ಪ್ರಾತಿನಿಧಿಕ ಚಿತ್ರ
ಕಲಬುರಗಿ: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿ, ದೊಡ್ಡ ಪ್ರಮಾಣದ ಲಾಭ ಗಳಿಸಬಹುದು ಎಂಬುದಾಗಿ ಪ್ರೇರೇಪಿಸಿದ ಸೈಬರ್ ವಂಚಕರು, ಬ್ಯಾಂಕ್ ಅಧಿಕಾರಿಯೊಬ್ಬರಿಗೆ ₹11 ಲಕ್ಷ ವಂಚಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಲ್ಲಿನ ದತ್ತ ನಗರದ ನಿವಾಸಿ, ಪಿಎನ್‌ಬಿ ಬ್ಯಾಂಕ್ ಅಸಿಸ್ಟಂಟ್ ಮ್ಯಾನೇಜರ್ ರಾಮಾಂಜನಯ್ಯ ವೆಂಕೋಬಾ ಹಣ ಕಳೆದುಕೊಂಡವರು.
‘ಜಿತೇಂದ್ರ ಬಹಾದ್ದೂರ ಹಾಗೂ ಸಾಯಿ ಮರಾಠ ಹಾಗೂ ಇತರರು ಸೇರಿಕೊಂಡು ‘ಇನ್ವೆಸ್ಟ್ ಸ್ಟ್ಯಾಟರ್ಜಿಸ್ 22’ ಹೆಸರಿನ ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಷೇರು ಪೇಟೆಯಲ್ಲಿ ಹಣ ಹೂಡಿಕೆ ಮಾಡಿ ಹೆಚ್ಚಿನ ಹಣ ಗಳಿಸುವಂಥ ಮೆಸೇಜ್‌ಗಳು, ಸ್ಕ್ರೀನ್‌ಶಾಟ್‌ಗಳನ್ನು ಗ್ರೂಪಿನಲ್ಲಿ ಹಾಕಿ ಹಣ ಹೂಡಿಕೆಗೆ ಪ್ರೇರೇಪಿಸಿದ್ದಾರೆ. ಮೋಸ, ವಂಚನೆ ಮತ್ತು ನಂಬಿಕೆ ದ್ರೋಹ ಮಾಡುವ ಉದ್ದೇಶದಿಂದ ‘ಸಿಎಚ್‌ಸಿಪಿ ಎಸ್‌ಇಐ’ ಎಂಬ ನಕಲಿ ಟ್ರೇಡಿಂಗ್ ಅಪ್ಲಿಕೇಷನ್‌ನಲ್ಲಿ ಖಾತೆ ತೆರೆದು ಹಂತ ಹಂತವಾಗಿ ಒಟ್ಟು ₹11 ಲಕ್ಷ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾರೆ. ಭರವಸೆ ನೀಡಿದಂತೆ ನಾನು ಹೂಡಿಕೆ ಮಾಡಿದ ಹಣವನ್ನಾಗಲಿ, ಅದರ ಲಾಭದ ಹಣವನ್ನಾಗಲಿ ಮರಳಿಸಿಲ್ಲ. ಸಂಪರ್ಕಕಕ್ಕೂ ಸಿಗದೇ ಆನ್‌ಲೈನ್ ಮೂಲಕ ವಂಚನೆ ಮಾಡಿದ್ದಾರೆ’ ಎಂದು ದೂರಿನಲ್ಲಿ ರಾಮಾಂಜನಯ್ಯ ತಿಳಿಸಿದ್ದಾರೆ.
ಈ ಕುರಿತು ಸಿಇಎನ್ ಪೊಲೀಸ್ ಠಾಣೆಯಲ್ಲಿ ಇಬ್ಬರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ನಗರದ ನಾಗನಹಳ್ಳಿ ಕ್ರಾಸ್ ಸಮೀಪದ ಸರ್ವೀಸ್ ರಸ್ತೆಯಲ್ಲಿ ಬೃಂದಾವನ ಅಪಾರ್ಟ್‌ಮೆಂಟ್ ಹತ್ತಿರ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ದಾಳಿ ನಡೆಸಿದ ಪೊಲೀಸರು ಐವರ ವಿರುದ್ಧ ಕ್ರಮಕೈಗೊಂಡಿದ್ದಾರೆ.
ದಾಳಿ ವೇಳೆ ಜೂಜಾಟದ ಪಣಕ್ಕೆ ಇಟ್ಟಿದ್ದ ₹2,820 ಸೇರಿದಂತೆ ಒಟ್ಟು 13,220 ವಶಕ್ಕೆ ಪಡೆದಿದ್ದಾರೆ.
ಈ ಸಂಬಂಧ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.