ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ನಡೆದ ಘಟಿಕೋತ್ಸವದಲ್ಲಿ ಇಸ್ರೊ ಅಧ್ಯಕ್ಷ ವಿ.ನಾರಾಯಣನ್ ಅವರು ಅತಿ ಹೆಚ್ಚು ಚಿನ್ನದ ಪದಕ ಪಡೆದ ವಿದ್ಯಾರ್ಥಿಗೆ ನೀಡಲಾಗುವ ಎ.ಎಂ.ಪಠಾಣ್ ಚಿನ್ನದ ಪದಕವನ್ನು ಆಂಧ್ರಪ್ರದೇಶದ ಗುಂಟೂರಿನ ವಿದ್ಯಾರ್ಥಿ ಬುರ್ರಾ ಮಸ್ತಾನ್ ವೇದಸಾಯಿ ಸಾಹಿತ್ಯ ನಿತಿನ್ ಅವರಿಗೆ ಪ್ರದಾನ ಮಾಡಿದರು.
ಕಲಬುರಗಿ: ಬಾಹ್ಯಾಕಾಶವನ್ನು ಕ್ಷೇತ್ರವನ್ನು ಇತರ ಮುಂದುವರೆದ ದೇಶಗಳಿಗಿಂತ ಭಾರತ ತಡವಾಗಿ ಪ್ರವೇಶಿಸಿದರೂ ಇಂದು ಅಪ್ರತಿಮ ಸಾಧನೆ ಮಾಡಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಅಧ್ಯಕ್ಷ ವಿ. ನಾರಾಯಣನ್ ಅಭಿಪ್ರಾಯಪಟ್ಟರು.
ಆಳಂದ ತಾಲ್ಲೂಕಿನ ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಎಂಟನೇ ಘಟಿಕೋತ್ಸವದ ಅಂಗವಾಗಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಚಿನ್ನದ ಪದಕಗಳನ್ನು ಪ್ರದಾನ ಮಾಡಿ ಮಾತನಾಡಿದ ಅವರು, ‘ಬಾಹ್ಯಾಕಾಶಕ್ಕೆ ಉಪಗ್ರಹಗಳನ್ನು ರವಾನಿಸಲು ಅಗತ್ಯವಾದ ನೌಕೆಗಳನ್ನು ತಯಾರಿಸಲು ಬೇಕಿದ್ದ ತಂತ್ರಜ್ಞಾನ ನೀಡಲು ವಿದೇಶಗಳು ನಿರಾಕರಿಸಿದವು. ಆದರೂ ಎದೆಗುಂದದೆ ಕ್ರಯೋಜನಿಕ್ ಎಂಜಿನ್ ಅಭಿವೃದ್ಧಿಪಡಿಸಿದೆವು. ಇದರಿಂದಾಗಿ ಅತ್ಯಂತ ಕಡಿಮೆ ವೆಚ್ಚದಲ್ಲಿ ನೌಕೆಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಸಾಧ್ಯವಾಗಿದೆ’ ಎಂದರು.
‘1962ರಲ್ಲಿ ನಾವು ಬಾಹ್ಯಾಕಾಶ ಕಾರ್ಯಕ್ರಮವನ್ನು ಪ್ರಾರಂಭಿಸಿದಾಗ ರಷ್ಯಾದ ಯೂರಿ ಗಗಾರಿನ್ ಅವರು ಅದಾಗಲೇ ಬಾಹ್ಯಾಕಾಶಕ್ಕೆ ಹೋಗಿದ್ದರು. ನಾವು 1969ರಲ್ಲಿ ನೀಲ್ ಆರ್ಮ್‌ಸ್ಟ್ರಾಂಗ್ ಅವರನ್ನು ಚಂದ್ರನ ಮೇಲೆ ಇಳಿಸಿದೆವು. ನಾವು ಇತರೆ ಮುಂದುವರೆದ ದೇಶಗಳಿಗಿಂತ 60 ವರ್ಷ ಹಿಂದೆ ಇದ್ದೆವು. ಇದೀಗ ಪರಿಸ್ಥಿತಿ ಸಾಕಷ್ಟು ಸುಧಾರಿಸಿದೆ. ಚಂದ್ರಯಾನ–3 ಉಡಾವಣೆ ಯಶಸ್ವಿಯಾಗಿ ನಡೆದಿದೆ. ಚಂದ್ರನ ದಕ್ಷಿಣ ಭಾಗದಲ್ಲಿ ನೌಕೆಯನ್ನು ಇಳಿಸಿದ್ದು ಭಾರತ ಮಾತ್ರ’ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಿಯುಕೆ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ, ‘ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವು ಸಮಕಾಲೀನ ಅಗತ್ಯಕ್ಕೆ ಬೇಕಾದ ಕೋರ್ಸುಗಳನ್ನು ಪರಿಚಯಿಸಿದ್ದು, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದೆ. ಇತ್ತೀಚೆಗೆ ₹ 45 ಕೋಟಿ ವೆಚ್ಚದಲ್ಲಿ ವಿದ್ಯಾರ್ಥಿಗಳಿಗಾಗಿ ಅತ್ಯಾಧುನಿಕ ಪರಿಕರಗಳನ್ನು ಒಳಗೊಂಡ ಪ್ರಯೋಗಾಲಯ ಆರಂಭಿಸಲಾಗಿದೆ. ಕ್ಯಾಂಪಸ್ ಸಂದರ್ಶನಗಳನ್ನು ವಿವಿಧ ಕಂಪನಿಗಳು ನಡೆಸುತ್ತಿವೆ. ವಿದ್ಯಾರ್ಥಗಳಿಗೆ ಕ್ಯಾಂಪಸ್‌ನಲ್ಲಿ ವಾಸ್ತವ್ಯಕ್ಕೆ ಸುಸಜ್ಜಿತ ವಸತಿನಿಲಯಗಳನ್ನು ಆರಂಭಿಸಲಾಗಿದೆ. ಅತ್ಯುತ್ತಮ ಗ್ರಂಥಾಲಯ, ಡಿಜಿಟಲ್ ಗ್ರಂಥಾಲಯಗಳನ್ನು ಬಳಕೆ ಮಾಡಿಕೊಂಡು ಉತ್ತಮ ಶಿಕ್ಷಣವನ್ನು ಪಡೆಯಬೇಕು’ ಎಂದು ಸಲಹೆ ನೀಡಿದರು.
