ADVERTISEMENT

ಕಲಬುರಗಿ: 11ನೇ ದಿನ ಅದ್ದೂರಿ ವಿದಾಯ

ನಗರದಲ್ಲಿನ 69 ಸಾರ್ವಜನಿಕ ಗಣಪತಿಗಳಿಗೆ ಬೀಳ್ಕೊಡುಗೆ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2025, 2:57 IST
Last Updated 7 ಸೆಪ್ಟೆಂಬರ್ 2025, 2:57 IST
ಕಲಬುರಗಿ ನಗರದ ಸರಾಫ್‌ ಬಜಾರ್‌ನಲ್ಲಿ ಶನಿವಾರ ರಾತ್ರಿ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಯಲ್ಲಿ ಲೈಟಿಂಗ್ಸ್‌ ಗಮನ ಸೆಳೆಯಿತು ಪ್ರಜಾವಾಣಿ ಚಿತ್ರಗಳು
ಕಲಬುರಗಿ ನಗರದ ಸರಾಫ್‌ ಬಜಾರ್‌ನಲ್ಲಿ ಶನಿವಾರ ರಾತ್ರಿ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಯಲ್ಲಿ ಲೈಟಿಂಗ್ಸ್‌ ಗಮನ ಸೆಳೆಯಿತು ಪ್ರಜಾವಾಣಿ ಚಿತ್ರಗಳು   

ಕಲಬುರಗಿ: ಹಣೆಗೆ ಗಣಪತಿಯ ರಿಬ್ಬನ್‌ ಕಟ್ಟಿಕೊಂಡು ಕನ್ನಡದ ಹಾಡುಗಳಿಗೆ ಕೋಲಾಟವಾಡುತ್ತಾ, ಆಗಾಗ ಗುಲಾಲ್‌ ಎರಚುತ್ತಾ ಮೆರವಣಿಗೆ ಸಾಗುತ್ತಿದ್ದರೆ ರಸ್ತೆಯ ಇಕ್ಕೆಲಗಳಲ್ಲಿ ಜನತೆ ನಿಂತು ನೋಡುತ್ತಿದ್ದರು. ಲೈಟಿಂಗ್ಸ್‌ ಮಿಂಚಿನಲ್ಲಿ ಅಪ್ಪನ ಹೆಗಲ ಮೇಲಿದ್ದ ಪುಟಾಣಿಗಳು ಅಲ್ಲಿಯೇ ಮೈ ಕುಣಿಸುತ್ತಿದ್ದರು. ಆಗಾಗ ಗಣಪತಿ ಬಪ್ಪಾ ಮೋರಯಾ ಎಂದು ಘೋಷಣೆ ಮೊಳಗಿಸುತ್ತಿದ್ದರು.

ನಗರದಲ್ಲಿ ಶನಿವಾರ ಸಂಜೆ 11ನೇ ದಿನದ ಗಣಪತಿ ವಿಸರ್ಜನೆ ವೇಳೆ ನಡೆದ ಮೆರವಣಿಗೆ ನೋಡುಗರ ಮನಸೂರೆಗೊಂಡಿತು. ಭೋವಿ ಗಲ್ಲಿ, ಪುಟಾಣಿ ಗಲ್ಲಿ, ಡಂಕಾ ಕ್ರಾಸ್‌, ಚಪ್ಪಲ್‌ ಬಜಾರ, ಮಿಲನ್‌ ಚೌಕ್‌, ಗಾಜಿಪುರ, ಮಕ್ತಂಪುರ, ಖಾದ್ರಿ ಚೌಕ್‌, ಶಂಕರಲಿಂಗ ಗುಡಿ ಹತ್ತಿರ, ಸ್ಯಾಂಡಲ್‌ ಗಲ್ಲಿ, ಸಾವಿತ್ರಿ ಗಲ್ಲಿ, ಸರಾಫ್‌ ಬಜಾರ್‌, ಚೌಕ್‌ ಪೊಲೀಸ್‌ ಠಾಣೆ ಎದುರು ಕಲಬುರಗಿ ಗಣೇಶ ಮಹಾಮಂಡಳಗಳು ಸ್ಥಾಪಿಸಿದ್ದ ಗಣೇಶ, ಸ್ಟೇಷನ್‌ ಬಜಾರ್‌ ಏರಿಯಾದ ವಿಠ್ಠಲ ಮಂದಿರ ಗಣೇಶ ಮಂಡಳಿಯ ಗಣೇಶ, ಗೋವಾ ಹೋಟೆಲ್‌ ಬಳಿಯ ಗಣೇಶ, ಸೂಪರ್‌ ಮಾರ್ಕೆಟ್‌ನ ಗಣೇಶ ಸೇರಿದಂತೆ 69 ಮೂರ್ತಿಗಳಿಗೆ ಶನಿವಾರ ಬೀಳ್ಕೊಡಲಾಯಿತು.

