
ಕಲಬುರಗಿ: ಇಲ್ಲಿನ 54ನೇ ವಾರ್ಡ್‌ನಲ್ಲಿರುವ ಜಮಶೆಟ್ಟಿ ನಗರದ ಜನ ಸಮರ್ಪಕ ಕುಡಿಯುವ ನೀರು, ರಸ್ತೆ, ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮೂಲಸೌಕರ್ಯಗಳಿಂದ ವಂಚಿತರಾಗುವಂತಾಗಿದೆ.
ಕೋರಂಟಿ ಹನುಮಾನ ದೇವಸ್ಥಾನದಿಂದ ನಾಗನಳ್ಳಿ ರಸ್ತೆಯಲ್ಲಿ ಜಮಶೆಟ್ಟಿ ನಗರ ಇದೆ. ಬಡಾವಣೆ ಮಧ್ಯದ ರಸ್ತೆ ತಗ್ಗುದಿನ್ನೆಗಳಿಂದ ಕೂಡಿದೆ. ರಸ್ತೆ ಮಧ್ಯ ಒಳಚರಂಡಿ ವ್ಯವಸ್ಥೆ ಕಾಮಗಾರಿ ಮುಗಿದ ಮೇಲೆ ಹಾಕಿದ ಸಿಮೆಂಟ್ ಕಿತ್ತುಹೋಗಿದೆ. ರಸ್ತೆ ಬದಿ ಕೈಗೊಂಡ ಜಲಜೀವನ ಮಿಷನ್ ಪೈಪ್‌ಲೈನ್ ಕಾಮಗಾರಿಯಿಂದಲೂ ರಸ್ತೆ ಹಾಳಾಗಿದೆ.
ಬಡಾವಣೆಯ ಶಿವಲಿಂಗೇಶ್ವರ ಗುಡಿಯಿಂದ ರೇಣುಕಾ ನಿಲಯದವರೆಗೆ ಮಾತ್ರ ಸಿ.ಸಿ ರಸ್ತೆ ಮಾಡಲಾಗಿದೆ. ಬಾಕಿ ರಸ್ತೆಯ ಮೂರು ಪಟ್ಟು ಮಾರ್ಗವನ್ನು ಹಾಗೆಯೇ ಬಿಡಲಾಗಿದೆ. ಇದರಿಂದ ತಗ್ಗುದಿನ್ನೆಗಳ ರಸ್ತೆಯಲ್ಲಿಯೇ ಓಡಾಡುವಂತಾಗಿದೆ ಎಂಬುದು ನಿವಾಸಿಗಳ ದೂರು.
‘ಒಂದೂವರೆ ವರ್ಷದ ಹಿಂದೆ ಜೆಜೆಎಂ ಕಾಮಗಾರಿಗಾಗಿ ನೆಲ ಅಗೆದು ಪೈಪ್‌ಲೈನ್ ಹಾಕಿದರೂ ನೀರು ಬಂದಿಲ್ಲ. ಮನೆಯ ಎದುರು ಅಳವಡಿಸಿದ್ದ ನಳದ ತೊಟ್ಟಿಗಳು ಕಳ್ಳತನವಾಗಿವೆ. ಇನ್ನು ಮಹಾನಗರ ಪಾಲಿಕೆಯಿಂದ 4–5 ದಿನಕ್ಕೊಮ್ಮೆ ನೀರು ಬಿಡಲಾಗುತ್ತಿದೆ. ಕೆಲವೊಮ್ಮೆ ವಾರ ಆಗುತ್ತದೆ. ಅದಕ್ಕೂ ನಿರ್ದಿಷ್ಟ ಸಮಯ ಇಲ್ಲ’ ಎನ್ನುತ್ತಾರೆ ಬಡಾವಣೆಯ ಮಹಿಳೆಯರು.
ಮಳೆ ಬಂದರೆ ಕೆಸರುಮಯ: ‘ಬಡಾವಣೆಯ ರಸ್ತೆ ಮಳೆ ಬಂದರೆ ಕೆಸರುಮಯವಾಗುತ್ತದೆ. ಬೃಹತ್ ಹೊಂಡಗಳು ಬಿದ್ದಿರುತ್ತವೆ. ಮಹಿಳೆಯರು, ಮಕ್ಕಳು, ವೃದ್ಧರು ಓಡಾಡಲು ಆಗುವುದಿಲ್ಲ. ಕೆಲವರು ಕೆಸರಿನಲ್ಲಿ ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ’ ಎಂದು ಬಸಮ್ಮ ಶರಣು ಅರಳಗುಂಡಗಿ, ಜಯಮ್ಮ ರೇವಣಸಿದ್ದ ಸಿಂಪಿ ಸಮಸ್ಯೆ ಹೇಳಿಕೊಂಡರು.
