ADVERTISEMENT

ಕಲಬುರಗಿ: ₹2.57 ಕೋಟಿ ಅನುದಾನ ಬಳಕೆ, ಎಲ್ಲ ಸಮುದಾಯಗಳಿಗೂ ಆದ್ಯತೆ

ದೇವಸ್ಥಾನ, ಖಬರಸ್ಥಾನ್‌ಗೂ ವೆಚ್ಚ

ಸಂತೋಷ ಈ.ಚಿನಗುಡಿ
Published 24 ಅಕ್ಟೋಬರ್ 2021, 3:45 IST
Last Updated 24 ಅಕ್ಟೋಬರ್ 2021, 3:45 IST
ಶಾಸಕ ಪ್ರಿಯಾಂಕ್‌ ಖರ್ಗೆ ಅವರ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ಚಿತ್ತಾಪುರ ಪಟ್ಟಣದಲ್ಲಿ ನಿರ್ಮಿಸಿದ ಒಳಾಂಗಣ ಕ್ರೀಡಾಂಗಣ
ಶಾಸಕ ಪ್ರಿಯಾಂಕ್‌ ಖರ್ಗೆ ಅವರ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ಚಿತ್ತಾಪುರ ಪಟ್ಟಣದಲ್ಲಿ ನಿರ್ಮಿಸಿದ ಒಳಾಂಗಣ ಕ್ರೀಡಾಂಗಣ   

ಕಲಬುರಗಿ: ಚಿತ್ತಾಪುರ ಶಾಸಕ ಪ್ರಿಯಾಂಕ್‌ ಖರ್ಗೆ ಅವರು ತಮ್ಮ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ಸಮುದಾಯ ಭವನ, ಶಿಕ್ಷಣ ಸುಧಾರಣೆ, ರಸ್ತೆ, ಖಬರಸ್ಥಾನ್‌ ಸುಧಾರಣೆ ಹಾಗೂ ಚರಂಡಿ ನಿರ್ಮಾಣ ಸೇರಿ ವಿವಿಧ ಕೆಲಸಗಳಿಗೂ ಆದ್ಯತೆ ನೀಡಿದ್ದಾರೆ.

2018–19, 2019–20ನೇ ಸಾಲಿನ ಅನುದಾನವನ್ನು ಈವರೆಗೆ ಪೂರ್ಣವಾಗಿ ಬಳಕೆ ಮಾಡಿಕೊಳ್ಳಲಾಗಿದೆ. ಕ್ಷೇತ್ರದಾದ್ಯಂತ ಒಟ್ಟು 52 ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, ಅದರಲ್ಲಿ ಬಹುತೇಕ ಪೂರ್ಣಗೊಂಡಿವೆ. ಮತ್ತೆ ಕಲವು ಇನ್ನೂ ಮಂಜೂರಾತಿ ಹಂತದಲ್ಲಿವೆ. ಈವರೆಗೆ ಬಂದ ₹ 2.57 ಕೋಟಿ ಅನುದಾನ ಖರ್ಚು ಮಾಡಿದ್ದಾರೆ.

ಚಿತ್ತಾಪುರ ಪಟ್ಟಣದಲ್ಲಿ ವಿವಿಧ ಸಮುದಾಯ ಭವನ ನಿರ್ಮಾಣಕ್ಕೆ ₹ 26 ಲಕ್ಷ, ನ್ಯಾಯಾಲಯದ ಅಗತ್ಯ ಪೀಠೋಪಕರಣಗಳಿಗೆ ₹ 5 ಲಕ್ಷ, ಸಿಸಿ ರಸ್ತೆ ನಿರ್ಮಾಣಕ್ಕೆ ₹ 5 ಲಕ್ಷ, ಸೂಲಹಳ್ಳಿ ಗ್ರಾಮದಲ್ಲಿ ಎರಡು ಕಡೆ ಸಿಸಿ ರಸ್ತೆ ನಿರ್ಮಾಣಕ್ಕೆ ಒಟ್ಟು ₹ 7.64 ಲಕ್ಷ, ಇದೇ ಗ್ರಾಮದ ಪರಿಶಿಷ್ಟರ ಕಾಲೊನಿಯಲ್ಲಿ ರಸ್ತೆಗೆ ₹ 5 ಲಕ್ಷ, ಸೂಗೂರು ಗ್ರಾಮದ ಮುಸ್ಲಿಂ ಸಮುದಾಯ ಭವನಕ್ಕೆ ₹ 5 ಲಕ್ಷ ವೆಚ್ಚದಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗಿದೆ.

