಿತ್ಯ ಇದೇ ರಸ್ತೆಯಲ್ಲಿ ಸಂಚರಿಸುವ ರೇಣುಕಾ ಹೆಳವರ.
ಈ ಕುರಿತು ಪ್ರತಿಕ್ರಿಯೆಗೆ ಮಹಾನಗರ ಪಾಲಿಕೆ ಆಯುಕ್ತ ಅವಿನಾಶ್ ಶಿಂಧೆ ಅವರನ್ನು ಸಂಪರ್ಕಿಸಲು ಯತ್ನಿಸಲಾಯಿತು. ಅವರು ಕರೆ ಸ್ವೀಕರಿಸಲಿಲ್ಲ.
ಹಳೇ ಜೇವರ್ಗಿ ರಸ್ತೆಯಲ್ಲಿ ಸಣ್ಣ ಕೈಗಾರಿಕಾ ಸಚಿವರು ಮಾಜಿ ಸಚಿವರು ಹಲವು ಉನ್ನತ ಅಧಿಕಾರಿಗಳ ಮನೆಗಳಿದ್ದರೂ ರಸ್ತೆ ದುರಸ್ತಿಗೆ ಗಮನ ಹರಿಸಿಲ್ಲ. ಈ ರಸ್ತೆ ವಿನ್ಯಾಸ ಮಾಡಿದ ಎಂಜಿನಿಯರ್‌ಗೆ ಬಹುಮಾನ ಕೊಡಲೇಬೇಕು!ಗೀತಾ ನಂದಿಹಳ್ಳಿ ಸದಾಶಿವ ನಗರ ನಿವಾಸಿ ಹಳೇ ಜೇವರ್ಗಿ ರಸ್ತೆ
ಕಲಬುರಗಿಯ ಮೋಹನ್ ಲಾಡ್ಜ್‌ನಿಂದ ರಾಮಮಂದಿರಕ್ಕೆ ಸಂಪರ್ಕ ಕಲ್ಪಿಸುವ ಹಳೇ ಜೇವರ್ಗಿ ರಸ್ತೆಯಲ್ಲಿ ಗುಂಡಿಗಳು ಬಿದ್ದಿರುವುದರಿಂದ ಸಂಚಾರ ಕಠಿಣವೆನಿಸಿದೆ. ದುರಸ್ತಿ ಮಾಡದಿದ್ದರೆ ರಸ್ತೆಯಲ್ಲೇ ಸಸಿ ನೆಟ್ಟು ಪ್ರತಿಭಟನೆ ನಡೆಸಲಾಗುವುದು.ಮಹೇಶ ಎಸ್.ಬಿ. ನವಜೀವನ ನಗರ ನಿವಾಸಿ ಹಳೇ ಜೇವರ್ಗಿ ರಸ್ತೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.