ADVERTISEMENT

ಕಲಬುರಗಿ | ನಾಲ್ಕು ತಾಸು ಕಾರಾಗೃಹ ತಪಾಸಣೆ

​ಪ್ರಜಾವಾಣಿ ವಾರ್ತೆ
Published 4 ಜನವರಿ 2026, 7:50 IST
Last Updated 4 ಜನವರಿ 2026, 7:50 IST
ಕಲಬುರಗಿಯ ಕೇಂದ್ರ ಕಾರಾಗೃಹಕ್ಕೆ ಶನಿವಾರ ಕಾರಾಗೃಹ ಇಲಾಖೆಯ ಡಿಜಿಪಿ ಅಲೋಕ್ ಕುಮಾರ್ ಭೇಟಿ ನೀಡಿದರು. ಉತ್ತರ ವಲಯ ಡಿಐಜಿ ಪಿ.ಶೇಷ, ಎಸಿಪಿ ಬಸವೇಶ್ವರ ಹೀರಾ, ಫರಹತಾಬಾದ್ ಠಾಣೆ ಪಿಐ ಹಸನ್ ಬಾಷಾ ಸೇರಿದಂತೆ ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು
ಪ್ರಜಾವಾಣಿ ಚಿತ್ರ
ಕಲಬುರಗಿಯ ಕೇಂದ್ರ ಕಾರಾಗೃಹಕ್ಕೆ ಶನಿವಾರ ಕಾರಾಗೃಹ ಇಲಾಖೆಯ ಡಿಜಿಪಿ ಅಲೋಕ್ ಕುಮಾರ್ ಭೇಟಿ ನೀಡಿದರು. ಉತ್ತರ ವಲಯ ಡಿಐಜಿ ಪಿ.ಶೇಷ, ಎಸಿಪಿ ಬಸವೇಶ್ವರ ಹೀರಾ, ಫರಹತಾಬಾದ್ ಠಾಣೆ ಪಿಐ ಹಸನ್ ಬಾಷಾ ಸೇರಿದಂತೆ ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು ಪ್ರಜಾವಾಣಿ ಚಿತ್ರ   

ಕಲಬುರಗಿ: ಕೆಲ ದಿನಗಳ ಹಿಂದೆ ‌ನಗರದ ಹೊರವಲಯದ ಕೇಂದ್ರ ಕಾರಾಗೃಹದಲ್ಲಿ ನಡೆದ ಕೈದಿಗಳ ಮೋಜು, ಮಸ್ತಿ ವಿಡಿಯೊ ಜಾಲತಾಣದಲ್ಲಿ ಹರಿದಾಡಿದ ಹಿನ್ನೆಲೆಯಲ್ಲಿ ಕಾರಾಗೃಹ ಮತ್ತು ಸುಧಾರಣಾ ‌ಸೇವೆಗಳ ಡಿಜಿಪಿ ಅಲೋಕ್ ಕುಮಾರ್ ಅವರು ಶನಿವಾರ ಸುಮಾರು ನಾಲ್ಕು ಗಂಟೆ ತಪಾಸಣೆ ನಡೆಸಿದರು.

ಕೈದಿಗಳ ವಿಚಾರಣೆ ಹಾಗೂ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಹೊರಭಾಗದ ಕಾರಾಗೃಹವನ್ನು ಸುತ್ತು ಹಾಕಿ ಪರಿಶೀಲಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ಐಷಾರಾಮಿ ಜೀವನದ ವಿಡಿಯೊಗಳ ಕುರಿತು ತನಿಖೆ ನಡೆಯುತ್ತಿದ್ದು, ತನಿಖಾಧಿಕಾರಿ ಕಾರಾಗೃಹದ ಹೆಚ್ಚುವರಿ ಮಹಾನಿರೀಕ್ಷಕ ಆನಂದ ರೆಡ್ಡಿ ನೀಡುವ ವರದಿ ಮೇಲೆ ಕಠಿಣ ಕ್ರಮಕ್ಕಾಗಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು’ ಎಂದರು.

ADVERTISEMENT

‘ಜೈಲಿನಲ್ಲಿ ನಡೆಯುವ ಎಲ್ಲ ರೀತಿಯ ಅಕ್ರಮ ಚಟುವಟಿಕೆ ಹಾಗೂ ಕೈದಿಗಳ ಗಲಾಟೆ ಸೇರಿ ಎಲ್ಲ ರೀತಿಯಲ್ಲೂ ತನಿಖೆ ಕೈಗೊಳ್ಳುವಂತೆ ಸೂಚಿಸಲಾಗಿದೆ. ತನಿಖಾಧಿಕಾರಿಗೆ 20ರ ವರೆಗೆ ಸಮಯ ನೀಡಲಾಗಿದೆ. ಯಾರೇ ತಪ್ಪು ಮಾಡಿದ್ದರೂ ಶಿಕ್ಷೆ ಖಚಿತ’ ಎಂದು ಸ್ಪಷ್ಟಪಡಿಸಿದರು.