ADVERTISEMENT

₹ 5 ಲಕ್ಷ ವೆಚ್ಚದಲ್ಲಿ ಭಂಕೂರ ಗ್ರಾಮದಲ್ಲಿ ಅಂಬಿಗರ ಸಮುದಾಯ ಭವನ, ₹ 5 ಲಕ್ಷದಲ್ಲಿ ಭೀಮನಹಳ್ಳಿಯಲ್ಲಿ ಸಮುದಾಯ ಭವನ, ₹ 5 ಲಕ್ಷದಲ್ಲಿ ಭಂಕೂರಲ್ಲಿ ಮುಸ್ಲಿಂ ಸಮುದಾಯ ಭವನ, ₹ 5 ಲಕ್ಷದಲ್ಲಿ ನಾಲವಾರದ ಕೋರಿಸಿದ್ಧೇಶ್ವರ ಮಠದಿಂದ ಹಣಮಂತ ಹೆಳವರ ಓಣಿಯವರೆಗೆ ಸಿಸಿ ರಸ್ತೆ ನಿರ್ಮಾಣ, ₹ 15 ಲಕ್ಷ ವೆಚ್ಚದಲ್ಲಿ ಚಿತ್ತಾಪುರ ಪಟ್ಟಣದ ಸರ್ಕಾರಿ ಕ್ರೀಡಾಂಗಣದ ಅಭಿವೃದ್ಧಿಗಾಗಿ ವಿವಿಧ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ.

ಕ್ರಿಯಾಯೋಜನೆ ಸಲ್ಲಿಸಿದ ಕಾಮಗಾರಿಗಳು: ಅಲ್ಲೂರ ಗ್ರಾಮದಲ್ಲಿ ಸಮುದಾಯ ಭವನ ₹ 5 ಲಕ್ಷ, ಕೊಲ್ಲೂರಲ್ಲಿ ಖಬರಸ್ಥಾನ ಗೋಡೆ ನಿರ್ಮಾಣ ₹ 3 ಲಕ್ಷ, ಪೇಠಶಿರೂರ ಹಾಗೂ ಹೊಸೂರ ಗ್ರಾಮಗಳಲ್ಲಿ ಮುಸ್ಲಿಂ ಸಮುದಾಯದ ಸಮುದಾಯ ಭವನಕ್ಕೆ ತಲಾ ₹ 3 ಲಕ್ಷ, ಅಳ್ಳೊಳ್ಳಿ ಗ್ರಾಮದ ಕ್ರಿಶ್ಚಿಯನ್‌ ಸಮುದಾಯದ ಪ್ರದೇಶದಲ್ಲಿ ಸಮುದಾಯ ಭವನ ₹ 3 ಲಕ್ಷ, ಗುಂಡಗುರ್ತಿ ಗ್ರಾಮದಲ್ಲಿ ಖಬರಸ್ತಾನ ಅಭಿವೃದ್ಧಿ ₹ 5 ಲಕ್ಷ, ಮಲಘಾಣ, ಮುಗಬಾ, ಕದ್ದರಗಿ, ಕಾಟಮ್ಮದೇವರ ಹಳ್ಳಿ, ಭೀಮನಳ್ಳಿ, ಹಲಕಟ್ಟಾ, ಭಂಕೂರ, ಕೊಂಚೂರ, ಕಮರವಾಡಿ ಸೇರಿದಂತೆ ಒಟ್ಟು 27 ಗ್ರಾಮಗಳಲ್ಲಿ ಸಮಯದಾಯ ಭವನ ನಿರ್ಮಾಣಕ್ಕೂ ತಲಾ ₹ 5 ಲಕ್ಷ ಅಂದಾಜು ಪಟ್ಟಿ ಸಲ್ಲಿಸಲಾಗಿದೆ.

