ಕಾಳಗಿ: ತಾಲ್ಲೂಕಿನಾದ್ಯಂತ ಕೆಲದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಹಲವು ಗ್ರಾಮಗಳಿಗೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ಕಾಳಗಿ–ಮಲಘಾಣ ರಸ್ತೆ ನಡುವಿನ ಸೇತುವೆ ಮುಳುಗಡೆಯಾಗಿ ಶುಕ್ರವಾರ ಇಡೀ ದಿನ ಸಂಪರ್ಕ ಕಡಿತಗೊಂಡಿತು. ಪ್ರಯಾಣಿಕರು ಪರದಾಡಿದರು.
ಹೇರೂರ ಕೆ. ಬೆಣ್ಣೆತೊರಾ ಜಲಾಶಯದ ಗರಿಷ್ಠ ಮಟ್ಟ 438.89 ಮೀಟರ್ ಇದೆ. 7,200 ಕ್ಯೂಸೆಕ್ ಒಳಹರಿವು ಹೆಚ್ಚಿದ್ದರಿಂದ ಶುಕ್ರವಾರ 438.42 ಮೀಟರ್ ನೀರಿನ ಪ್ರಮಾಣ ಇತ್ತು. ಜಲಾಶಯ ಶೇ 90ರಷ್ಟು ಭರ್ತಿಯಾಗಿದೆ. ಶುಕ್ರವಾರ 6 ಗೇಟ್‌ಗಳ ಮೂಲಕ 8,400 ಕ್ಯೂಸೆಕ್ ನೀರು ಹೊರಬಿಡಲಾಗಿದೆ.
ನದಿ ದಂಡೆಯ ಹಳೆ ಹೆಬ್ಬಾಳ, ಕಣಸೂರ, ಮಲಘಾಣ, ತೆಂಗಳಿ, ಕಲಗುರ್ತಿ ಗ್ರಾಮಗಳ ಹೊಲ, ಮನೆ, ಗುಡಿ ಗುಂಡಾರ, ಹೋಟೆಲ್, ದುಕಾನ್, ಸಮುದಾಯ ಭವನಗಳಿಗೆ ನೀರು ನುಗ್ಗಿ ಹಾನಿ ಮಾಡಿದೆ. ಡೊಣ್ಣೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದಾರಿ ಬಂದ್ ಆಗಿದ್ದರಿಂದ ಶಾಲೆಗೆ ರಜೆ ನೀಡಲಾಗಿದೆ ಎಂದು ಮುಖ್ಯಶಿಕ್ಷಕ ಮಲ್ಲಪ್ಪ ಬಿಟ್ಟಣ್ಣವರ್ ತಿಳಿಸಿದರು.
ಕಣಸೂರ–ಗೋಟೂರ ನಡುವಿನ ಸೇತುವೆ ಶಿಥಿಲಗೊಂಡಿದೆ. ತಹಶೀಲ್ದಾರ್ ಪೃಥ್ವಿರಾಜ ಪಾಟೀಲ ಅವರು ಲೋಕೋಪಯೋಗಿ ಇಲಾಖೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಮಲಘಾಣ ಗ್ರಾಮದ ಹಳ್ಳದ ದಂಡೆಯಲ್ಲಿ ಅನೇಕ ರೈತರ ಹೊಲಗಳಲ್ಲಿ ನೀರು ನುಗ್ಗಿ ಅಪಾರ ಬೆಳೆ ಹಾಳಾಗಿದೆ. ಅಧಿಕಾರಿಗಳು ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ನೀಡಬೇಕು.– ರಾಜಕುಮಾರ ನಾಮದಾರ, ಮಲಘಾಣ ಗ್ರಾಮಸ್ಥ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.