‘ಉದ್ದೇಶಪೂರ್ವಕವಾಗಿ ವಿಡಿಯೊಗಳನ್ನು ತಮಗೆ ಬೇಕಾದಂತೆ ಹರಿಬಿಡಲಾಗುತ್ತಿದೆ ಎಂಬ ಮಾತುಗಳು ಕೂಡ ಕೇಳಿ ಬಂದಿವೆ. ಈ ಆಯಾಮದಲ್ಲಿಯೂ ತನಿಖೆ ನಡೆಸುವಂತೆ ಸೂಚನೆ ನೀಡಲಾಗಿದೆ. ಹಳೆಯ ವಿಡಿಯೊಗಳು ಇದೀಗ ಹೊರ ಬಂದಿವೆ. ಇದಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದರು.

ಪಿಎಸ್‌ಐ ನೇಮಕಾತಿ ಅಕ್ರಮದ ಆರೋಪಿ ಆರ್.ಡಿ.ಪಾಟೀಲ ಸ್ಥಳಾಂತರಕ್ಕೆ ಪತ್ರ ಬರೆದ ನಂತರ ವಿಡಿಯೊ ಹೊರ ಬರುತ್ತಿರುವ ಕುರಿತ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಲೋಕ್ ಕುಮಾರ್, ‘ಈ ನಿಟ್ಟಿನಲ್ಲಿಯೂ ಕೂಡ ಕೂಲಂಕಷವಾಗಿ ಪರಿಶೀಲನೆ ನಡೆಸಲಾಗುವುದು. ಜೈಲಿನಲ್ಲಿ ಹೊರಗಿನವರ ಕೈವಾಡ ಇದೆ ಎಂಬ ದೂರುಗಳು ಬಂದಿವೆ. ಈ ಕುರಿತು ಸಾಕ್ಷಿಗಳಿದ್ದರೆ ತನಿಖಾಧಿಕಾರಿ ಹೆಚ್ಚುವರಿ ಮಹಾನಿರೀಕ್ಷಕ ಆನಂದ ರೆಡ್ಡಿ ಅವರಿಗೆ ನೀಡಬೇಕು. ಕಾರಾಗೃಹದಲ್ಲಿನಿ ಸಿಸಿ ಟಿವಿ ಕೂಡ ಪರಿಶೀಲಿಸಲಾಗುವುದು’ ಎಂದು ಹೇಳಿದರು.

'ಏಳು ವರ್ಷಕ್ಕಿಂತ ಜಾಸ್ತಿ ಶಿಕ್ಷೆ ಅನುಭವಿಸಿದ ಕೈದಿಗಳನ್ನು ಮುಕ್ತ ಬ್ಯಾರಕ್ ಬದಲು ಹೊರಭಾಗದಲ್ಲಿ ಇಡುತ್ತೇವೆ. ಅಂತಹ ಕೈದಿಗಳು ಹೊರಗಡೆ ಬಂದು ಕೆಲಸ ಮಾಡಿ ಹೋಗುತ್ತಾರೆ. ಅವರಿಗೆ ಹೊರಗಡೆ ಓಡಾಡುವುದಕ್ಕೆ, ಕೆಲಸ ಮಾಡುವುದಕ್ಕೆ ಅವಕಾಶ ಇದೆ' ಎಂದರು.

ಜೈಲಿನಲ್ಲಿ ಶೇ 40ರಷ್ಟು ಸಿಬ್ಬಂದಿ ಕಡಿಮೆ ಇರುವ ಕಾರಣ ಸಾಕಷ್ಟು ಸಮಸ್ಯೆ ಆಗುತ್ತಿದೆ. ಸದ್ಯ ಎಲ್ಲರ ಸಹಕಾರದಿಂದ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಪ್ರಯತ್ನ ಮಾಡಬೇಕು ಎಂದು ಹೇಳಿದರು.

ಉತ್ತರ ವಲಯ ಡಿಐಜಿ ಪಿ.ಶೇಷ, ನಗರ ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ., ಎಸಿಪಿ ಬಸವೇಶ್ವರ ಹೀರಾ, ಜೈಲು ಅಧೀಕ್ಷಕಿ ಡಾ.ಅನಿತಾ, ಫರತಾಬಾದ್ ಠಾಣೆ ಪಿಐ ಹಸೇನ್ ಬಾಷಾ, ಸಂಚಾರ ಠಾಣೆ ಪಿಐ ಶಕೀಲ್ ಅಂಗಡಿ ಸೇರಿದಂತೆ ಕಾರಾಗೃಹ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ನಾನು ಇಲ್ಲಿ ತನಿಖಾಧಿಕಾರಿಯಾಗಿ ಬಂದಿಲ್ಲ. ಕಾರಾಗೃಹದ ಮುಖ್ಯಸ್ಥನಾಗಿ ಕಾರಾಗೃಹದ ವ್ಯವಸ್ಥೆ ಆಲಿಸಲು ಬಂದಿದ್ದೇನೆ. ಅಧಿಕಾರಿಗಳ ಕುಮ್ಮಕ್ಕಿನಿಂದ ಈ ವಿಡಿಯೊ ಬಿಡುಗಡೆಯಾಗಿದ್ದಲ್ಲಿ ನಿರ್ದಾಕ್ಷಿಣ್ಯ ಕ್ರಮವಾಗಲಿದೆ
ಅಲೋಕ್ ಕುಮಾರ್ ಕಾರಾಗೃಹ ಇಲಾಖೆ ಡಿಜಿಪಿ