
ಕಲಬುರಗಿ: ಹೆಚ್ಚಿನ ಹಣ ಗಳಿಕೆಯ ಆಮಿಷವೊಡ್ಡಿ ನಕಲಿ ಟ್ರೇಡಿಂಗ್ ಆ್ಯಪ್‌ನಲ್ಲಿ ಹೂಡಿಕೆಗೆ ಪ್ರಚೋದಿಸಿದ ಸೈಬರ್ ವಂಚಕರು ನಗರದ ಕೆಎಸ್‌ಐಎಸ್‌ಎಫ್‌ನ ಹೆಡ್‌ಕಾನ್‌ಸ್ಟೆಬಲ್‌ಗೆ ₹ 80.40 ಲಕ್ಷ ವಂಚಿಸಿದ್ದಾರೆ.
ನಗರದ ಅಕ್ಕಮಹಾದೇವಿ ಕಾಲೊನಿಯ ನಿವಾಸಿ ಮಹೇಶ ಸಜ್ಜನ ವಂಚನೆಗೊಳಗಾದವರು.
‘ಆರು ತಿಂಗಳ ಹಿಂದೆ ಗ್ರೋ ಆ್ಯಪ್‌ನ ಸ್ಟಾಕ್ ಮಾರ್ಕೆಟ್‌ನಲ್ಲಿ ಹಣ ಹೂಡಿಕೆ ಮಾಡಿ ವಹಿವಾಟು ನಡೆಸಿದ್ದೆ. 2025ರ ನ.21ರಂದು ಬೆಳಿಗ್ಗೆ ನನ್ನ ಮೊಬೈಲ್ ಸಂಖ್ಯೆ ‘ಸ್ಟಾಕ್ ಮಾರ್ಕೆಟ್ ಥಿಂಕ್ ಟ್ಯಾಂಕ್’ ವಾಟ್ಸ್‌ಆ್ಯಪ್ ಗ್ರೂಪ್‌ಗೆ ಸೇರಿಸಲಾಯಿತು. ಬಳಿಕ ಅದರಲ್ಲಿ ಹೆಚ್ಚೆಚ್ಚು ಹೂಡಿಕೆ ಮಾಡಿ ಅಧಿಕ ಲಾಭ ಗಳಿಸುವ ಕುರಿತು ಆಸೆ ಹುಟ್ಟಿಸಿದರು. ನಾನೂ ಹೂಡಿಕೆ ಬಗೆಗೆ ಮಾಹಿತಿ ಪಡೆದೆ. ಅದರಂತೆ ಹೂಡಿಕೆಗೆ ಖಾತೆ ತೆರೆಯಲು ತಿಳಿಸಿದರು. ನಾನು ಖಾತೆ ತೆರೆದು 2025ರ ಡಿಸೆಂಬರ್ 16ರಿಂದ 2026ರ ಜನವರಿ 16ರ ತನಕ ಹಂತ ಹಂತವಾಗಿ ನನ್ನ ಎರಡು ಬ್ಯಾಂಕ್ ಖಾತೆಗಳಿಂದ ಕ್ರಮವಾಗಿ ₹ 34.05 ಲಕ್ಷ ಹಾಗೂ ₹ 27.35 ಲಕ್ಷ, ಸ್ನೇಹಿತನ ಖಾತೆಯಿಂದ ₹ 19 ಲಕ್ಷ ಸೇರಿದಂತೆ ಒಟ್ಟು ₹ 80.40 ಲಕ್ಷ ಆರ್‌ಟಿಜಿಎಸ್ ಹಾಗೂ ಐಎಂಪಿಎಸ್ ಮೂಲಕ ಹೂಡಿಕೆ ಮಾಡಿದ್ದೆ.ಹೂಡಿಕೆ ಮಾಡಿದೆ’ ಎಂದು ದೂರಿನ ಮಹೇಶ ತಿಳಿಸಿದ್ದಾರೆ.