ಕುಲಸಚಿವ ಪ್ರೊ.ಆರ್.ಆರ್.ಬಿರಾದಾರ ಅವರು ಚಿನ್ನದ ಪದಕಗಳನ್ನು ಪಡೆದ ವಿದ್ಯಾರ್ಥಿಗಳ ಹೆಸರನ್ನು ಹೇಳಿದರು. ಪರೀಕ್ಷಾ ನಿಯಂತ್ರಣಾಧಿಕಾರಿ ಪ್ರೊ.ಕೋಟಾ ಸಾಯಿಕೃಷ್ಣ ಅತಿಥಿಗಳನ್ನು ಪರಿಚಯಿಸಿದರು.
ಸಂಗೀತ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಪ್ರೊ.ಜಯದೇವಿ ಜಂಗಮಶೆಟ್ಟಿ ಹಾಗೂ ತಂಡದವರು ರಾಷ್ಟ್ರಗೀತೆ, ನಾಡಗೀತೆ, ವಂದೇ ಮಾತರಂ ಗೀತೆಯನ್ನು ಪ್ರಸ್ತುತಪಡಿಸಿದರು.
ದಿನಾಲೂ ನನ್ನ ಮಗ 14 ಗಂಟೆ ಅಧ್ಯಯನ ಮಾಡುತ್ತಿದ್ದ. ಎಸ್ಸೆಸ್ಸೆಲ್ಸಿ ಪಿಯುಸಿಯಲ್ಲಿಯೂ ಟಾಪರ್ ಆಗಿದ್ದ. ನನ್ನ ಮೂರು ಮಕ್ಕಳೂ ಎಂ.ಟೆಕ್. ಓದುತ್ತಿದ್ದಾರೆ. ಇಬ್ಬರು ವಿಪ್ರೊ ಮತ್ತು ಎಚ್‌ಸಿಎಲ್ ಕಂಪನಿಯಲ್ಲಿ ಉದ್ಯೋಗದಲ್ಲಿದ್ದಾರೆಬುರ್ರಾ ಶ್ರೀನಿವಾಸ್ ಸಿಯುಕೆ ಟಾಪರ್ ಬುರ್ರಾ ಮಸ್ತಾನ್ ವೇದಸಾಯಿ ಸಾಹಿತ್ಯ ನಿತಿನ್ ಅವರ ತಂದೆ (ಗುಂಟೂರು)
ಕ್ಯಾಂಪಸ್‌ನಲ್ಲಿ ಬಿಗಿ ಭದ್ರತೆ
ಇತ್ತೀಚೆಗೆ ವಿದ್ಯಾರ್ಥಗಳ ಎರಡು ಗುಂಪಿನ ಮಧ್ಯೆ ಮಾರಾಮಾರಿ ನಡೆದು ಎಫ್‌ಐಆರ್ ದಾಖಲಾಗಿದ್ದರಿಂದ ಹಾಗೂ ದೇಶದ ಮಹತ್ವದ ಬಾಹ್ಯಾಕಾಶ ಯೋಜನೆಗಳ ಅನುಷ್ಠಾನದ ಹೊಣೆ ಹೊತ್ತಿರುವ ಇಸ್ರೊ ಅಧ್ಯಕ್ಷ ವಿ. ನಾರಾಯಣನ್ ಅವರು ಘಟಿಕೋತ್ಸವ ಭಾಷಣ ಮಾಡಬೇಕಿದ್ದರಿಂದ ಕ್ಯಾಂಪಸ್ ಆವರಣದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಮುಖ್ಯ ಗೇಟಿನ ಬಳಿ ಎಲ್ಲ ಕಾರುಗಳು ವಾಹನಗಳ ತಪಾಸಣೆ ಮಾಡಿ ಒಳಗೆ ಬಿಡಲಾಯಿತು. ಮುಂದೆ ಹೋಗುತ್ತಿದ್ದಂತೆ ಮತ್ತೊಂದು ನಾಕಾಬಂದಿ ಹಾಕಿ ವಿದ್ಯಾರ್ಥಿಗಳ ಹೆಸರು ಗುರುತಿನ ಚೀಟಿ ಪರಿಶೀಲಿಸಿ ಒಳಗೆ ಬಿಡಲಾಯಿತು. ಕುಲಪತಿ ಕುಲಸಚಿವರ ವಿರುದ್ಧ ಜಾತಿನಿಂದನೆ ಪ್ರಕರಣ ದಾಖಲಾಗಿರುವುದರಿಂದ ಘಟಿಕೋತ್ಸವದ ವೇದಿಕೆಯಲ್ಲಿ ಅವರಿಗೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿ ಸಂಶೋಧನಾ ವಿದ್ಯಾರ್ಥಿ ಪಿ.ನಂದಕುಮಾರ್ ವಿ.ವಿ. ಕುಲಾಧಿಪತಿಗಳೂ ಆದ ರಾಷ್ಟ್ರಪತಿಗಳಿಗೆ ದೂರು ನೀಡಿದ್ದರು. ಹೀಗಾಗಿ ಭದ್ರತೆಯನ್ನು ಹೆಚ್ಚಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.