ADVERTISEMENT

ಕಲಬುರಗಿ | ಹಿಂದೂ–ಮುಸ್ಲಿಮರು ಸೌಹಾರ್ದದಿಂದ ಹಬ್ಬ ಆಚರಿಸಿ: ಜಿಲ್ಲಾಧಿಕಾರಿ ಫೌಜಿಯಾ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2025, 5:51 IST
Last Updated 21 ಆಗಸ್ಟ್ 2025, 5:51 IST
ಕಲಬುರಗಿಯಲ್ಲಿ ನಡೆದ ಗಣೇಶ ಚತುರ್ಥಿ ಹಾಗೂ ಈದ್‌ ಮಿಲಾದ್ ಶಾಂತಿ ಸಭೆಯಲ್ಲಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್‌ ಮಾತನಾಡಿದರು
ಕಲಬುರಗಿಯಲ್ಲಿ ನಡೆದ ಗಣೇಶ ಚತುರ್ಥಿ ಹಾಗೂ ಈದ್‌ ಮಿಲಾದ್ ಶಾಂತಿ ಸಭೆಯಲ್ಲಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್‌ ಮಾತನಾಡಿದರು   

ಕಲಬುರಗಿ: ‘ಸೂಫಿ–ಸಂತರ ನಾಡು ಕಲಬುರಗಿ ಶಾಂತಿ–ಸೌಹಾರ್ದಕ್ಕೆ ಹೆಸರಾಗಿದ್ದು, ಗಣೇಶ ಚತುರ್ಥಿ ಮತ್ತು ಈದ್ ಮಿಲಾದ್‌ ಒಟ್ಟಾಗಿಯೇ ಬಂದಿರುವುದರಿಂದ ಎರಡೂ ಧರ್ಮೀಯರು ಸೌಹಾರ್ದಯುತವಾಗಿ ಹಬ್ಬ ಆಚರಿಸಬೇಕು’ ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಕರೆ ನೀಡಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಪಿಒಪಿ ಗಣಪ ಬಳಸದೇ ಪರಿಸರ ಸ್ನೇಹಿ ಮಣ್ಣಿನ ಗಣಪತಿಯನ್ನು ಪ್ರತಿಷ್ಠಾಪಿಸುವ ಮೂಲಕ ಪರಿಸರ ಕಾಳಜಿ ಮೆರೆಯಬೇಕು. ತಾಲ್ಲೂಕುಮಟ್ಟದಲ್ಲಿಯೂ ಮೂರು ದಿನಗಳ ಮುಂಚಿತವಾಗಿಯೇ ಇದೇ ರೀತಿಯ ಶಾಂತಿ ಸಭೆ ನಡೆಸಿ ಸಂಘ–ಸಂಸ್ಥೆಗಳಿಗೆ ಅಗತ್ಯ ಮಾಹಿತಿ ನೀಡಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ADVERTISEMENT

‘ಗಣೇಶ ಪ್ರತಿಷ್ಠಾಪನೆಗೆ ವಿವಿಧ ಇಲಾಖೆಗಳ ಪರವಾನಗಿ ಪಡೆಯಲು ಓಡಾಟ ತಪ್ಪಿಸಲು ಪಟ್ಟಣ ಪ್ರದೇಶದಲ್ಲಿ ಏಕಗವಾಕ್ಷಿ ಪದ್ಧತಿಯಡಿ ಪರವಾನಗಿ ನೀಡಲಾಗುವುದು. ಡಿ.ಜೆ.ಗೆ ನಿಷೇಧ ಇರುವುದರಿಂದ ಸರ್ಕಾರ ಮತ್ತು ನ್ಯಾಯಾಲಯದ ಆದೇಶದಂತೆ ದೊಡ್ಡ ಶಬ್ದಹೊಮ್ಮಿಸುವ ಧ್ವನಿವರ್ಧಕ ಬಳಸಬಾರದು’ ಎಂದರು.