‘ನನ್ನ ಟ್ರೇಡಿಂಗ್ ಖಾತೆಯಲ್ಲಿ ₹ 6 ಕೋಟಿಗೂ ಅಧಿಕ ಲಾಭವಾದ ಬಗೆಗೆ ತೋರಿಸುತ್ತಿತ್ತು. ಅದರಲ್ಲಿ ಹಣವನ್ನು ವಿಥ್‌ಡ್ರಾ ಮಾಡಲು ಯತ್ನಿಸಿದಾಗ ₹ 96 ಲಕ್ಷ ತೆರಿಗೆ ಹಣ ಪಾವತಿಸಬೇಕು ಎಂದು ಹೇಳಲಾಗಿತು. ಈ ಬಗೆಗೆ ಅನುಮಾನ ಮೂಡಿದ್ದರಿಂದ ಸ್ನೇಹಿತ ಹಾಗೂ ಸಹೋದರನನ್ನು ವಿಚಾರಿಸಿದೆ. ಆಗ ವಂಚನೆಗೊಳಗಾಗಿರುವುದು ತಿಳಿಯಿತು’ ಎಂದು ಮಹೇಶ ವಿವರಿಸಿದ್ದಾರೆ.
ಈ ಕುರಿತು ಕಲಬುರಗಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟ್ರ್ಯಾಕ್ಟರ್‌ನಿಂದ ಬಿದ್ದು ವ್ಯಕ್ತಿ ಸಾವು
ಕಲಬುರಗಿಯ ಸೆಂಟ್ರಲ್ ಜೈಲಿನ ಸಮೀಪ ರಸ್ತೆ ಹಂಪ್‌ನಲ್ಲಿ ಟ್ರ್ಯಾಕ್ಟರ್‌ನಿಂದ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.
ನಗರದ ರೋಜಾ (ಕೆ) ಪ್ರದೇಶದ ರಾಮಜಿ ನಗರದ ನಿವಾಸಿ, ಗೌಂಡಿ ರಾಹುಲ ಕುಂಟೆ (32) ಮೃತರು.
ತಾಲ್ಲೂಕಿನ ತಾಡತೆಗನೂರ ಗ್ರಾಮದಲ್ಲಿ ಮನೆಯೊಂದರ ಛತ್ತಿನ ಕಾಂಕ್ರೀಟ್ ಕೆಲಸ ಮುಗಿಸಿ ಟ್ರ್ಯಾಕ್ಟರ್‌ನಲ್ಲಿ ಕಾರ್ಮಿಕರು ಕಲಬುರಗಿಯತ್ತ ಬರುತ್ತಿದ್ದರು. ಈ ವೇಳೆ ಜೈಲು ಸಮೀಪದಲ್ಲಿ ರಸ್ತೆ ಹಂಪ್ಸ್‌ನಲ್ಲಿ ಟ್ರ್ಯಾಕ್ಟರ್ ಜೋರಾಗಿ ಓಡಿಸಿದ್ದರಿಂದ ರಾಹುಲ ಕುಂಟೆ ಅವರು ಆಯತಪ್ಪಿ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಕುರಿತು ಕಲಬುರಗಿ ಸಂಚಾರ ಪೊಲೀಸ್ ಠಾಣೆ–1ರಲ್ಲಿ ಪ್ರಕರಣ ದಾಖಲಾಗಿದೆ.
ಚಿನ್ನಾಭರಣ ಕಳವು
ಕಲಬುರಗಿಯ ಮಿಸ್ಬಾ ನಗರದ ಮನೆಯೊಂದರ ಕೀಲಿ ಮುರಿದ ಕಳ್ಳರು ಮನೆಯಲ್ಲಿದ್ದ ಒಟ್ಟು 25 ಗ್ರಾಂ ಚಿನ್ನಾಭರಣ, ಎರಡು ಟೈಟನ್ ವಾಚ್‌ಗಳು, ಎರಡು ಮೊಬೈಲ್ ಫೋನ್‌ಗಳನ್ನು ಕದ್ದು ಪರಾರಿಯಾಗಿದ್ದಾರೆ.
