ADVERTISEMENT

ಕಲಬುರಗಿ ಓಪನ್ ಮಹಿಳಾ ಟೆನಿಸ್‌ ಟೂರ್ನಿ: ಮರಿಯಾ ಸವಾಲು ಮೀರಿದ ಲಕ್ಷ್ಮಿ ಪ್ರಭಾ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2026, 5:04 IST
Last Updated 3 ಮಾರ್ಚ್ 2026, 5:04 IST
ಕಲಬುರಗಿಯ ಚಂದ್ರಶೇಖರ ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮಹಿಳೆಯರ ಐಟಿಎಫ್‌ ಟೆನಿಸ್‌ ಟೂರ್ನಿಯ ಮುಖ್ಯಸುತ್ತಿನ ಪಂದ್ಯಗಳ ಡ್ರಾವನ್ನು ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಬಿಡುಗಡೆಗೊಳಿಸಿದರು. ಜಿ.ಪಂ. ಸಿಇಒ ಭಂವರ್ ಸಿಂಗ್ ಮೀನಾ, ಮಹಾನಗರ ಪಾಲಿಕೆ ಆಯುಕ್ತ ಅವಿನಾಶ್ ಶಿಂದೆ, ಟೆನಿಸ್ ಆಟಗಾರ್ತಿಯರು ಹಾಜರಿದ್ದರು         ಪ್ರಜಾವಾಣಿ ಚಿತ್ರ
ಕಲಬುರಗಿಯ ಚಂದ್ರಶೇಖರ ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮಹಿಳೆಯರ ಐಟಿಎಫ್‌ ಟೆನಿಸ್‌ ಟೂರ್ನಿಯ ಮುಖ್ಯಸುತ್ತಿನ ಪಂದ್ಯಗಳ ಡ್ರಾವನ್ನು ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಬಿಡುಗಡೆಗೊಳಿಸಿದರು. ಜಿ.ಪಂ. ಸಿಇಒ ಭಂವರ್ ಸಿಂಗ್ ಮೀನಾ, ಮಹಾನಗರ ಪಾಲಿಕೆ ಆಯುಕ್ತ ಅವಿನಾಶ್ ಶಿಂದೆ, ಟೆನಿಸ್ ಆಟಗಾರ್ತಿಯರು ಹಾಜರಿದ್ದರು         ಪ್ರಜಾವಾಣಿ ಚಿತ್ರ   

ಕಲಬುರಗಿ: ಅತ್ಯಂತ ಜಿದ್ದಾಜಿದ್ದಿನ ಪಂದ್ಯದಲ್ಲಿ ಭಾರತದ ಎ. ಲಕ್ಷ್ಮಿ ಪ್ರಭಾ ಅವರು ರಷ್ಯಾದ ಮರಿಯಾ ಮಿಖೈಲೊವಾ ಅವರನ್ನು ಮಣಿಸಿ ಕಲಬುರಗಿ ಓಪನ್ ಐಟಿಎಫ್‌ ಮಹಿಳೆಯರ ಟೆನಿಸ್‌ ಟೂರ್ನಿಯ ಮುಖ್ಯಸುತ್ತಿಗೆ ಕಾಲಿಟ್ಟರು.

ಚಂದ್ರಶೇಖರ ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಅರ್ಹತಾ ಸುತ್ತಿನ ಸಿಂಗಲ್ಸ್ ವಿಭಾಗದ ಅಂತಿಮ ಪಂದ್ಯದಲ್ಲಿ ಲಕ್ಷ್ಮಿ 6–2, 3–6, 10–6ರಿಂದ ಎದುರಾಳಿ ವಿರುದ್ಧ ಗೆದ್ದು ಬೀಗಿದರು.