‘ಒಳಚರಂಡಿಗಾಗಿ 4 ವರ್ಷಗಳ ಹಿಂದೆ ರಸ್ತೆ ಮಧ್ಯೆ ಅಗೆದು ಕಾಮಗಾರಿ ಮಾಡಲಾಗಿತ್ತು. ಬಳಿಕ ಅದನ್ನು ಸಿಮೆಂಟ್ ಕಾಂಕ್ರೀಟ್ ಹಾಕಿ ಮುಚ್ಚಲಾಗಿತ್ತು. ಕಳಪೆ ಕಾಮಗಾರಿ ಕಾರಣ ಕೆಲವೇ ತಿಂಗಳಲ್ಲಿ ಕಿತ್ತಿಕೊಂಡು ಹೋಗಿದೆ. ಮಳೆ ಬಂದರೆ ಬೈಕ್‌ಗಳು ಸಹ ಸಂಚರಿಸಲು ಆಗುವುದಿಲ್ಲ. ವೃದ್ಧರು ಮನೆಯಿಂದ ಬರಲು ಹೆದರಿಕೊಳ್ಳುತ್ತಾರೆ’ ಎಂದು ಹಿರಿಯರಾದ ರೇವಣಸಿದ್ದಪ್ಪ ಮೈಂದರ್ಗಿ ತಿಳಿಸಿದರು.
‘ನಾವು ವಾಸಿಸುವ ಮನೆ ಪಕ್ಕದ ರಸ್ತೆ ಮಣ್ಣಿನಿಂದ ಕೂಡಿದೆ. ಮುಖ್ಯರಸ್ತೆಯಿಂದ ಬಡಾವಣೆ ಮಧ್ಯದ ರಸ್ತೆಯವರೆಗೆ ಅಂದಾಜು 100 ಅಡಿ ಆಗುತ್ತದೆ. ಮುಂದೆ ಸಿಸಿ ರಸ್ತೆ ಕಾಮಗಾರಿ ಮಾಡುವಾಗ ಅದನ್ನು ಕೂಡ ಪರಿಗಣಿಸಬೇಕು’ ಎಂಬುದು ವೀರೇಶ ಪಾಟೀಲ ಅವರ ಒತ್ತಾಯ.
ರಸ್ತೆ ಪಕ್ಕದಲ್ಲಿ ಚರಂಡಿ ವ್ಯವಸ್ಥೆ ಅರ್ಧಕ್ಕೆ ಮಾಡಿ ಬಿಡಲಾಗಿದೆ. ಮುಖ್ಯವಾಗಿ ನಮಗೆ ಬಡಾವಣೆಯಲ್ಲಿ ಸಿಸಿ ರಸ್ತೆ ಮಾಡಿಕೊಡಬೇಕು. ಜೆಜೆಎಂ ನಲ್ಲಿಗಳಲ್ಲಿ ನಿರಂತರವಾಗಿ ನೀರು ಬರುವಂತಾಗಬೇಕುಜಗದೇವಿ ತಿಪ್ಪಣ್ಣ ಕೆಲ್ಲೂರ ನಿವಾಸಿ
ಪಾಲಿಕೆಯಿಂದ ನಿಯಮಿತವಾಗಿ ನೀರು ಬಿಡಲಾಗುತ್ತಿದ್ದು ವ್ಯತ್ಯಯವಾಗಿದ್ದಲ್ಲಿ ಮೇಲ್ವಿಚಾರಣೆ ಮಾಡಲಾಗುವುದು. ಜೆಜೆಎಂ ಕಾಮಗಾರಿ ಇಡೀ ಕಲಬುರಗಿ ಸಮಸ್ಯೆಯಾಗಿದ್ದು ಇನ್ನೂ 4 ತಿಂಗಳಲ್ಲಿ ಪೂರ್ಣವಾಗಬಹುದುಲಿಂಗರಾಜ ತಾರ್‌ಫೈಲ್ 54ನೇ ವಾರ್ಡ್ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.