ಈ ಕುರಿತು ವಿದ್ಯಾರ್ಥಿ ತೋಹಿದ್ ಪಟೇಲ್ ನೀಡಿದ ದೂರಿನನ್ವಯ ಕಲಬುರಗಿ ಸಬರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿಸಿರೊಟ್ಟಿ ಸಿಗದ ಬೇಸರ; ಕುಡಿದ ಮತ್ತಿನಲ್ಲಿ ಆತ್ಮಹತ್ಯೆ
ಕಲಬುರಗಿ: ಕೆಲಸ ಮುಗಿಸಿ ಮದ್ಯಪಾನ ಮಾಡಿದ ಮನೆಗೆ ಬಂದ ವ್ಯಕ್ತಿಯೊಬ್ಬರು ಊಟಕ್ಕೆ ಬಿಸಿರೊಟ್ಟಿ ಕೊಡಲಿಲ್ಲ ಎಂಬ ಕಾರಣಕ್ಕೆ ನೇಣುಹಾಕಿಕೊಂಡು ಮೃತಪಟ್ಟಿದ್ದಾರೆ.
ಕಲಬುರಗಿಯ ರಿಂಗ್ ರಸ್ತೆಯಲ್ಲಿರುವ ಹೀರಾನಗರದ ನಿವಾಸಿ ಗೌಸ್ ಶೇಖ ಮೃತರು.
‘ಗೌಸ್‌ಗೆ ಕುಡಿತದ ಚಟವಿತ್ತು. ಜನವರಿ 23ರಂದು ರಾತ್ರಿ 8.30ರ ಹೊತ್ತಿಗೆ ಎಂದಿನಂತೆ ಕೆಲಸ ಮುಗಿಸಿ ಕುಡಿತು ಮನೆಗೆ ಬಂದ. ಆತನ ಪತ್ನಿ ಅನಾರೋಗ್ಯದ ಚಿಕಿತ್ಸೆಗಾಗಿ ಸೊಲ್ಲಾಪುರಕ್ಕೆ ಹೋಗಿದ್ದಳು. ಮನೆಗೆ ಬಂದು ಗೌಸ್ ‘ನಾನು ಊಟ ಮಾಡುವೆ ಬಿಸಿರೊಟ್ಟಿ ಇದ್ದರೆ ಕೊಡಿ’ ಎಂದ. ನಾನು, ‘ಬಿಸಿರೊಟ್ಟಿ ಇಲ್ಲ, ಖಡಕ್ ರೊಟ್ಟಿ ಇದೆ, ಉಣ್ಣಪ್ಪ’ ಎಂದೆ. ಆತ ಸಿಟ್ಟಿನಲ್ಲಿ ‘ನೀವೆಲ್ಲ ಯಾವಾಗಲೂ ಹೀಗೇ ಮಾಡ್ತಿರಿ. ಬಿಸಿರೊಟ್ಟಿ ಕೇಳಿದರೆ ಇಲ್ಲ ಎನ್ತಿರಿ. ನೀವು ಉಣ್ಣಿ. ನಾನು ಹೊರಗಿನಿಂದ ಊಟ ಪಾರ್ಸೆಲ್ ತರಿಸಿಕೊಳ್ಳುತ್ತೇನೆ’ ಎಂದು ರೂಮ್ ಸೇರಿದ. ಬೆಳಿಗ್ಗೆ 5 ಗಂಟೆಗೆ ಆತನನ್ನು ಎಬ್ಬಿಸಿದಾಗ ಬಾಗಿಲು ತೆರೆಯಲಿಲ್ಲ. ಅಕ್ಕಪಕ್ಕದವರನ್ನು ಕರೆಯಿಸಿ ಬಾಗಿಲು ಒಡೆದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿದ್ದು ತಿಳಿಯಿತು’ ಎಂದು ಗೌಸ್ ಅವರ ತಾಯಿ ಬುರಾನಬಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಕುರಿತು ಅಶೋಕನಗರ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.