‘ಕಲಬುರಗಿ ನಗರ ಮತ್ತು ಜಿಲ್ಲೆಯಾದ್ಯಂತ ಗಣಪನನ್ನು ವಿಸರ್ಜಿಸುವ ಸ್ಥಳವನ್ನು ಮೊದಲೇ ಸಾರ್ವಜನಿಕರಿಗೆ ತಿಳಿಸಬೇಕು. ಗಣಪತಿ ಪೆಂಡಾಲ್ ಸುತ್ತಲೂ ಸ್ವಚ್ಛತೆ ಕಾಪಾಡಬೇಕು. ಮೆರವಣಿಗೆಯುದ್ದಕ್ಕೂ ವಿದ್ಯುತ್ ಅಡೆತಡೆಯಾಗದಂತೆ ಎಚ್ಚರ ವಹಿಸಬೇಕು. ಕಾನೂನು ಸುವ್ಯವಸ್ಥೆ ಕಾಪಾಡಲು ಸೂಕ್ತ ಪೊಲೀಸ್ ಬಂದೋಬಸ್ತ್ ನಿಯೋಜಿಸಬೇಕು’ ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.

ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂದೆ ಮಾತನಾಡಿ, ‘ಕಲಬುರಗಿ ನಗರ ವ್ಯಾಪ್ತಿಯಲ್ಲಿ ಗಣೇಶ ವಿಸರ್ಜನೆಗೆ ಗುರುತಿಸಲಾದ ಸ್ಥಳದಲ್ಲಿ ಕ್ರೇನ್ ಸೌಲಭ್ಯ ಒದಗಿಸಲಾಗುವುದು. ಮೆರವಣಿಗೆ ಸರಾಗವಾಗಿ ಹೋಗಲು ರಸ್ತೆ ಗುಂಡಿ ಮುಚ್ಚಲಾಗುವುದು. ಬೀದಿ ದೀಪ ಸರಿಪಡಿಸಲಾಗುವುದು. ಪ್ರತಿ ಪೆಂಡಾಲ್ ಬಳಿ ಕಸ ಸಂಗ್ರಹಿಸಿ ಒಂದೆಡೆ ಇಟ್ಟರೆ, ಸ್ವಚ್ಛತಾ ಕಾರ್ಮಿಕರು ಪ್ರತಿ ದಿನ ಬಂದು ತೆಗೆದುಕೊಂಡು ಹೋಗಲಿದ್ದಾರೆ’ ಎಂದರು.

ಶಾಂತಿ ಸಮಿತಿ ಸದಸ್ಯ ಬಾಬುರಾವ ಜಹಾಗಿರದಾರ್ ಮಾತನಾಡಿ, ‘ಆಗಸ್ಟ್ 27ರಂದು ಗಣಪನ ಪ್ರತಿಷ್ಠಾಪನೆ ನಡೆಯಲಿದೆ. ಬಳಿಕ ಐದು ದಿನ, ಒಂಬತ್ತು ದಿನ ಹಾಗೂ ಕೊನೆಯದಾಗಿ 11 ದಿನ ಅಂದರೆ ಸೆಪ್ಟೆಂಬರ್ 6ಕ್ಕೆ ಅನಂತ ಚತುರ್ಥಿ ದಿನದಂದು ಮೂರ್ತಿಗಳ ವಿಸರ್ಜನೆ ನಡೆಯಲಿದೆ. ಮೆರವಣಿಗೆಯುದ್ದಕ್ಕೂ ವಿದ್ಯುತ್ ಅಡೆತಡೆಯಾಗದಂತೆ ನೋಡಿಕೊಳ್ಳಬೇಕು. ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಬೇಕು. ಪೆಂಡಾಲ್‌ಗೆ ತಾತ್ಕಾಲಿಕ ವಿದ್ಯುತ್ ಸಂಪರ್ಕ ನೀಡಲು ಜೆಸ್ಕಾಂ ಹೆಚ್ಚು ಶುಲ್ಕ ವಿಧಿಸುತ್ತಿದ್ದು, ಇದನ್ನು ಕಡಿಮೆ ಮಾಡಬೇಕು’ ಎಂದು ಕೋರಿದರು.

