ADVERTISEMENT

ಕಲಬುರಗಿ | ಕೊಳೆತ ಸ್ಥಿತಿಯಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿನಿ ಮೃತದೇಹ ಪತ್ತೆ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2025, 5:15 IST
Last Updated 20 ಸೆಪ್ಟೆಂಬರ್ 2025, 5:15 IST
   

ಸೇಡಂ: ತಾಲ್ಲೂಕಿನ ಮಳಖೇಡ ರಾಜಶ್ರೀ ಸಿಮೆಂಟ್ ಕಂಪನಿಯ ಗಾರ್ಡನ್ ಹಿಂಭಾಗದಲ್ಲಿ ದೊರೆತ ವಿದ್ಯಾರ್ಥಿನಿ ಭಾಗ್ಯಶ್ರೀ ಸೂಲಹಳ್ಳಿ ಕೊಲೆ ತಂದೆ ಚನ್ನವೀರಪ್ಪ ಸೂಲಹಳ್ಳಿ ಅವರು ಕೆಲಸ ಮಾಡುತ್ತಿದ್ದ ಕಂಪನಿ ಉದ್ಯೋಗಸ್ಥರಿಂದಲೇ ನಡೆದಿದೆ ಎಂಬ ಶಂಕೆ ವ್ಯಕ್ತವಾಗಿದೆ.

‘ರಾಜಶ್ರೀ ಸಿಮೆಂಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮಂಜುನಾಥ ಶಶಿಧರ ಎಂಬುವವರೇ ಕೊಲೆ ಮಾಡಿದ್ದಾರೆ. ಮಗಳ ಹತ್ಯೆಗೆ ಶಶಿಧರ, ಪ್ರಮೋದ ಮತ್ತು ಅಶೋಕ ಕುಮ್ಮಕ್ಕು ನೀಡಿದ್ದಾರೆ’ ಎಂದು ಮೃತ ಭಾಗ್ಯಶ್ರೀ ತಂದೆ ಚನ್ನವೀರಪ್ಪ ಮಳಖೇಡ ಠಾಣೆಗೆ ದೂರು ನೀಡಿದ್ದಾರೆ.

ಆರೋಪಿ ಮಂಜುನಾಥ ಸೇರಿದಂತೆ ಇಬ್ಬರು ಆರೋಪಿಗಳನ್ನು ಮಳಖೇಡ ಠಾಣೆಯ ಪೊಲೀಸರು ಶುಕ್ರವಾರ ವಶಕ್ಕೆ ಪಡೆದಿದ್ದು, ತನಿಖೆ ಮುಂದುವರಿಸಿದ್ದಾರೆ.