ಮೊದಲ ಸೆಟ್‌ನಲ್ಲಿ ಸುಲಭ ಜಯ ಸಂಪಾದಿಸಿದ ಲಕ್ಷ್ಮಿ ಅವರನ್ನು ರಷ್ಯಾದ ಆಟಗಾರ್ತಿ ಎರಡನೇ ಸೆಟ್‌ನಲ್ಲಿ ಕಾಡಿದರು. ಆದರೆ, ಮೂರನೇ ಸೆಟ್‌ನಲ್ಲಿ ಚುರುಕಿನ ಪಾದಚಲನೆ ಮತ್ತು ಡ್ರಾಪ್‌ಶಾಟ್‌ಗಳಿಂದ ಗಮನಸೆಳೆದ ಲಕ್ಷ್ಮಿ ಟೈಬ್ರೇಕರ್‌ವರೆಗೆ ಸಾಗಿದ ಸೆಣಸಾಟದಲ್ಲಿ ವಿಜಯದ ನಗೆ ಚೆಲ್ಲಿದರು.

ADVERTISEMENT

ಮುಖ್ಯ ಸುತ್ತಿನ ಮೊದಲ ಪಂದ್ಯದಲ್ಲಿ ಲಕ್ಷ್ಮಿ ಅವರು ರಷ್ಯಾದ ಇನ್ನೊಬ್ಬ ಆಟಗಾರ್ತಿ ಸೋಫಿಯಾ ಮಾರ್ಟಿನೊವಾ ಅವರನ್ನು ಎದುರಿಸುವರು.

ದಿನದ ಮತ್ತೊಂದು ಮಹತ್ವದ ಪಂದ್ಯದಲ್ಲಿ ಕರ್ನಾಟಕದ ಸ್ನಿಗ್ಧಾ ಕಾಂತಾ 4–6, 3–6ರಿಂದ ಸಂದೀಪ್ತಿ ಸಿಂಗ್ ರಾವ್‌ ವಿರುದ್ಧ ಪರಾಭವಗೊಂಡರು. ಆರಂಭದಲ್ಲಿ ಅಲ್ಪ ಪ್ರತಿರೋಧ ತೋರಿದ ಸ್ನಿಗ್ಧಾ ಆಟ ಮುಂದುವರಿದಂತೆ ಪಾಯಿಂಟ್‌ ಕಳೆದುಕೊಳ್ಳುತ್ತಾ ಹತಾಶರಾದಂತೆ ಕಂಡುಬಂದರು. ರ‍್ಯಾಕೆಟ್‌ ನೆಲಕ್ಕೆ ಕುಟ್ಟಿ ನಿರಾಶೆ ವ್ಯಕ್ತಪಡಿಸಿದರು. ಒತ್ತಡಕ್ಕೆ ಒಳಗಾಗದ ಸಂದೀಪ್ತಿ ಜಯ ತಮ್ಮದಾಗಿಸಿಕೊಂಡರು.

ದಿನದ ಅರ್ಹತಾ ಸುತ್ತಿನ ಇನ್ನುಳಿದ ಅಂತಿಮ ಪಂದ್ಯಗಳಲ್ಲಿ ಸಿಂಗಪುರದ ಇವಾ ಮರಿಯಾ ಡೆಸ್ವಿನ್ಸ್ 6–0, 6–1ರಿಂದ ಭಾರತದ ಆಹಾನ್ ಆಹಾನ್ ಎದುರು, ರಷ್ಯಾದ ವಲೇರಿಯಾ ಸುವಿನಿಕ್ 6–4,6–1ರಿಂದ ಭಾರತದ ಸೌಮ್ಯಾ ರೊಂದೆ ಎದುರು, ಭಾರತದ ಕಶೀಶ್ ಭಾಟಿಯಾ 7–6 (4)–6–0ರಿಂದ ಭಾರತದ ಮಹಿಕಾ ಖನ್ನಾ ಮೇಲೆ, ಐಶ್ವರ್ಯಾ ಜಾಧವ್ 6–3, 6–3ರಿಂದ ಶ್ರೀಮಾನ್ಯ ರೆಡ್ಡಿ ಅನುಗೊಂಡ ಎದುರು ಜಯ ಸಾಧಿಸಿದರು.