ಖಾಜಿ ರಿಜ್ವಾನ್ ಉರ್ ರೆಹಮಾನ್ ಸಿದ್ದಿಕ್ಕಿ ಸೇರಿದಂತೆ ಹಲವು ಮುಖಂಡರು ಮಾತನಾಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಭಂವರ್ ಸಿಂಗ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಉಪವಿಭಾಗಾಧಿಕಾರಿ ಸಾಹಿತ್ಯಾ ಆಲದಕಟ್ಟಿ, ಹೆಚ್ಚುವರಿ ಎಸ್ಪಿ ಮಹೇಶ ಮೇಘಣ್ಣನವರ, ಅಬಕಾರಿ ಉಪ ಆಯುಕ್ತ ಸಂಗಣಗೌಡ ಬಿರಾದಾರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಧಾರ್ಮಿಕ ಮುಖಂಡರು, ಗಣ್ಯರು ಭಾಗವಹಿಸಿದ್ದರು.

‘500ರಷ್ಟು ಸಾರ್ವಜನಿಕ ಗಣಪತಿ’

ಕಲಬುರಗಿ ನಗರ ಪೊಲೀಸ್ ಆಯುಕ್ತ ಶರಣಪ್ಪ ಎಸ್.ಡಿ. ಮಾತನಾಡಿ ‘ಕಲಬುರಗಿ ನಗರದಲ್ಲಿ 500ಕ್ಕೂ ಹೆಚ್ಚು ಸಾರ್ವಜನಿಕ ಗಣೇಶ ಪ್ರತಿಷ್ಠಾಪಿಸಲಾಗುತ್ತಿದೆ. ಗಣೇಶ ಪೆಂಡಾಲ್‌ಗೆ ಮಹಿಳೆಯರು ಮಕ್ಕಳು ಬರುವುದರಿಂದ ಸಾರ್ವಜನಿಕರನ್ನು ನಿಯಂತ್ರಿಸಲು ಆಯೋಜಕರು ಸ್ವಯಂ ಸೇವಕರನ್ನು ನಿಯೋಜಿಸಬೇಕು. ಸಾಧ್ಯವಾದರೆ ಸಿಸಿಟಿವಿ ಕ್ಯಾಮೆರಾ ಅಳವಡಿಸಿಕೊಳ್ಳಬೇಕು’ ಎಂದರು.

‘ಸುಳ್ಳು ಸುದ್ದಿಗೆ ಕಿವಿಗೊಡಬೇಡಿ’

‘ಹಬ್ಬದ ಸಂದರ್ಭದಲ್ಲಿ ಸೌಹಾರ್ದಕ್ಕೆ ಧಕ್ಕೆ ತರಲು ಕೆಲ ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು ಸುದ್ದಿಗಳನ್ನು ಪೋಸ್ಟ್ ಮಾಡುವ ಸಾಧ್ಯತೆಗಳಿದ್ದು ಸಾರ್ವಜನಿಕರು ಅಂಥ ಸುದ್ದಿಗಳಿಗೆ ಕಿವಿಗೊಡಬಾರದು. ಇಂತಹ ಯಾವುದೇ ಫೋಸ್ಟ್ ಬಂದಲ್ಲಿ ಅದನ್ನು ಫಾರ್ವರ್ಡ್‌ ಮಾಡುವ ಮುನ್ನ ಅದರ ಸತ್ಯಾಸತ್ಯತೆ ಪರಿಶೀಲಿಸಬೇಕು. ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ವಿಚಾರ ಇದ್ದರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದಲ್ಲಿ ಸಂಬಂಧಿಸಿದವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.