ADVERTISEMENT

ಘಟನೆ ಹಿನ್ನೆಲೆ: ‘ಚನ್ನವೀರಪ್ಪ ಸೂಲಹಳ್ಳಿ ಮಳಖೇಡ ರಾಜಶ್ರೀ ಸಿಮೆಂಟ್ ಕಂಪನಿಯಲ್ಲಿ ನೌಕರ. ಜೊತೆಗೆ ಯೂನಿಯನ್ ಲೀಡರ್. ಅದೇ ಕಂಪನಿಯಲ್ಲಿ ಗುತ್ತಿಗೆ ಕಾರ್ಮಿಕನಾಗಿದ್ದ ವಿನೋದ ಅಶೋಕ ಕಂಪನಿಯಲ್ಲಿ ಹುದ್ದೆ ಕಾಯಂಗೊಳಿಸುವಂತೆ ಚನ್ನವೀರಪ್ಪ ಅವರಿಗೆ ಹತ್ತಾರು ಬಾರಿ ಮನವಿ ಮಾಡಿದ್ದರು. ಆದರೆ ಅವರ ಸೇವೆ ಕಾಯಂ ಆಗಿರಲಿಲ್ಲ. ಇದನ್ನೇ ಗಂಭೀರವಾಗಿ ಪರಿಗಣಿಸಿದ್ದ ವಿನೋದ ಅಶೋಕ ಆಗಸ್ಟ್‌ 11ರಂದು ವಿಷ ಕುಡಿದು ಮೃತಪಟ್ಟಿದ್ದರು. ಈ ವಿಷಯವಾಗಿ ಮೃತ ವಿನೋದ ಅವರ ಚಿಕ್ಕಪ್ಪನ ಮಗ ಮಂಜುನಾಥ ಶಶಿಧರ ಅವರು ಚನ್ನವೀರಪ್ಪ ಸೂಲಹಳ್ಳಿ ಅವರ ಜೊತೆಗೆ ಫೋನ್‌ನಲ್ಲಿ ಜಗಳ ಮಾಡಿದ್ದನು. ನನ್ನ ತಮ್ಮನ ಸಾವಿನ ಸೇಡು ತೀರಿಸಿಕೊಳ್ಳುವೆ. ನಿನ್ನನ್ನು ಕೊಲೆ ಮಾಡುವೆ ಎಂದು ಚನ್ನವೀರಪ್ಪ ಅವರಿಗೆ ಆಗಾಗ ಕರೆ ಮಾಡಿ ತೊಂದರೆ ಕೊಡುತ್ತಿದ್ದ’ ಎನ್ನಲಾಗಿದೆ.

ಮನವಿ ಮಾಡಿದ್ದ ಪುತ್ರಿ:

‘ಸೆ.11ರಂದು ಮಂಜುನಾಥ ಶಶಿಧರಗೆ ಭಾಗ್ಯಶ್ರೀ ಸೂಲಹಳ್ಳಿ ಕರೆ ಮಾಡಿ ಕಂಪನಿಯಲ್ಲಿ ಮಾತನಾಡಿದ್ದರು. ನನ್ನ ತಂದೆಗೆ ಪದೇ ಪದೇ ಕರೆ ಮಾಡಿ ತೊಂದರೆ ಕೊಡುವುದು ಸರಿಯಾದ ನಡವಳಿಕೆಯಲ್ಲ. ನಿಮ್ಮ ಸಹೋದರನ ಸಾವಿಗೆ ನಮ್ಮ ತಂದೆ ಕಾರಣವಲ್ಲ. ದಯವಿಟ್ಟು ತಂದೆಗೆ ನೋವು ಕೊಡಬೇಡಿ ಎಂದು ಭಾಗ್ಯಶ್ರೀ ಮನವಿ ಮಾಡಿದ್ದರು. ಮಾತನಾಡುತ್ತಿರುವಾಗಲೇ ಇಬ್ಬರ ಮಧ್ಯೆ ಜಗಳವಾಗಿದೆ. ವಾಗ್ವಾದ ಬೆಳೆದು ಇಬ್ಬರ ನಡುವೆ ಜಗಳವಾಗಿದ್ದು, ಪಕ್ಕದಲ್ಲಿಯೇ ಇದ್ದ ಕಬ್ಬಿಣದ ರಾಡನಿಂದ ಭಾಗ್ಯಶ್ರೀ ಅವಳ ತಲೆಗೆ ಹೊಡೆದಿದ್ದಾನೆ. ಯುವತಿ ಕೆಳಗಡೆ ಬಿದ್ದು, ಪ್ರಜ್ಞೆ ಕಳೆದುಕೊಂಡಾಗ ಭಯದಲ್ಲಿಯೇ ದೂರದಲ್ಲಿ ದೇಹ ಎಸೆದು ಪರಾರಿಯಾಗಿದ್ದಾನೆ’ ಎನ್ನಲಾಗಿದೆ. ಅದಾಗ್ಯೂ, ಪೊಲೀಸರ ತನಿಖೆಯ ನಂತರವೇ ಸಾವಿನ ನಿಖರ ಮಾಹಿತಿ ಹೊರಬೀಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.