
ಕಲಬುರಗಿ: ನಗರದ ಐತಿಹಾಸಿಕ ಬಹಮನಿ ಕೋಟೆಯಲ್ಲಿ ವಿವಿಧ ಸ್ಮಾರಕಗಳಿಗೆ ಹೋಗುವ ದಾರಿಯಲ್ಲಿ ಕೊಳಚೆ ನೀರು, ರಸ್ತೆಯಲ್ಲಿ ಕಲ್ಲು, ಕಡಿ ಇರುವುದನ್ನು ಗಮನಿಸಿದ ಅಮೆರಿಕ ಹಾಗೂ ಇಂಗ್ಲೆಂಡ್‌ನಿಂದ ಬಂದಿದ್ದ ಪ್ರವಾಸಿಗರು ಸ್ಮಾರಕವನ್ನು ಹೆಚ್ಚು ಹೊತ್ತು ನೋಡದೇ ಬೇಸರದಿಂದ ವಾಪಸಾದ ಘಟನೆ ಇತ್ತೀಚೆಗೆ ಬಂದಿದೆ.
ಅಮೆರಿಕದ 26 ಹಾಗೂ ಇಂಗ್ಲೆಂಡ್‌ನ ಇಬ್ಬರು ಪ್ರವಾಸಿಗರು ಬೆಂಗಳೂರಿನಿಂದ ಕಲ್ಯಾಣ ಕರ್ನಾಟಕದ ವಿವಿಧ ಸ್ಮಾರಕಗಳನ್ನು ನೋಡಲು ಬಂದಿದ್ದರು. ಮೊದಲು ಬೀದರ್ ಕೋಟೆಗೆ ತೆರಳಿ ಅಲ್ಲಿನ ಕೋಟೆಯ ಮಹತ್ವವನ್ನು ಗಮನಿಸಿದ್ದರು. ಅಲ್ಲಿಂದ ನೇರವಾಗಿ ಕಲಬುರಗಿಯ ಬಹಮನಿ ಕೋಟೆಗೆ ಬರುತ್ತಿದ್ದಂತೆಯೇ ಕೊಳಚೆ ನೀರು, ಹದಗೆಟ್ಟ ರಸ್ತೆಗಳು, ರಸ್ತೆಯಲ್ಲಿ ಕಲ್ಲುಗಳು ಅವರನ್ನು ಸ್ವಾಗತಿಸಿದವು. ಇದರಿಂದ ಬೇಸರಗೊಂಡ ಪ್ರವಾಸಿಗರು ಜಾಮಿಯಾ ಮಸೀದಿಯೊಂದನ್ನೇ ನೋಡಿ ಅಲ್ಲಿ ಕೆಲಹೊತ್ತು ಸಮಯ ಕಳೆದು ವಾಪಸ್ ತೆರಳಿದರು ಎಂದು ಮೂಲಗಳು ತಿಳಿಸಿವೆ.
ಮಸೀದಿ ನೋಡಿದ ಬಳಿಕ ಅಲ್ಲಿಂದ ಬೃಹತ್ ಗಾತ್ರದ ತೋಪು, ರಣಮಂಡಲ ಮತ್ತು ವಿದೇಶಿಯವರ ಬಜಾರ್‌ಗಳನ್ನು ತೋರಿಸಲು ವಿದೇಶಿ ಪ್ರವಾಸಿಗರೊಂದಿಗೆ ಬಂದಿದ್ದ ಬೆಂಗಳೂರು, ಹೈದರಾಬಾದ್ ಮೂಲದ ಪ್ರವಾಸಿಗರು ಯೋಜಿಸಿದ್ದರು. ಆದರೆ, ಈ ಸ್ಮಾರಕಗಳಿಗೆ ಹೋಗುವ ರಸ್ತೆ ಸಮರ್ಪಕವಾಗಿರಲಿಲ್ಲ. ಕೊಳಚೆ ನೀರು ಹರಿಯುತ್ತಿತ್ತು. ಇದರಿಂದಾಗಿ ಅಲ್ಲಿ ಹೆಚ್ಚು ಹೊತ್ತು ನಿಲ್ಲಲಿಲ್ಲ ಎಂದು ಗೊತ್ತಾಗಿದೆ.
ಕೆಕೆಆರ್‌ಡಿಬಿ ಅನುದಾನದಲ್ಲಿ ಕೋಟೆಯ ಒಳಗಡೆ ಲ್ಯಾಂಡ್‌ಸ್ಕೇಪಿಂಗ್, ಫುಟ್‌ಪಾತ್ ನಿರ್ಮಿಸಲು ಜಿಲ್ಲಾಡಳಿತ ಹಾಗೂ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗಳು ಯೋಜನೆ ರೂಪಿಸಿದ್ದವು. ಆದರೆ, ಕಾಮಗಾರಿ ಇನ್ನೂ ಅನುಷ್ಠಾನಗೊಂಡಿಲ್ಲ. ಹೀಗಾಗಿ, ವಿದೇಶಿ ಪ್ರವಾಸಿಗರು ಇಲ್ಲಿನ ಅವ್ಯವಸ್ಥೆ ನೋಡಿ ವಾಪಸ್ ತೆರಳುತ್ತಿದ್ದಾರೆ.
ಕೋಟೆ ಆವರಣದಲ್ಲಿ 282 ಕುಟುಂಬಗಳು ಅಕ್ರಮವಾಗಿ ವಾಸವಾಗಿದ್ದು, ಅವರನ್ನು ಅಲ್ಲಿಂದ ಸ್ಥಳಾಂತರಗೊಳಿಸುವಂತೆ ಹೈಕೋರ್ಟ್ ತೀರ್ಪು ಮಾಡಿದರೂ ಇನ್ನೂ ಆ ಕಾರ್ಯ ಪೂರ್ಣಗೊಂಡಿಲ್ಲ. ಹೀಗಾಗಿ, ಕೋಟೆಯ ಆವರಣದಲ್ಲಿ ನೈರ್ಮಲ್ಯ ಕಾಯ್ದುಕೊಳ್ಳುವುದು ಸವಾಲಾಗಿದೆ.
ಬಹಮನಿ ಕೋಟೆಯನ್ನು ಅಭಿವೃದ್ಧಿಗೊಳಿಸಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಜಿಲ್ಲಾಡಳಿತ ಅತೀವ ನಿರ್ಲಕ್ಷ್ಯ ತೋರಿಸುತ್ತಿವೆ. ಒಂದು ಬಾರಿ ವಿದೇಶಿ ಪ್ರವಾಸಿಗರು ವಾಪಸ್ ಹೋದರೆ ಮತ್ತೆ ನಾಲ್ಕೈದು ವರ್ಷ ಬರುವುದಿಲ್ಲಶಂಭುಲಿಂಗ ವಾಣಿ ಇತಿಹಾಸ ಸಂಶೋಧಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.