ಕಲಬುರ್ಗಿ: ಮಹಾರಾಷ್ಟ್ರ ಉಜನಿ, ವೀರ್ ಅಣೆಕಟ್ಟೆಗಳಿಂದ 7.5 ಲಕ್ಷ ಕ್ಯುಸೆಕ್ ನೀರು ಬಿಡುಗಡೆ ಮಾಡುವ ಸಾಧ್ಯತೆ ಇರುವುದರಿಂದ ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ಅವರು ನಾಲ್ಕು ತಾಲ್ಲೂಕುಗಳ 148 ಗ್ರಾಮಗಳ ಸ್ಥಳಾಂತರಕ್ಕೆ ಸೂಚನೆ ನೀಡಿದ್ದಾರೆ.
ಜೇವರ್ಗಿ, ಚಿತ್ತಾಪುರ, ಅಫಜಲಪುರ, ಹಾಗೂ ಸೇಡಂ ತಾಲ್ಲೂಕುಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಭೀಮಾ ನದಿತೀರದ ಹಾಗೂ ಹಿನ್ನೀರಿನ ಜನತೆ ಸುರಕ್ಷಿತವಾಗಿರುವ ಎತ್ತರದ ಪ್ರದೇಶಕ್ಕೆ ತೆರಳಲು ಮನವಿ ಮಾಡಿದ್ದಾರೆ.
ಗುರುವಾರ ಸಂಜೆಯಿಂದಲೇ 5.11 ಲಕ್ಷ ಕ್ಯುಸೆಕ್ ನೀರನ್ನು ಭೀಮಾ ನದಿಗೆ ಹರಿಸಲಾಗಿದೆ. ಹಲವು ನಗರಗಳ ಮಧ್ಯದ ಸಂಪರ್ಕ ಕಡಿತವಾಗಿದೆ.
ಸೊನ್ನ ಬ್ಯಾರೇಜ್‌ನಿಂದ 5.11 ಲಕ್ಷ ಕ್ಯುಸೆಕ್: ಗ್ರಾಮಗಳಿಗೆಮುಳುಗಡೆಭೀತಿ
ಕಲಬುರ್ಗಿ: ಮಹಾರಾಷ್ಟ್ರದ ಉಜನಿ ಮತ್ತು ವೀರ್ ಅಣೆಕಟ್ಟೆಯಿಂದ ಭೀಮಾ ನದಿಗೆ 5.11 ಲಕ್ಷ ಕ್ಯುಸೆಕ್ ನೀರನ್ನು ಬಿಡುಗಡೆ ಮಾಡಿದ್ದರಿಂದ, ಅಷ್ಟೇ ಪ್ರಮಾಣದ ನೀರನ್ನು ಅಫಜಲಪುರ ತಾಲ್ಲೂಕಿನ ಸೊನ್ನ ಭೀಮಾ ಬ್ಯಾರೇಜಿನಿಂದ ಗುರುವಾರ ಸಂಜೆನದಿಗೆ ಬಿಡುಗಡೆ ಮಾಡಲಾಗಿದೆ. ಹೀಗಾಗಿ, ನಾಲ್ಕು ತಾಲ್ಲೂಕುಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ.
ಇತ್ತೀಚಿನ ವರ್ಷಗಳಲ್ಲಿ ಇಷ್ಟೊಂದು ಪ್ರಮಾಣದ ನೀರನ್ನು ನದಿಗೆ ಹರಿಸಿರಲಿಲ್ಲ. 2018ರಲ್ಲಿ 3.60 ಲಕ್ಷ ಕ್ಯುಸೆಕ್ ನೀರನ್ನು ಹರಿಸಲಾಗಿತ್ತು.
ಗುರುವಾರ ಬೆಳಿಗ್ಗೆ 2.23 ಲಕ್ಷ ಕ್ಯುಸೆಕ್ ನೀರನ್ನು ಬಿಡುಗಡೆ ಮಾಡಿದ್ದರಿಂದ ಅಫಜಲಪುರ, ಜೇವರ್ಗಿ, ಚಿತ್ತಾಪುರ ಹಾಗೂ ಸೇಡಂ ತಾಲ್ಲೂಕಿನ ಹಲವು ಗ್ರಾಮಗಳು ಜಲಾವೃತವಾಗುವ ಆತಂಕ ಎದುರಾಗಿದೆ.
ಜಿಲ್ಲೆಯ ಪ್ರವಾಹ ಪರಿಸ್ಥಿತಿ ಹೇಳಿಕೆ ನೀಡಿರುವ ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ, ‘ಜಿಲ್ಲೆಯಲ್ಲಿ ಇನ್ನೂ ಎರಡು ದಿನ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದ್ದು, ಎರಡು ಎನ್‌ಡಿಆರ್‌ಎಫ್ ತಂಡಗಳು ಸ್ಥಳೀಯ ಪೊಲೀಸರೊಂದಿಗೆ ರಕ್ಷಣಾ ಕಾರ್ಯಾಚರಣೆ ಮಾಡುತ್ತಿವೆ. ಈಗಾಗಲೇ 150ಕ್ಕೂ ಹೆಚ್ಚು ಜನರನ್ನು ರಕ್ಷಣೆ ಮಾಡಲಾಗಿದೆ. ಜಿಲ್ಲೆಯಲ್ಲಿ 50ಕ್ಕೂ ಅಧಿಕ ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದ್ದು, ಅಗತ್ಯಬಿದ್ದರೆ ಇನ್ನೂ ಹೆಚ್ಚಿನ ಕೇಂದ್ರಗಳನ್ನು ತೆರೆಯಲಾಗುವುದು. ಜಿಲ್ಲೆಯ ಜನತೆ ಭಯಪಡುವ ಅಗತ್ಯವಿಲ್ಲ’ ಎಂದು ಅಭಯ ನೀಡಿದ್ದಾರೆ.
ಕಲಬುರ್ಗಿ, ಯಾದಗಿರಿ ಜಿಲ್ಲೆಗಳ ಪ್ರವಾಹದಲ್ಲಿ ಸಿಲುಕಿಕೊಂಡವರ ರಕ್ಷಣೆಗೆ ಎರಡು ಹೆಲಿಕಾಪ್ಟರ್, ಸೇರಿದಂತೆ ಹೆಚ್ಚುವರಿ ಎರಡು ಎನ್‌ಡಿಆರ್‌ಎಫ್ ತಂಡಗಳನ್ನು ರವಾನಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.