‘ಕೊರೊನಾ ಕಾರಣದಿಂದ ಅನುದಾನ ಬರುವುದು ವಿಳಂಬವಾಗಿದೆ. ಪ್ರಸಕ್ತ ಸಾಲಿನ ₹ 2 ಕೋಟಿ ಕೂಡ ಇನ್ನೂ ಬಂದಿಲ್ಲ. ಚಿತ್ತಾಪುರ ಕ್ಷೇತ್ರದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ ಧರ್ಮೀಯರೂ ಸೇರಿದಂತೆ ಎಲ್ಲ ಜಾತಿ– ಜನಾಂಗದವರಿಗೂ ಅಗತ್ಯವಿರುವ ಕಡೆ ಸಮುದಾಯ ಭವನ ನಿರ್ಮಿಸಲಾಗುತ್ತಿದೆ’ ಎಂದು ಶಾಸಕ ಪ್ರಿಯಾಂಕ್‌ ಖರ್ಗೆ ಅವರು ಮಾಹಿತಿ ನೀಡಿದ್ದಾರೆ.

‘ಪ‍ತ್ರಕ್ಕೆ ಉತ್ತರಿಸದ ಸರ್ಕಾರ’
‘ಪ್ರಸಕ್ತ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಲ್ಲೇ ಆಯಾ ಕ್ಷೇತ್ರದ ಮೂರು ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡು ಅಭಿವೃದ್ಧಿಪಡಿಸುವಂತೆ ಶಿಕ್ಷಣ ಸಚಿವರು ಸೂಚಿಸಿದ್ದಾರೆ. ಆದರೆ, ಸದ್ಯ ಕೊಡುವ ಅನುದಾನದಲ್ಲಿ ಜನರ ಮೂಲಸೌಕರ್ಯ ಕಲ್ಪಿಸುವುದೇ ಸಾಧ್ಯವಾಗಿಲ್ಲ. ಕೊರೊನಾ ನೆಪದಲ್ಲಿ ಅನುದಾನ ಕಡಿತಗೊಳಿಸಿದ್ದಾರೆ. ಶಾಲೆಗಳ ದತ್ತು ತೆಗೆದುಕೊಳ್ಳುವಂತೆ ಹೇಳಿದರೆ; ಅನುದಾನ ಎಲ್ಲಿಂದ ಹೊಂದಿಸಬೇಕೆಂದು ಮೂರು ಬಾರಿ ಪತ್ರ ಬರೆದಿದ್ದೇನೆ. ಆದರೆ, ಸಚಿವರು ಈವರೆಗೂ ಉತ್ತರ ನೀಡಿಲ್ಲ’ ಎಂದು ಶಾಸಕ ಪ್ರಿಯಾಂಕ್‌ ಖರ್ಗೆ ಪ್ರತಿಕ್ರಿಯಿಸಿದರು.

‘ಶಾಲೆಗಳ ದತ್ತು ಹಾಗೂ ಅಭಿವೃದ್ಧಿ ಕಾಮಗಾರಿಗಳಿಗಾಗಿ ಎಲ್ಲ ಕ್ಷೇತ್ರಗಳಿಗೂ ತಲಾ ₹ 2 ಕೋಟಿ ಹೆಚ್ಚುವರಿ ಅನುದಾನ ನೀಡಲು ಕೋರಿರುವೆ. ಆದರೆ, ಸರ್ಕಾರದಿಂದ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ, ಒಂದೂವರೆ ವರ್ಷದಿಂದ ಯಾವುದೇ ಕಾಮಗಾರಿಗಳು ನಡೆಯದ ಸ್ಥಿತಿ ಬಂದಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.