ಭಾರತದ ಯಶಸ್ವಿನಿ ಪನ್ವಾರ್ 4–6, 2–6ರಿಂದ ರಷ್ಯಾದ ಆ್ಯನಾ ಸೆದಿಶೆವಾ ಎದುರು ಸೋಲನುಭವಿಸಿದರು. ಭಾರತದ ಆಟಗಾರ್ತಿಯರೇ ಸ್ಪರ್ಧಿಸಿದ್ದ ಮತ್ತೊಂದು ಪಂದ್ಯದಲ್ಲಿ ಲಕ್ಷ್ಮೀಶ್ರೀ ದಂಡು 7–5, 3–6, 14–12ರಿಂದ ಬೇಳಾ ಥಮಾಂಕರ್ ಅವರನ್ನು ಮಣಿಸಿ ಮುನ್ನಡೆದರು.

ಮುಖ್ಯಸುತ್ತಿನ ಸಿಂಗಲ್ಸ್ ಹಾಗೂ ಡಬಲ್ಸ್ ಪಂದ್ಯಗಳು ಮಂಗಳವಾರ ಆರಂಭವಾಗಲಿವೆ.

‘ಸೌಲಭ್ಯ ಉಪಯೋಗಿಸಿ ಸಾಧನೆ ಮಾಡಿ’

ಈ ಐಟಿಎಫ್‌ ಟೂರ್ನಿಯಲ್ಲಿ 11 ದೇಶಗಳ ಆಟಗಾರ್ತಿಯರು ಭಾಗವಹಿಸಿದ್ದು ಖುಷಿಯ ಸಂಗತಿಯಾಗಿದೆ. ನಮ್ಮ ಕಲಬುರಗಿ ಜಿಲ್ಲೆಯಲ್ಲಿರುವಷ್ಟು ಸೌಲಭ್ಯಗಳು ಬೇರೆ ಜಿಲ್ಲೆಗಳಲ್ಲಿ ಇಲ್ಲ. ಅವುಗಳನ್ನು ಸದುಪಯೋಗ ಮಾಡಿಕೊಂಡು ಉತ್ತಮ ಸಾಧನೆ ತೋರಬೇಕು ಎಂದು ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಕಿವಿಮಾತು ಹೇಳಿದರು. ಚಂದ್ರಶೇಖರ ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮಹಿಳೆಯರ ಐಟಿಎಫ್‌ ಟೆನಿಸ್‌ ಟೂರ್ನಿಯ ಮುಖ್ಯಸುತ್ತಿನ ಪಂದ್ಯಗಳ ಡ್ರಾವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಈಗ ಬಿಸಿಲು ಬಹಳಷ್ಟಿದೆ. ಸಾಧನೆಗೆ ಯಾವುದೂ ಅಡ್ಡಿಯಲ್ಲ. ನಿಮ್ಮ ಆಟದ ಗುಣಮಟ್ಟವನ್ನು ವೃದ್ಧಿಸಿಕೊಳ್ಳಿ. ಏನೇ ತೊಂದರೆಯಾದರೂ ಗಮನಕ್ಕೆ ತನ್ನಿ ಎಂದು ಆಟಗಾರ್ತಿಯರಿಗೆ ತಿಳಿಸಿದರು. ಜಿಲ್ಲಾ ಪಂಚಾಯಿತಿ ಸಿಇಒ ಭಂವರ್ ಸಿಂಗ್ ಮೀನಾ ಮಹಾನಗರ ಪಾಲಿಕೆ ಆಯುಕ್ತ ಅವಿನಾಶ್ ಶಿಂದೆ ಕೃಷಿ ಜಂಟಿ ನಿರ್ದೇಶಕ ಸಮದ್‌ ಪಟೇಲ್‌ ಮತ್ತು ಟೆನಿಸ್ ಆಟಗಾರ್ತಿಯರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.