ಕಲಬುರಗಿ: ಆಧುನಿಕ ಕಾಲಘಟ್ಟದ ಹಲವು ಆಕರ್ಷಣೆಗಳು ಜನರನ್ನು ಓದಿನಿಂದ ವಿಮುಖರನ್ನಾಗಿ ಮಾಡುತ್ತಿವೆ. ಇದು ಓದುವ ಸಂಸ್ಕೃತಿ ಉತ್ತೇಜಿಸುವ ಗ್ರಂಥಾಲಯಗಳಲ್ಲಿ ಸದಸ್ಯರ ಸಂಖ್ಯೆ ಕುಸಿಯಲು ಕಾರಣವಾಗಿದೆ.
ಗ್ರಂಥಾಲಯದಲ್ಲಿ ಸದಸ್ಯತ್ವ ಪಡೆದು ಪುಸ್ತಕಗಳನ್ನು ಪಡೆಯಲು ಸಾಲುಗಟ್ಟಿ ನಿಲ್ಲುತ್ತಿದ್ದ ಕಾಲವೊಂದಿತ್ತು. ಕಾಲಚಕ್ರ ಉರುಳಿದಂತೆ ಪುಸ್ತಕ ಪ್ರೀತಿಯೂ ಕರಗುತ್ತ ಸಾಗಿದೆ ಎನ್ನುವುದನ್ನು ನಗರ ಕೇಂದ್ರ ಗ್ರಂಥಾಲಯದ ಸದಸ್ಯತ್ವ ಸಂಖ್ಯೆ ಪ್ರತಿಫಲಿಸುತ್ತದೆ.
ಜಿಲ್ಲೆಯ ಅತಿದೊಡ್ಡ ಗ್ರಂಥಾಲಯವಾದ ನಗರ ಕೇಂದ್ರ ಗ್ರಂಥಾಲಯದಲ್ಲಿ 2022–23ರಿಂದ ಇಲ್ಲಿಯವರೆಗೂ ಕೇವಲ 1,747 ಜನರು ಹೊಸದಾಗಿ ಸದಸ್ಯತ್ವ ಪಡೆದುಕೊಂಡಿದ್ದಾರೆ.
ನಗರದ ಶರಣಬಸವೇಶ್ವರ ಕೆರೆ ಬಳಿ ಇರುವ ಈ ಗ್ರಂಥಾಲಯವನ್ನು 1981ರಲ್ಲಿ ಸ್ಥಾಪಿಸಲಾಗಿದೆ. ಇಲ್ಲಿ 60,575 ಪುಸ್ತಕಗಳಿವೆ. 10 ಜನ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಮಹಿಳಾ ಓದುಗರಿಗಾಗಿ ಪ್ರತ್ಯೇಕ ಕೊಠಡಿ ಇದೆ. ಮಕ್ಕಳ ವಿಭಾಗವಿದೆ ಹಾಗೂ ಬ್ರೈಲ್ ಲಿಪಿಯಲ್ಲಿರುವ ಪುಸ್ತಕಗಳೂ ದೊರೆಯುತ್ತವೆ.
ಒಂದು ಕಾಲದಲ್ಲಿ ಈ ಗ್ರಂಥಾಲಯ ಅತಿ ಹೆಚ್ಚು ಸದಸ್ಯರನ್ನು ಹೊಂದಿತ್ತು. 2022–23ರಿಂದ ಈಚೆಗೆ ಸದಸ್ಯತ್ವ ಪಡೆಯುವವರ ಸಂಖ್ಯೆ ನಿರೀಕ್ಷಿತ ಪ್ರಮಾಣದಲ್ಲಿ ಹೆಚ್ಚಳವಾಗಿಲ್ಲ. ಮನೆಗೆ ಪುಸ್ತಕ ಎರವಲು ತೆಗೆದುಕೊಂಡು ಹೋಗುವವರ ಸಂಖ್ಯೆಯೂ ಕುಸಿದಿದೆ.
ಈ ಗ್ರಂಥಾಲಯದಲ್ಲಿ ಇಲ್ಲಿಯವರೆಗೂ 18,721 ಜನರು ಸದಸ್ಯತ್ವ ಪಡೆದುಕೊಂಡಿದ್ದಾರೆ. 2022–23ರಲ್ಲಿ 16,974 ಜನ ಸದಸ್ಯರಿದ್ದರು. 2023–24ರಲ್ಲಿ 17,660, 2024–25ರಲ್ಲಿ 18,465 ಸದಸ್ಯರಿದ್ದರು. ಈಗ ಆ ಸಂಖ್ಯೆ 18,721ಕ್ಕೆ ತಲುಪಿದೆ. 2022–23ರಿಂದ ಇಲ್ಲಿಯವರೆಗೂ ಕೇವಲ 1,747 ಜನರು ಸದಸ್ಯತ್ವ ಪಡೆದುಕೊಂಡಿದ್ದಾರೆ.