ಗಣೇಶನ ಪ್ರತಿಷ್ಠಾಪನಾ ಸ್ಥಳದಿಂದ ಸಂಜೆ ಸುಮಾರು 7 ಗಂಟೆಗೆ ಶುರುವಾದ ಮೆರವಣಿಗೆ ಶರಣಬಸವೇಶ್ವರ ಕೆರೆಯತ್ತ ಆಮೆಗತಿಯಲ್ಲಿ ಸಾಗಿತು. ಯುವಕರು ಮೆರವಣಿಗೆಯಲ್ಲಿ ವಾಹನಗಳಿಗೆ ಧ್ವನಿವರ್ಧಕಗಳನ್ನು ಅಳವಡಿಸಿಕೊಂಡು ಹಾಡುಗಳಿಗೆ ಹೆಜ್ಜೆ ಹಾಕುತ್ತಾ ಸಾಗಿದರು. ಹಿರಿಯರು, ಯುವತಿಯರು, ಪುಟಾಣಿಗಳೂ ಕುಣಿದು ಕುಪ್ಪಳಿಸಿ ಗಣೇಶನನ್ನು ಬೀಳ್ಕೊಟ್ಟರು. ಶನಿವಾರ ಸಂಜೆಯಿಂದಲೇ ಕೆರೆ ಮುಂದಿನ ರಸ್ತೆ ಜನಜಂಗುಳಿಯಿಂದ ತುಂಬಿತ್ತು. 

ADVERTISEMENT

ಕೆರೆ ಸುತ್ತ ಬಿಗಿ ಭದ್ರತೆ: ಗಣೇಶ ವಿಸರ್ಜನಾ ಸ್ಥಳವಾದ ಶರಣಬಸವೇಶ್ವರ ಕೆರೆ ಬಳಿ ನಿರ್ಮಿಸಿದ್ದ ಕಲ್ಯಾಣಿ ಸುತ್ತ ಪೊಲೀಸರು ಬಿಗಿಬಂದೋಬಸ್ತ್‌ ಏರ್ಪಡಿಸಿದ್ದರು. ಇನ್ನು ವಿಸರ್ಜನಾ ಸ್ಥಳದ ಎರಡೂ ದ್ವಾರಗಳಲ್ಲಿ ಪಾಲಿಕೆ ಸಿಬ್ಬಂದಿ ಕಾರ್ಯನಿರತರಾಗಿದ್ದರು. ಮನೆ, ಮನೆಗಳಲ್ಲಿ ಪ್ರತಿಷ್ಠಾಪಿಸಿದ್ದ ಸಣ್ಣ, ಸಣ್ಣ ಗಣೇಶ ಮೂರ್ತಿಗಳನ್ನು ಸಾರ್ವಜನಿಕರು ಬೈಕ್‌ ಮೇಲೆ ತರುತ್ತಿದ್ದಂತೆ ಗೇಟ್‌ ಹೊರಗಡೆಯೇ ಪಡೆಯುತ್ತಿದ್ದ ಪಾಲಿಕೆ ಸಿಬ್ಬಂದಿ ತಾವೇ ಕೆರೆಯ ಒಡಲಿಗೆ ಹಾಕುತ್ತಿದ್ದರು. ಇನ್ನು ದೊಡ್ಡ ದೊಡ್ಡ ಗಣೇಶ ಮೂರ್ತಿಗಳನ್ನು ಕ್ರೇನ್‌ ಸಹಾಯದಿಂದ ವಿಸರ್ಜಿಸಲಾಗುತ್ತಿತ್ತು. ಕೆರೆ ಮುಂಭಾಗದಲ್ಲಿಯೇ ಎಲ್‌ಇಡಿ ಪರದೆ ಅಳವಡಿಸಿ ಗಣೇಶ ವಿಸರ್ಜನೆಯ ದೃಶ್ಯ ಪ್ರಸಾರ ಮಾಡಲಾಗುತ್ತಿತ್ತು.

ಹಿಂದೂ ಮಹಾಗಣಪತಿಯತ್ತ ಎಲ್ಲರ ಚಿತ್ತ

ನಗರದಲ್ಲಿ 5 9 11 ಮತ್ತು 21ನೇ ದಿನದಂದು ಗಣಪತಿಗಳ ವಿಸರ್ಜನೆ ನಡೆಯುತ್ತದೆ. ಆದರೆ 11ನೇ ದಿನವೇ ಬಲು ಅದ್ದೂರಿಯಿಂದ ಗಣೇಶನ ವಿಸರ್ಜನೆ ನಡೆಯುತ್ತಿರುವುದು ವಾಡಿಕೆಯಾಗಿದೆ. ಮನೆಗಳಲ್ಲಿ ಪ್ರತಿಷ್ಠಾಪಿಸಿರುವ ಗಣೇಶನನ್ನೂ ಬಹುತೇಕರು 11ನೇ ದಿನವೇ ವಿಸರ್ಜಿಸುತ್ತಾರೆ. ಗೌರಿಯ ಹೊಸ ಮೂರ್ತಿ ತಂದಿದ್ದರೆ ಮಾತ್ರ ಹಳೆಯ ಮೂರ್ತಿಯನ್ನು ವಿಸರ್ಜಿಸುತ್ತಾರೆ. ಹೀಗಾಗಿ ಶನಿವಾರವೇ ಬಹುತೇಕ ಗಣೇಶ ಉತ್ಸವಕ್ಕೆ ತೆರೆ ಬಿದ್ದಿದೆ. ಇನ್ನು ಕೋಟೆ ಆವರಣದಲ್ಲಿ ಪ್ರತಿಷ್ಠಾಪಿಸಿರುವ ಹಿಂದೂ ಮಹಾಗಣಪತಿಯನ್ನು 21ನೇ ದಿನ ಬೀಳ್ಕೊಡಲಾಗುತ್ತದೆ. ಈ ಗಣಪತಿಯತ್ತ ಎಲ್ಲರ ಚಿತ್ತ ನೆಟ್ಟಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.