ಸದಸ್ಯತ್ವ ಪಡೆಯುವವರಿಂದ ಎರವಲು ಪಡೆಯುವ ಪುಸ್ತಕಗಳ ಸಂಖ್ಯೆಯ ಆಧಾರದ ಮೇಲೆ ಠೇವಣಿ ಪಡೆಯಲಾಗುತ್ತದೆ. ಒಂದು ಪುಸ್ತಕ ಎರವಲು ಪಡೆಯುವವರಿಗೆ ₹100, ಎರಡು ಪುಸ್ತಕ ಪಡೆಯುವವರಿಗೆ ₹150 ಹಾಗೂ ಮೂರು ಪುಸ್ತಕ ತೆಗೆದುಕೊಂಡು ಹೋಗುವವರಿಂದ ₹200 ತೆಗೆದುಕೊಳ್ಳಲಾಗುತ್ತದೆ. ಪುಸ್ತಕ ತೆಗೆದುಕೊಂಡು ಹೋದವರು ತೆಗೆದುಕೊಂಡು ಹೋದ ದಿನದಿಂದ 15 ದಿನದೊಳಗಾಗಿ ಹಿಂತಿರುಗಿಸಬೇಕು. ಇಲ್ಲ ಅದನ್ನು ನವೀಕರಿಸಬೇಕು. ಇಲ್ಲದಿದ್ದರೆ 15 ದಿನಗಳ ನಂತರ ಪ್ರತಿ ದಿನಕ್ಕೆ ₹1 ದಂಡ ವಿಧಿಸಲಾಗುತ್ತದೆ.
ಸದಸ್ಯತ್ವ ಪಡೆಯುವವರ ಸಂಖ್ಯೆ ಕುಸಿಯಲು ಗ್ರಂಥಾಲಯದಲ್ಲಿ ಉತ್ತಮ ಸಾಹಿತ್ಯಕ ಪುಸ್ತಕಗಳ ಕೊರತೆಯೂ ಕಾರಣ ಎನ್ನಲಾಗಿದೆ. ಹುಡುಕಿದರೂ ಕನ್ನಡದ ಕೆಲ ಪ್ರಮುಖ ಲೇಖಕರ ಪುಸ್ತಕಗಳು ದೊರೆಯುವುದಿಲ್ಲ. ಪುಸ್ತಕಗಳ ಕೊರತೆಗೆ ಅವೈಜ್ಞಾನಿಕ ಪುಸ್ತಕ ಖರೀದಿ ಆಯ್ಕೆ ವಿಧಾನ ಮುಖ್ಯ ಕಾರಣ ಎಂದು ಓದುಗರು ತಿಳಿಸುತ್ತಾರೆ.
ಹಳೆ ಸದಸ್ಯರು ಗ್ರಂಥಾಲಯದ ಜೊತೆ ಇನ್ನೂ ಸಂಪರ್ಕ ಇಟ್ಟುಕೊಂಡಿದ್ದಾರೆ. ನಗರ ಕೇಂದ್ರ ಗ್ರಂಥಾಲಯ ಸುಸಜ್ಜಿತವಾಗಿದೆ. ಎಲ್ಲ ಸೌಕರ್ಯಗಳಿವೆ. ಪುಸ್ತಕ ಕೊರತೆ ಇಲ್ಲಅಜಯಕುಮಾರ ಉಪನಿರ್ದೇಶಕ ನಗರ ಕೇಂದ್ರ ಗ್ರಂಥಾಲಯ ಕಲಬುರಗಿ
ಕನ್ನಡದ ಪ್ರಮುಖ ಲೇಖಕರ ಪುಸ್ತಕಗಳು ದೊರೆಯುವಂತೆ ಮಾಡಬೇಕು. ಪುಸ್ತಕಗಳ ಎರವಲು ಅವಧಿಯನ್ನು ಹೆಚ್ಚಿಸಿದರೆ ಓದುಗರಿಗೆ ಅನುಕೂಲವಾಗಲಿದೆಪವನ್, ಓದುಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.